ತಿರುಪತಿ ತಿಮ್ಮಪ್ಪ ದೇಗುಲದ ಮೇಲೆ ಸೈಬರ್ ದಾಳಿ

By Suvarna Web DeskFirst Published May 18, 2017, 6:28 PM IST
Highlights

ಆಸ್ಪತ್ರೆಯ ಎಡಿಎಂಒ ನೀಡಿದ ವರದಿಯ ಆಧಾರದಲ್ಲಿ ಐಟಿ ಕಾಯ್ದೆ ಮತ್ತು ಐಪಿಸಿ ಕಲಂಗಳನ್ವಯ ಬೆಹ್ರಾಂಪುರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತ ತನಿಖೆಗೆ ಕ್ರೈಂ ವಿಭಾಗದ ಮೂವರ ತಂಡ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಿರುಪತಿ(ಮೇ.18): ವಿಶ್ವದೆಲ್ಲೆಡೆ ಹಾನಿ ಸೃಷ್ಟಿಸಿರುವ ವನ್ನಾಕ್ರೈ ರಾನ್ಸಮ್‌ವೇರ್‌ ಸೈಬರ್‌ ದಾಳಿಗೆ ತಿರುಮಲ ತಿರುಪತಿ ದೇವಸ್ಥಾನದ ಕಂಪ್ಯೂಟರ್‌ಗಳು ಕೂಡ ಬಾಧಿತವಾಗಿದೆ.
ಆಡಳಿತ ನಿರ್ವಹಣೆಗಾಗಿ ಬಳಸಲಾಗುತ್ತಿದ್ದ 10 ಕಂಪ್ಯೂಟರ್‌ಗಳು ಹ್ಯಾಕ್‌ ಆಗಿರುವುದನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಉಳಿದ 20 ಕಂಪ್ಯೂಟರ್‌ಗಳ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸ ಲಾಗಿದೆ. ಆದರೆ, ಇದರಿಂದ ಭಕ್ತರ ಸೇವೆಗೆ ಯಾವುದೇ ತೊಂದರೆ ಆಗಿಲ್ಲ ಎಂದು ಟಿಟಿಡಿ ನೂತನ ಸಿಇಒ ಅನಿಲ್‌ ಕುಮಾರ್‌ ಸಿಂಘಲ್‌ ತಿಳಿಸಿದ್ದಾರೆ. ಸದ್ಯ ಪರಿಸ್ಥಿತಿಯನ್ನು ನಿಭಾಯಿ ಸಲು ಟಿಟಿಡಿಯ ಮಾಹಿತಿ ತಂತ್ರಜ್ಞಾನ ಘಟಕವು ಟಾಟಾ ಕನ್ಸಲ್ಟನ್ಸಿಯ ಜತೆ ಕಾರ್ಯನಿರ್ವಹಿಸುತ್ತಿದೆ. 
ಒಡಿಶಾದಲ್ಲೂ ಸೈಬರ್‌ ದಾಳಿ

 

ಒಡಿಶಾದ ಗಂಜಾಮ್‌ ಜಿಲ್ಲೆಯ ಬೆಹ್ರಾಂಪುರ ನಗರ ಸರ್ಕಾರಿ ಆಸ್ಪತ್ರೆಯ ಡಾಟಾ ವ್ಯವಸ್ಥೆಯ ಮೇಲೆ ವಾನ್ನಾಕ್ರೈ ವೈರಸ್‌ ದಾಳಿ ನಡೆದಿದೆ. ಆಸ್ಪತ್ರೆಯ ಎಡಿಎಂಒ ನೀಡಿದ ವರದಿಯ ಆಧಾರದಲ್ಲಿ ಐಟಿ ಕಾಯ್ದೆ ಮತ್ತು ಐಪಿಸಿ ಕಲಂಗಳನ್ವಯ ಬೆಹ್ರಾಂಪುರ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತ ತನಿಖೆಗೆ ಕ್ರೈಂ ವಿಭಾಗದ ಮೂವರ ತಂಡ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ಕಚೇರಿಗೆ ತೊಂದರೆಯಿಲ್ಲ

ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿನ ಕೆಲವು ಕಂಪ್ಯೂಟರ್‌ಗಳಿಗೆ ವನ್ನಾಕ್ರೈ ರಾನ್ಸಮ್‌ ವೈರಸ್‌ನಿಂದ ತೊಂದರೆಯಾಗಿದ್ದರೂ, ಬೆಂಗಳೂರಿನ ವಯ್ಯಾಲಿಕಾವಲ್‌ನಲ್ಲಿ ರುವ ತಿರುಪತಿ ತಿರುಮಲ ದೇವಾಲಯ (ಟಿಟಿಡಿ)ದ ಮಾಹಿತಿ ಕೇಂದ್ರಕ್ಕೆ ಯಾವು ದೇ ರೀತಿಯ ತೊಂದರೆಯುಂಟಾಗಿಲ್ಲ.
ವೈಯಾಲಿಕಾವಲ್ ‌ನಲ್ಲಿರುವ ಎಲ್ಲಾ ಕಂಪ್ಯೂಟರ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ತಿರುಪತಿಯಲ್ಲಿನ ದೇವರ ದರ್ಶನ, ಕಲ್ಯಾಣೋತ್ಸವ, ಸಹಸ್ರ ದೀಪಾಲಂಕಾರ ಸೇರಿದಂತೆ ವಿವಿಧ ಸೇವೆಗಳಿಗೆ ಟಿಕೆಟ್‌ಗಳನ್ನು ಬುಕ್‌ ಮಾಡಲಾಗುತ್ತಿದೆ. ಭಕ್ತಾದಿಗಳಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಆದರೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವೈಯಾಲಿಕಾವಲ್‌ನ ಟಿಟಿಡಿ ಮಾಹಿತಿ ಕೇಂದ್ರದ ಹೆಚ್ಚುವರಿ ಕಾರ್ಯಾನಿರ್ವ ಹಣಾಧಿಕಾರಿ ವಸಂತಕುಮಾರಿ ‘ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

click me!