
ಉಡುಪಿ(ಜ.30): ಉಡುಪಿಯ ಕೆಳಪರ್ಕಳದಲ್ಲಿ ಜಲವಿಸ್ಮಯ ಕಂಡು ಬಂದಿದೆ. ಕರಾವಳಿಯ ಕಡು ಬಿಸಿಲಿಗೆ ಬರಡಾಗಬೇಕಿದ್ದ ಹಳ್ಳಕೊಳ್ಳಗಳಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಈ ಅನಿರೀಕ್ಷಿತ ಅಂತರ್ಜಲದ ಆಗಮನದಿಂದ ಜನರು ಅಚ್ಚರಿಗೊಂಡಿದ್ದಾರೆ.
ಈ ಬಾರಿ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಳೆಯಾಗಿದೆ. ಈಗಂತೂ ಬಿಸಿಲಿನ ಜಳಕ್ಕೆ ಜನರು ಬೇಸತ್ತು ಹೋಗಿದ್ದಾರೆ. ವಾತಾವರಣ ಹೀಗಿದ್ದರೂ ಇಲ್ಲಿನ ಕೆಳ ಪರ್ಕಳದ ಜನ ಮಾತ್ರ ಸೌಭಾಗ್ಯವಂತರೆಂದೇ ಹೇಳಬೇಕು. ಇದ್ದಕ್ಕಿದ್ದಂತೆ ಇಲ್ಲಿನ ಬಾವಿಗಳಲ್ಲಿ ನೀರಿನ ಮಟ್ಟ ಮೇಲಕ್ಕೇರಿದೆ. ನವೆಂಬರ್ ತಿಂಗಳಲ್ಲೇ ಬರಡಾಗುವ ಹಳ್ಳಕೊಳ್ಳಗಳಲ್ಲಿ ನೀರು ಮೈ ದುಂಬಿ ಹರಿಯುತ್ತಿದೆ. ಈ ಜಲ ವಿಸ್ಮಯ ಕಂಡು ಜನ ಬೆರಗಾಗಿದ್ದಾರೆ.
ಇನ್ನು ಇಲ್ಲಿನ ನೀರನ್ನು ಪರಿಶೀಲನೆಗೆ ಕಳುಹಿಸಲಾಗಿದೆ. ಈ ನೀರಿನಲ್ಲಿ ಯಾವುದೇ ರಾಸಾಯನಿಕ ಅಂಶಗಳಿಲ್ಲ. ಕುಡಿಯಲು ಈ ನೀರು ಯೋಗ್ಯವಾಗಿದೆ ಎಂಬ ವರದಿಯೂ ಬಂದಿದೆ. ಪಶ್ಚಿಮ ಘಟ್ಟ ಮತ್ತು ಪಶ್ಚಿಮ ಕರಾವಳಿ ಮಧ್ಯೆ 62 ಮಿಲಿಯನ್ ವರ್ಷಗಳ ಹಿಂದೆ ಭಾರೀ ಪ್ರಮಾಣದಲ್ಲಿ ಆಗಿದ್ದ ಭೂಸ್ಥತ ಭಂಗ ಈಗ ಪುನಶ್ಚೇತನಗೊಂಡಿರಬಹುದು ಎಂದು ಹೇಳಲಾಗ್ತಿದೆ.
ಹೇರಳ ನೀರು ಸಿಗುತ್ತಿರುವುದು ನೆಮ್ಮದಿಯ ಸಂಗತಿಯಾದರೂ, ಇದೊಂದು ಸೂಕ್ಷ್ಮ ಭೂವಲಯ ಎಂಬ ಕಾರಣಕ್ಕೆ ಜನರಲ್ಲಿ ಆತಂಕವೂ ಇದೆ. ಏನೇ ಇದ್ದರೂ ಈ ಜಲ ವಿಸ್ಮಯ ಅನೇಕರನ್ನು ಆಕರ್ಷಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.