
ಬೀಜಿಂಗ್(ಸೆ.04): ಕೇಂದ್ರ ಸಂಪುಟ ಪುನಾರಚನೆ ಬಳಿಕ ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಚೀನಾದ ಬಂದರು ನಗರಿ ಕ್ಷಿಯಾಮೆನ್‍ನಲ್ಲಿ ಇಂದಿನಿಂದ 9ನೇ ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಮೋದಿ ಕೈಗೊಂಡ ಈ ವಿದೇಶಿ ಪ್ರವಾಸ ಫಲಪ್ರದದ ನಡುವೆ ಹಿತಶತ್ರು ಚೀನಾಗೆ ತೆರಳಿರುವುದು ಕುತೂಹಲ ಮೂಡಿಸಿದೆ.
ಭಾರತ - ಚೀನಾ ದ್ವಿಪಕ್ಷೀಯ ಮಾತುಕತೆ: ಉಗ್ರ ನಿಗ್ರಹಕ್ಕೆ ಚೀನಾ ಮೇಲೆ ಒತ್ತಡ?
ಇನ್ನು ಸಕಾರಾತ್ಮಕ ಫಲಿತಾಂಶಗಳ ನಿರೀಕ್ಷೆಯೊಂದಿಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಮೋದಿ ಚೀನಾ ಅಧ್ಯಕ್ಷರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಬಹುಮುಖ್ಯವಾಗಿ ಗಡಿ ವಿವಾದದ ಚರ್ಚೆ ನಡೆಸಲಿದ್ದಾರೆ. ಅಲ್ಲದೆ ಉಗ್ರ ನಿಗ್ರಹಕ್ಕೆ ಚೀನಾ ಮೇಲೆ ಮೋದಿ ಒತ್ತಡ ಹೇರುವ ಸಾಧ್ಯತೆ ಇದೆ.
ಇನ್ನೂ ಬ್ರಿಕ್ಸ್ ಶೃಂಗಸಭೆಯಲ್ಲಿ ಉತ್ತರ ಕೊರಿಯಾ ನಡೆಸಿರುವ ಹೈಡ್ರೋಜನ್ ಬಾಂಬ್ ಪರೀಕ್ಷೆ ಪ್ರತಿಧ್ವನಿಸುವ ಸಾಧ್ಯತೆಯಿದೆ. ಅಂತರಾಷ್ಟ್ರೀಯ ನಿಯಮ ಉಲ್ಲಂಘಿಸಿ ಉತ್ತರ ಕೊರಿಯಾ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿರೋದ್ರಿಂದ ಚರ್ಚೆಗೆ ಬರುವ ಸಾಧ್ಯತೆಯಿದೆ.
ಚೀನಾದಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ಮೋದಿ ಮಯನ್ಮಾರ್ಗೆ ಪ್ರವಾಸ ಬೆಳೆಸಲಿದ್ದಾರೆ. ಭಾರತದ ಸಹಕಾರಕ್ಕಾಗಿ ಮಯನ್ಮಾರ್ ದೇಶ ಹಾತೊರೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಪ್ರವಾಸ ಪ್ರಾಮುಖ್ಯತೆ ಪಡೆದುಕೊಂಡಿದೆ. ಎರಡು ದಿನಗಳ ಮಯನ್ಮಾರ್ ಭೇಟಿಯಲ್ಲಿ ಉನ್ನತ ನಾಯಕರ ಜೊತೆ ಮೋದಿ ಚರ್ಚೆ ನಡೆಸಲಿದ್ದಾರೆ.
ಒಟ್ನಲ್ಲಿ ಡೋಕ್ಲಾಂ ಪ್ರಸ್ಥಭೂಮಿಯಲ್ಲಿ 73 ದಿನಗಳ ಸೇನಾ ಸಂಘರ್ಷ ಅಂತ್ಯಗೊಳಿಸಲು ಭಾರತ-ಚೀನಾ ಮಹತ್ವದ ನಿರ್ಧಾರ ಕೈಗೊಂಡ ಬೆನ್ನಲ್ಲೇ ಮೋದಿ ಚೀನಾ ಭೇಟಿ ಕುತೂಹಲ ಕೆರಳಿಸಿದೆ. ಈ ಮೂಲಕವಾದ್ರೂ ಭಯೋತ್ಪಾದಕ ಕೃತ್ಯಕ್ಕೆ ತಿಲಾಂಜಲಿಯಾಗುತ್ತಾ? ಎರಡೂ ದೇಶಗಳ ನಡುವೆ ಬಾಂಧವ್ಯ ಬೆಸೆದುಕೊಳ್ಳುತ್ತಾ? ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.