
ಸೋಲ್(ಸೆ.04): ಅಂತಾರಾಷ್ಟ್ರೀಯ ಸಮುದಾಯದ ಎಚ್ಚರಿಕೆ, ಬೆದರಿಕೆಗಳನ್ನು ಮತ್ತೊಮ್ಮೆ ಉಪೇಕ್ಷಿಸಿರುವ ಉತ್ತರ ಕೊರಿಯಾ, ಆರನೇ ಬಾರಿಗೆ ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ಶುಕ್ರವಾರ ವಿಶ್ವಸಮುದಾಯಕ್ಕೆ ಸಡ್ಡು ಹೊಡೆದಿದೆ. ಅಲ್ಲದೆ ತಾನು ನಡೆಸಿದ್ದು ಹೈಡ್ರೋಜನ್ ಬಾಂಬ್ ಪರೀಕ್ಷೆಯಾಗಿದ್ದು, ಅದು ಯಶಸ್ವಿಯಾಗಿದೆ ಎಂದು ಘೋಷಿಸಿದೆ.
ಅಣ್ವಸ್ತ್ರ ಪರೀಕ್ಷೆ ನಡೆಸಿದ ಬಳಿಕ ದಾಖಲಾಗಿರುವ ಭೂಕಂಪನದ ತೀವ್ರತೆ ಗಮನಿಸಿದರೆ, ಉತ್ತರ ಕೊರಿಯಾ ಶಕ್ತಿಶಾಲಿ ಬಾಂಬ್ ಸ್ಫೋಟಿಸಿರುವುದು ಖಚಿತವಾಗಿದೆ. ಆದರೆ ಅದು ಹೈಡ್ರೋಜನ್ ಬಾಂಬ್ ಹೌದೇ ಅಲ್ಲವೇ ಎಂಬುದನ್ನು ಜಾಗತಿಕ ತಜ್ಞರು ದೃಢಪಡಿಸಿಲ್ಲ. ದಕ್ಷಿಣ ಕೊರಿಯಾದ ಹವಾಮಾನ ಸಂಸ್ಥೆಯ ಪ್ರಕಾರ, ‘ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆಯಿಂದ 5.6 ತೀವ್ರತೆಯ ಕಂಪನ ಉಂಟಾಗಿದ್ದು, 50ರಿಂದ 60 ಕಿಲೋಟನ್'ನಷ್ಟು ಶಕ್ತಿ ಹೊರಹೊಮ್ಮಿದೆ. ಇದು 2016ರ ಸೆಪ್ಟೆಂಬರ್‌ನಲ್ಲಿ ಉತ್ತರ ಕೊರಿಯಾ ನಡೆಸಿದ್ದ ಐದನೇ ಪರೀಕ್ಷೆ ವೇಳೆ ಹೊರಬಂದಿದ್ದ ಶಕ್ತಿಗಿಂತ ಐದರಿಂದ ಆರು ಪಟ್ಟು ಅಧಿಕ ಪ್ರಮಾಣದ್ದಾಗಿದೆ.’ ಇದರಿಂದಾಗಿ ಅಮೆರಿಕ ತಲುಪಬಲ್ಲ ಅಣ್ವಸ್ತ್ರ ಕ್ಷಿಪಣಿ ಅಭಿವೃದ್ಧಿ ಪಡಿಸುವ ಕನಸು ಕಾಣುತ್ತಿರುವ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‌ಗೆ ಆ ನಿಟ್ಟಿನಲ್ಲಿ ಮಹತ್ವದ ಯಶಸ್ಸು ಸಿಕ್ಕಂತಾಗಿದೆ ಎಂದು ಹೇಳಲಾಗಿದೆ.
ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ದೂರವಾಣಿ ಮಾತುಕತೆ ನಡೆಸಿದ್ದು, ಉತ್ತರ ಕೊರಿಯಾ ಮೇಲೆ ಗರಿಷ್ಠ ಒತ್ತಡ ಹೇರುವ ಬಗ್ಗೆ ಪ್ರಯತ್ನಿಸುವ ಕುರಿತು ಚರ್ಚೆ ನಡೆದಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ಉತ್ತರ ಕೊರಿಯಾ ಒಂದು ದುಷ್ಟ ದೇಶ. ಆ ದೇಶಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಉತ್ತರ ಕೊರಿಯಾ ವರ್ತನೆಗೆ ರಷ್ಯಾ ಅಸಮಾಧಾನ ವ್ಯಕ್ತಪಡಿಸಿದೆ. ಈ ನಡುವೆ ಉತ್ತರ ಕೊರಿಯಾ ನಡೆಸಿರುವ ಹೈಡ್ರೋಜನ್ ಬಾಂಬ್ ದಾಳಿಯಿಂದ ಉಂಟಾಗಿರಬಹುದಾದ ವಿಕಿರಣಗಳ ಪರಿಣಾಮವನ್ನು ಅಳೆಯಲು ಚೀನಾ ಕೂಡಾ ಮುಂದಾಗಿದೆ. ಜೊತೆಗೆ ಅದು ದಾಳಿಯನ್ನು ಖಂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.