ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 6 ನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭ: ತನ್ವಿರ್ ಸೇಠ್

By Suvarna Web DeskFirst Published May 18, 2017, 6:34 PM IST
Highlights

ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ೬ನೇ ತರಗತಿಯಿಂದ ಆಂಗ್ಲ ಮಾಧ್ಯಮ ವಿಭಾಗ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ವರ್ಷದಿಂದ ಮೊದಲ ಹಂತವಾಗಿ ೩,೭೭೦ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಆರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.

ಬೆಂಗಳೂರು (ಮೇ.18): ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ೬ನೇ ತರಗತಿಯಿಂದ ಆಂಗ್ಲ ಮಾಧ್ಯಮ ವಿಭಾಗ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ವರ್ಷದಿಂದ ಮೊದಲ ಹಂತವಾಗಿ ೩,೭೭೦ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಆರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
 
ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಆರಂಭದ ಬಗ್ಗೆ ಕೆಲ ವರ್ಷಗಳ ಹಿಂದೆಯೇ ಸರ್ಕಾರದಲ್ಲಿ ನಿರ್ಧಾರ ಆಗಿತ್ತು. ಆ ಹಂತದಲ್ಲಿ ಕೆಲವೇ ಕೆಲವು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಗೊಂಡಿತ್ತು. ಆದರೆ, ಇದು ಸಮರ್ಪಕ ಅನುಷ್ಠಾನ ಆಗಿರಲಿಲ್ಲ. ಈ ವರ್ಷದಿಂದ ಸಮರ್ಪಕ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
 
ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ (1ರಿಂದ 5 ನೇ ತರಗತಿ) ಹಂತದವರೆಗೆ ವಿದ್ಯಾಭ್ಯಾಸ ಮಾಡಿದ ಬಹುತೇಕ ಮಕ್ಕಳು 6 ನೇ ತರಗತಿಯಿಂದ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮುಂದುವರೆಸಲು ಖಾಸಗಿ ಶಾಲೆಗಳಿಗೆ ಸೇರುತ್ತಿದ್ದಾರೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಇದನ್ನು ತಡೆಯಲು ಹಾಗೂ ಸರ್ಕಾರಿ ಶಾಲೆಗಳನ್ನು ಉಳಿಸಲು ಸರ್ಕಾರಿ ಶಾಲೆಗಳಲ್ಲೇ ೬ನೇ ತರಗತಿಯಿಂದ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಲು ನಿರ್ಧರಿಸಲಾಗಿದೆ. ಇದಕ್ಕೆ ಪೂರಕವಾಗಿ ಅಗತ್ಯ ಆಂಗ್ಲ ಮಾಧ್ಯಮ ಬೋಧಕರ ನೇಮಕ ಮಾಡಿಕೊಳ್ಳಲು ಹಾಗೂ ಹಾಲಿ ಶಿಕ್ಷಕರಿಗೂ ಸೂಕ್ತ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
 
ಕನ್ನಡ ಮಾಧ್ಯಮದ ಜತೆಗೆ ಆಂಗ್ಲ ಮಾಧ್ಯಮ ತರಗತಿಗಳು ಆರಂಭವಾಗಲಿವೆ. ಆಂಗ್ಲ ಮಾಧ್ಯಮದಲ್ಲಿ ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಕನ್ನಡ ಮಾಧ್ಯಮದಲ್ಲೇ ಆಸಕ್ತಿ ಇರುವವರು ಅದೇ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮುಂದುವರೆಸಬಹುದು. ಸರ್ಕಾರಿ ಶಾಲೆಗಳನ್ನು ಯಾವುದೇ ಕಾರಣಕ್ಕೂ ಮುಚ್ಚದಿರಲು ನಮ್ಮ ಸರ್ಕಾರ ನಿರ್ಧರಿಸಿದೆ. ಅಗತ್ಯವಿರುವೆಡೆ ಕಿರಿಯ ಪ್ರಾಥಮಿಕ ಶಾಲೆಗಳನ್ನು ಹಿರಿಯ ಪ್ರಾಥಮಿಕ ಶಾಲೆಗಳಾಗಿ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರೌಢ ಶಾಲಾ ತರಗತಿಗಳನ್ನು ಆರಂಭಿಸಲು ಕೂಡ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. 
click me!