3 ವರ್ಷ ಖಾಸಗಿ ಶಾಲೆಗೆ ಹೊಸ ಲೈಸನ್ಸ್‌ ಇಲ್ಲ?

Published : Jun 13, 2018, 07:26 AM IST
3 ವರ್ಷ ಖಾಸಗಿ ಶಾಲೆಗೆ  ಹೊಸ ಲೈಸನ್ಸ್‌ ಇಲ್ಲ?

ಸಾರಾಂಶ

ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲು ನಿರ್ಧರಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಮುಂದಿನ ಮೂರು ವರ್ಷಗಳ ಕಾಲ ನೂತನ ಶಾಲೆಗಳಿಗೆ ಅನುಮತಿ ನೀಡದಿರುವ ಚಿಂತನೆ ಹೊಂದಿದೆ. ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕುಸಿಯುತ್ತಿರುವುದನ್ನು ಪರಿಗಣಿಸಿರುವ ಇಲಾಖೆ, ಬೀದಿಗೊಂದು ಶಾಲೆಗಳು ಹುಟ್ಟಿಕೊಳ್ಳುತ್ತಿರುವುದನ್ನು ನಿಯಂತ್ರಣ ಮಾಡುವ ಆಲೋಚನೆಯಲ್ಲಿದೆ.

ಬೆಂಗಳೂರು (ಜೂ. 13):  ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲು ನಿರ್ಧರಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಮುಂದಿನ ಮೂರು ವರ್ಷಗಳ ಕಾಲ ನೂತನ ಶಾಲೆಗಳಿಗೆ ಅನುಮತಿ ನೀಡದಿರುವ ಚಿಂತನೆ ಹೊಂದಿದೆ.

ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಕುಸಿಯುತ್ತಿರುವುದನ್ನು ಪರಿಗಣಿಸಿರುವ ಇಲಾಖೆ, ಬೀದಿಗೊಂದು ಶಾಲೆಗಳು ಹುಟ್ಟಿಕೊಳ್ಳುತ್ತಿರುವುದನ್ನು ನಿಯಂತ್ರಣ ಮಾಡುವ ಆಲೋಚನೆಯಲ್ಲಿದೆ.

ಪ್ರಸಕ್ತ ವರ್ಷ ಹೊಸ ಖಾಸಗಿ ಶಾಲೆಗಳ ಆರಂಭಿಸುವುದಕ್ಕಾಗಿ 2429 ಅರ್ಜಿಗಳು ದಾಖಲಾಗಿವೆ. ಇವುಗಳ ಪೈಕಿ ಬೆಂಗಳೂರು ದಕ್ಷಿಣ ಜಿಲ್ಲೆಯಿಂದ 369 ಮತ್ತು ಬೆಂಗಳೂರು ಉತ್ತರ ಜಿಲ್ಲೆಯಿಂದ 216 ಅರ್ಜಿಗಳು ದಾಖಲಾಗಿದ್ದು, ಬೆಂಗಳೂರು ನಗರದಲ್ಲಿಯೇ ಹೆಚ್ಚು ಅರ್ಜಿಗಳು ದಾಖಲಾಗಿವೆ. ಅರ್ಜಿ ಸಲ್ಲಿಸಿರುವ ಶಿಕ್ಷಣ ಸಂಸ್ಥೆಗಳು ಹೊಸ ಶಾಲೆ ಆರಂಭಿಸಲು ತುದಿಗಾಲಲ್ಲಿ ನಿಂತಿದೆ. ಇಂತಹ ಸಮಯದಲ್ಲಿ ಹೊಸ ಶಾಲೆಗಳ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿರುವುದು ಕುತೂಹಲ ಕೆರಳಿಸಿದೆ. ಮೂಲಗಳ ಪ್ರಕಾರ ಶಿಕ್ಷಣ ಇಲಾಖೆಯು ಹೊಸ ಶಾಲೆಗಳ ಆರಂಭದಿಂದ ಹಿಂದೆ ಸರಿಯಲಿದೆ ಎಂದು ಮೂಲಗಳು ತಿಳಿಸಿವೆ.

ಖಾಸಗಿ ಶಾಲೆಗಳಿಗೆ ಆರ್‌ಟಿಇ ಮೂಲಕ ಸರ್ಕಾರವೇ ಆರ್ಥಿಕವಾಗಿ ಹಿಂದುಳಿದ ಶೇ.25ರಷ್ಟುಮಕ್ಕಳನ್ನು ಸೇರಿಸುತ್ತಿದೆ. ಪರೋಕ್ಷವಾಗಿ ಆರ್‌ಟಿಇ ಕಾಯ್ದೆಯೇ ಸರ್ಕಾರಿ ಶಾಲೆಗಳಲ್ಲಿರುವ ಮಕ್ಕಳ ಸಂಖ್ಯೆ ಕುಸಿತಕ್ಕೆ ಕಾರಣವಾಗುತ್ತಿದೆ. ಹೀಗಾಗಿ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಹೊಡೆತ ಬೀಳುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್‌.ಮಹೇಶ್‌, ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದಕ್ಕೂ ಮೊದಲು ಯೋಚಿಸಿ ಒಪ್ಪಿಗೆ ನೀಡಬೇಕಾಗುತ್ತದೆ. ಈ ಸಂಬಂಧ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯದಲ್ಲಿರುವ 176 ಪಬ್ಲಿಕ್‌ ಶಾಲೆಗಳಲ್ಲಿಯೇ ಕಲಿಕಾ ಗುಣಮಟ್ಟಕಾಪಾಡಿಕೊಂಡು ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ನೀಡಿದರೆ, ಸಹಜವಾಗಿಯೇ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.

ಖಾಸಗಿ ಶಾಲೆಗಳ ಪ್ರವೇಶ ಶುಲ್ಕವನ್ನೂ ನಿಯಂತ್ರಿಸುವ ಕುರಿತು ಆಸಕ್ತಿ ವಹಿಸಿರುವ ಸಚಿವರು, ಶುಲ್ಕವು ನ್ಯಾಯಸಮ್ಮತ ಮತ್ತು ಕಾನೂನುಬದ್ಧವಾಗಿರಬೇಕು. ಹೀಗಾಗಿ, ಸರ್ಕಾರವು ಶುಲ್ಕ ನಿಯಂತ್ರಣಕ್ಕಾಗಿ ಈಗಾಗಲೇ ಪ್ರಕಟಿಸಿರುವ ಕರಡು ನಿಯಮಗಳ ಬಗ್ಗೆ ಮಾಹಿತಿ ತಿಳಿದಿದ್ದೇನೆ. ಪ್ರತಿಯೊಂದು ಶಾಲೆಗಳು ಕೂಡ ಅದನ್ನು ಅನುಸರಿಸುವಂತೆ ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.

ಹಿಂದಿನ ಶಿಕ್ಷಣ ಸಚಿವರಾಗಿದ್ದ ತನ್ವೀರ್‌ ಸೇಠ್‌ ಕೂಡ ಮುಂದಿನ ಐದು ವರ್ಷಗಳ ಕಾಲ ಹೊಸದಾಗಿ ಆರಂಭವಾಗುವ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದಿಲ್ಲವೆಂದು ಮೊದಲು ಘೋಷಿಸಿದ್ದರು. ಬಳಿಕ, ಕೊನೇ ಗಳಿಗೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ಅನುಮತಿ ನೀಡಲು ಒಪ್ಪಿಗೆ ಸೂಚಿಸಿದ್ದರು ಎಂದು ಹೇಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಿ: ಸಿಎಂಗೆ ಮಹಿಳಾ ಆಯೋಗ ಮನವಿ
ಬಿಪಿಎಲ್ ಕಾರ್ಡ್‌ನ 2.95 ಲಕ್ಷ ಅರ್ಜಿ ವಿಲೇವಾರಿ: ಮುನಿಯಪ್ಪ