
ನವದೆಹಲಿ(ಮೇ.18): ತ್ರಿವಳಿ ತಲಾಖ್ ಎಂಬುದು 1400 ವರ್ಷಗಳ ನಂಬಿಕೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಾದಿಸಿದ ಮರುದಿನವೇ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಬುಧವಾರ ಅತ್ಯಂತ ಪ್ರಬಲವಾಗಿ ತ್ರಿವಳಿ ತಲಾಖ್ ಅನ್ನು ವಿರೋಧಿಸಿದೆ.
ತ್ರಿವಳಿ ತಲಾಖ್ ಎಂಬುದು ಇಸ್ಲಾಂನ ಅತ್ಯವಶ್ಯ ಭಾಗವೇನೂ ಅಲ್ಲ. 1400 ವರ್ಷಗಳಿಂದ ಆಚರಣೆಯಲ್ಲಿದೆ ಎಂಬ ಕಾರಣಕ್ಕೆ ಅದನ್ನು ಮುಂದುವರಿಸಲು ಅವಕಾಶ ನೀಡಕೂಡದು. ನರಬಲಿ ಎಂಬುದು ಕೂಡ ಬಹು ಹಿಂದಿನಿಂದಲೂ ಆಚರಣೆಯಲ್ಲಿದೆ ಎಂಬ ಕಾರಣಕ್ಕೆ ಅದಕ್ಕೆ ಅವಕಾಶ ನೀಡುತ್ತೇವೆ ಎಂದು ಯಾರಾದರೂ ಹೇಳಲು ಆದೀತೇ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಹೇಳಿದರು.
ಬಹುಸಂಖ್ಯಾತರು ತಮ್ಮ ಅಭಿಪ್ರಾಯಗಳನ್ನು ಅಲ್ಪಸಂಖ್ಯಾತರ ಮೇಲೆ ಹೇರಿದಂತಾಗುವುದರಿಂದ ತ್ರಿವಳಿ ತಲಾಖ್ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡದಿರುವುದೇ ಒಳಿತು ಎಂದಿದ್ದ ಮುಸ್ಲಿಂ ಕಾನೂನು ಮಂಡಳಿ ಪರ ವಕೀಲ ಕಪಿಲ್ ಸಿಬಲ್ ಸಲಹೆಯನ್ನೂ ಇದೇ ವೇಳೆ ರೋಹಟ್ಗಿ ಸಾರಾಸಗಟಾಗಿ ತರಿಸ್ಕರಿಸಿದರು.
ಇದಕ್ಕೂ ಮುನ್ನ ವಿಚಾರಣೆ ನಡೆಸಿದ ಪಂಚಧರ್ಮೀಯ ಜಡ್ಜ್‌ಗಳಿರುವ ಪಂಚಸದಸ್ಯ ಪೀಠ, ತ್ರಿವಳಿ ತಲಾಖ್‌ಗೆ ತನ್ನ ಒಪ್ಪಿಗೆ ಇಲ್ಲ ಎಂದು ಹೇಳುವ ಅವಕಾಶವನ್ನು ‘ನಿಖಾನಾಮ' (ಇಸ್ಲಾಮಿಕ್ ವಿವಾಹ ಒಪ್ಪಂದ) ಸಂದರ್ಭದಲ್ಲಿ ಮಹಿಳೆಯರಿಗೆ ನೀಡಬಹುದೇ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯನ್ನು ಪ್ರಶ್ನಿಸಿತು.
ವಕೀಲರಿಗೆ ಪಾಠ ಹೇಳಿದ ಮುಖ್ಯ ನ್ಯಾಯಾಧೀಶರು
ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರು ಕುರಾನ್ ಹಿಡಿದು, ಅದರಲ್ಲಿರುವ ಸಾಲುಗಳನ್ನು ವಕೀಲರಿಗೆ ಓದಿ ಹೇಳಿದ ಘಟನೆ ನಡೆಯಿತು. ಅಲ್ಲದೆ, ಕುರಾನ್‌ನಲ್ಲಿ ತಲಾಖ್ ಎ ಬಿದ್ದತ್ (ದಿಢೀರ್ ತಲಾಖ್)ನ ಪ್ರಸ್ತಾಪ ಎಲ್ಲಿದೆ ಎಂದು ಕೇಳುವ ಮೂಲಕ ವಕೀಲರನ್ನು ಚಕಿತಗೊಳಿಸಿದ ಪ್ರಸಂಗ ಜರುಗಿತು.
ವಿಚಾರಣೆ ವೇಳೆ ವಕೀಲ ವಿ. ಗಿರಿ ನ್ಯಾಯಪೀಠಕ್ಕೆ ಕುರಾನ್‌ನ ಪ್ರತಿ ನೀಡಿ ತಲಾಖ್ ಎ ಬಿದ್ದತ್ ಕುರಾನ್‌ನಲ್ಲಿ ಉಲ್ಲೇಖವಾಗಿದ್ದು, 230ನೇ ಪ್ಯಾರಾದ 65ನೇ ಸುರಾದಲ್ಲಿ ಇದೆ ಎಂದರು.
ಇದನ್ನು ಕೇಳಿದ ನ್ಯಾ| ಜೆ.ಎಸ್. ಖೇಹರ್ ಅವರು ನಗುತ್ತಾ, ‘ತಲಾಖ್ ಎ ಬಿದ್ದತ್ ಎಂಬ ಅಂಶ ಕುರಾನ್‌ನಲ್ಲಿ ಇಲ್ಲವೇ ಇಲ್ಲ. ತಲಾಖ್ ಎ ಎಹ್ಸಾನ್ ಹಾಗೂ ತಲಾಖ್ ಎ ಅಹ್ಸಾನ್ ಮಾತ್ರವೇ ಇದೆ' ಎಂದರು. ಇಷ್ಟಕ್ಕೇ ನಿಲ್ಲಿಸದ ಅವರು, ‘ಪ್ರತಿ ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲಿ ಬಿದ್ದತ್ ಎಂಬುದು ಕೆಟ್ಟದ್ದು. ಯಾವುದೇ ವಿಧದಲ್ಲೂ ಅದನ್ನು ಆಚರಿಸಬಾರದು ಎಂದು ಹೇಳಬೇಕು ಎಂದು ಈ ಪುಸ್ತಕ ಹೇಳುತ್ತದೆ. ಪ್ರತಿ ಶುಕ್ರವಾರ ಇದನ್ನೇ ಹೇಳುತ್ತೀರಿ. ಈಗ ಇದು 1400 ವರ್ಷದ ನಂಬಿಕೆ ಅಂತೀರಿ' ಎಂದು ಛೇಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.