
ಬೆಂಗಳೂರು (ಡಿ. 25): ಮಾಧ್ಯಮಗಳಿಂದ ಟ್ರಬಲ್ ಶೂಟರ್, ವೀರ ಕೇಸರಿ ಎಂದೆಲ್ಲ ಕರೆಸಿಕೊಳ್ಳುವ ಡಿ ಕೆ ಶಿ ದಿಲ್ಲಿ ಕಾಂಗ್ರೆಸ್ ದರ್ಬಾರಿನ ಆಟದಲ್ಲಿ ಮಾತ್ರ ಇನ್ನೂ ಪಳಗಬೇಕು. ಸಂಪುಟ ವಿಸ್ತರಣೆಗೆ ಎರಡು ದಿನ ಮುಂಚೆ ಬಂದು ದಿಲ್ಲಿಯಲ್ಲಿ ಠಿಕಾಣಿ ಹೂಡಿದ್ದ ಅವರನ್ನು ವಿಸ್ತರಣೆಯ ಮಾತುಕತೆಯ ದಿನ ಯಾರೂ ಕರೆಯಲೇ ಇಲ್ಲ.
ಅಷ್ಟೇ ಅಲ್ಲ, ಶಿವಕುಮಾರ್ ಅಭಿಪ್ರಾಯಗಳನ್ನು ವೇಣುಗೋಪಾಲ್ ತೆಗೆದುಕೊಂಡರೂ ಅವರು ಹೇಳಿದಂತೆ ಬಳ್ಳಾರಿ ಜಿಲ್ಲೆಯ ಹೆಸರುಗಳನ್ನು ಪರಿಗಣಿಸಲಿಲ್ಲ. ಅತ್ತ ರಾಹುಲ್ ಮನೆಯಲ್ಲಿ ಕರ್ನಾಟಕದ ಸಭೆ ನಡೆಯುತ್ತಿದ್ದರೆ, ಇತ್ತ ಕರ್ನಾಟಕ ಭವನದ ಮೂರನೇ ಮಹಡಿಯಲ್ಲಿ ಆಪ್ತರೊಂದಿಗೆ ಹರಟುತ್ತಾ ಕುಳಿತಿದ್ದ ಡಿ ಕೆ ಶಿ ‘ನನ್ನದು ಒಂಥರಾ ತಪ್ಪು ಇಮೇಜ್ ಪ್ರೊಜೆಕ್ಟ್ ಆಗಿಬಿಟ್ಟಿದೆ. ನಾನು ಇರೋದೇ ಬೇರೆ, ನನ್ನನ್ನು ತೋರಿಸೋದೇ ಬೇರೆ’ ಎಂದು ಹೇಳುತ್ತಿದ್ದರು. ‘ದೇವೇಗೌಡರ ಕುಟುಂಬದ ವಿರುದ್ಧ 85 ರಿಂದ ಒಬ್ಬನೇ ಬಡಿದಾಡಿದೆ. ಏನ್ ಸಿಕ್ತು? ಈಗ ಮೈತ್ರಿ ಸರ್ಕಾರ ಅನಿವಾರ್ಯ ಎಂದಾಗ ನನ್ನ ಬಳಿ ಬೇರೆ ದಾರಿ ಏನಿತ್ತು? ಅದಕ್ಕೇ ಹಳೇದು ಮರೆತು ಸಹಕಾರ ಕೊಟ್ಟಿದ್ದೇನೆ. ಕೆಲವರಿಗೆ ಖುಷಿಯಿದೆ, ನಮ್ಮ ಪಕ್ಷದ ಅನೇಕರಿಗೆ ಕೋಪವಿದೆ. ಆದರೆ ನನ್ನೊಬ್ಬನ ಕೈಯಲ್ಲಿ ಏನಿದೆ?’ ಎಂದು ಹೇಳಿಕೊಳ್ಳುತ್ತಿದ್ದರು. ಹೋದ ವರ್ಷ ಪುಣ್ಯಾತ್ಮ ರಾಹುಲ್ ‘ಹೋಗು ಅಧ್ಯಕ್ಷ ಆಗು’ ಎಂದರು.
ನಾನು ಒಂದು ತಿಂಗಳು ತಡೀರಿ ಎಂದೆ. ಅಷ್ಟರಲ್ಲಿ ನನ್ನ ಮಿತ್ರರೇ ದಿಲ್ಲಿಗೆ ಬಂದು ‘ಯಾರನ್ನಾದರೂ ಮಾಡಿ, ಆ ಶಿವಕುಮಾರ ಬೇಡ’ ಎಂದರು. ‘ನಾನೊಬ್ಬ ಮಿಸ್ಟೇಕನ್ ಐಡೆಂಟಿಟಿ’ ಎಂದು ತುಂಬಾ ಸಲ ಅನ್ನಿಸುತ್ತದೆ ಎಂದು ಮನಸ್ಸಿಗೆ ಬಂದ ಭಾವನೆ ಗಳನ್ನು ನೋವಿನಿಂದ ಹೊರಹಾಕುತ್ತಿದ್ದರು. ಕೆಲವೊಮ್ಮೆ ಯಾರು ಹೆಚ್ಚು ಮೆರೆಯುವಂತೆ ಕಾಣುತ್ತಾರೋ ಅವರಲ್ಲೇ ಹೆಚ್ಚು ನೋವು ಮಡುಗಟ್ಟಿರುತ್ತದೆ.
-ಪ್ರಶಾಂತ್ ನಾತು, ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.