
ನಿಮಗೆ ಇದು ಗೊತ್ತಿರೋ ಚಾನ್ಸೇ ಇಲ್ಲ. ಮೈಸೂರಿನ ಅರಸರಾದ, ಮೈಸೂರಿನ ಸಂಸದರೂ ಆಗಿರುವ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (yaduveer Wadiyar, Yaduveer Krishnadatta Chamaraja Wadiyar) ಅವರ ಬಳಿ ಹಲವಾರು ಬೆಲೆಬಾಳುವ ಕಿರೀಟಗಳಿವೆ. ಇವರು ಒಂದೊಂದು ಸಂದರ್ಭದಲ್ಲಿ ಒಂದೊಂದು ಕಿರಿಟ ಧರಿಸುತ್ತಾರೆ. ಇದು ಮೈಸೂರು ಅರಮನೆಯ ರೂಢಿಯೇ ಆಗಿದೆ. ಈ ಸಲ ಅವರು ಮೈಸೂರು ದಸರಾ ಆರಂಭದ ದಿನ ಸಿಂಹಾಸನ ಪೂಜೆಯ ಸಂದರ್ಭದಲ್ಲಿ ಧರಿಸಿದ ಕಿರೀಟವನ್ನು ಗಮನಿಸಿ ನೋಡಿ. ಗಾಢ ನೀಲಿ ಬಣ್ಣದ ಮುಂಡಾಸು, ಅದನ್ನು ಸುತ್ತಿ ಎದುರುಗಡೆ ಕಟ್ಟಿದ ಚಿನ್ನದ ಬ್ರೋಚ್ ಹಾಗೂ ಒಂದು ಬದಿಯಿಂದ ಇಳಿಬಿದ್ದ ಮುತ್ತಿನ ಜಲ್ಲರಿ- ಇದನ್ನು ಸಾಂಪ್ರದಾಯಿಕ ಕಿರೀಟ. ಇದನ್ನೇ ದಸರಾ ಖಾಸಗಿ ದರ್ಬಾರ್ ಸಮಯದಲ್ಲಿ ಈ ಹಿಂದಿನ ಅರಸರಾದ ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಕೂಡ ಧರಿಸುತ್ತಿದ್ದರು.
ಹಾಗೇ ಅವರು ಮದುವೆಯಾದ ಸಂದರ್ಭದಲ್ಲಿ ಧರಿಸಿದ ಕಿರೀಟ ಬೇರೆ. ಆಗ ಅವರು ಮೈಸೂರಿನ ಸಾಂಪ್ರದಾಯಿಕ ರುಮಾಲಿನ ಪೇಟ ಧರಿಸಿದ್ದರು. ಅದಕ್ಕೆ ಕೆಂಪು ಕಲ್ಲುಗಳನ್ನು ಕೂರಿಸಿದ ಚಿನ್ನದ ಬ್ರೋಚ್ ಕಟ್ಟಲಾಗಿತ್ತು. ಮದುವೆಯ ವಿಧಿವಿಧಾನಗಳ ಸಂದರ್ಭದಲ್ಲಿ ದೊಡ್ಡ ಪೇಟ ಹಾಗೂ ಸಾಂಪ್ರದಾಯಿಕ ಬಾಸಿಂಗ ಕಟ್ಟಲಾಗಿತ್ತು. ಯಾವುದೇ ಶುಭ ಸಮಾರಂಭವಿರಲಿ, ಉದ್ದ ರೇಶಿಮೆಯ ನಿಲುವಂಗಿ ಹಾಗೂ ಕುರ್ತಾ ಧರಿಸುವುದು ಅರಸರ ರೂಢಿ. ಶುಭ ಸಂದರ್ಭಗಳಲ್ಲಿ ಕೈಗೆ ಕಂಕಣವಿರುತ್ತದೆ. ಜೊತೆಗೆ ಎಡಗೈಯ ನಾಲ್ಕು ಹಾಗೂ ಬಲಗೈಯ ನಾಲ್ಕೂ ಬೆರಳುಗಳನ್ನೂ ಉಂಗುರಗಳನ್ನ ಧರಿಸಿರುತ್ತಾರೆ. ಸಾಮಾನ್ಯವಾಗಿ ಇವು ಮರಕತ, ಪಚ್ಚೆ, ಗೋಮೇಧಿಕ ಹಾಗೂ ವಜ್ರದ ಹರಳುಗಳನ್ನು ಕೂರಿಸಿದ ಉಂಗುರಗಳಾಗಿರುತ್ತವೆ.
ಇನ್ನು ಇವರು ಮೈಸೂರಿನ ಅರಸರಾಗಿ ಕಿರೀಟಧಾರಣೆ ಮಾಡಿದ ಸಂದರ್ಭದ ವೈಭವವೇ ಬೇರೆ. ಈ ಸಂದರ್ಭದಲ್ಲಿ ಅವರು ಕಿರೀಟಧಾರಣೆಗೆಂದೇ ಮೀಸಲಾಗಿರುವ ವಜ್ರಖಚಿತ ವೈಭವೋಪೇತ ಕಿರೀಟವನ್ನು ಧರಿಸಿದ್ದರು. ಇದೂ ಕೂಡ ಮೈಸೂರು ರೇಷ್ಮೆಯಿಂದ ಮಾಡಿದ ಮುಂಡಾಸೇ. ಆದರೆ ಅದರ ಸುತ್ತ ಮಿರುಗುವ ಚಿನ್ನದ ಆಭರಣಗಳು, ಪಚ್ಚೆಗಳನ್ನು ಹುದುಗಿಸಿದ ಬ್ರೋಚ್ ಹಾಗೂ ಮುತ್ತಿನ ಜಲ್ಲರಿಯಲ್ಲಿ ಸಿಕ್ಕಸಲಾಗಿತ್ತು. ಅರಮನೆಯಲ್ಲಿ ಅರಸರ ವೈಭವದ ಕಿರೀಟಧಾರಣೆಯ ಸಂದರ್ಭದಲ್ಲಿ ಅಲ್ಲಿನ ಬಹುತೇಕ ಆಭರಣಗಳನ್ನು ಅರಸರಿಗೆ ತೊಡಿಸಲಾಗುತ್ತದೆ. ಹೀಗಾಗಿ ಅಂದು ಕೂಡ ಆ ಕಿರೀಟ ಮತ್ತಿತರ ಆಭರಣಗಳನ್ನು ತೊಡಿಸಲಾಗಿತ್ತು. ಆ ಬಳಿಕ ಆ ಕಿರೀಟವನ್ನು ಅವರು ಧರಿಸಿದ್ದು ಕಡಿಮೆ.
ಸಾಮಾನ್ಯವಾಗಿ ಅರಸರಿಗೆ ಈ ಆಭರಣ ಹಾಗೂ ಕಿರೀಟಗಳನ್ನು ಧರಿಸಲು ಇತ್ತೀಚೆಗೆ ಸಿಗುವ ಅವಕಾಶ ಕಡಿಮೆ. ಪ್ರಜಾಪ್ರಭುತ್ವ ಬಂದ ಬಳಿಕ ಮೊದಲಿನ ಓಲಗ, ದರ್ಬಾರ್ ಇತ್ಯಾದಿಗಳಿಲ್ಲ. ಆದರೆ ನವರಾತ್ರಿಯಲ್ಲಿ ಒಂದು ಬಾರಿ ತಪ್ಪದೆ ಚಿನ್ನದ ಸಿಂಹಾಸನ ಆರೋಹಣ ಮಾಡುವ ಸಂದರ್ಭದಲ್ಲಿ ಮಾತ್ರ ಈ ಕಿರೀಟಗಳನ್ನು ಧರಿಸಿ ಪ್ರಜೆಗಳ ಮುಂದೆ ಕಂಗೊಳಿಸು ಅವಕಾಶ ಅವರಿಗೆ ಇದೆ. ಅರಸರಿಗೆ ತಕ್ಕಂತೆ ಅವರ ಪತ್ನಿ, ಮಹಾರಾಣಿ ತ್ರಿಶಿಕಾ ಕುಮಾರಿ ಕೂಡ ಅಲಂಕಾರ ಮಾಡಿಕೊಳ್ಳುತ್ತಾರೆ. ಇವರಿಗೆ ಕಿರೀಟವಿರುವುದಿಲ್ಲ. ಆದರೆ ಚಿನ್ನ ಹಾಗೂ ವಜ್ರಾಭರಣಗಳ ಬ್ರೋಚ್ ಧರಿಸುತ್ತಾರೆ. ಈ ಎಲ್ಲಾ ಕಿರೀಟಗಳು, ಚಿನ್ನ ಹಾಗೂ ವಜ್ರದ ಆಭರಣಗಳ ಮೌಲ್ಯ ಹಲವು ಕೋಟಿಗಳನ್ನೂ ಮೀರಬಹುದು ಎಂದು ಅರಮನೆಯ ಒಳಹೊರಗು ಬಲ್ಲವರು ಹೇಳುತ್ತಾರೆ.
ಇನ್ನುಳಿದಂತೆ, ರಾಯಲ್ ಸಮಾರಂಭಗಳನ್ನು ಹೊರತುಪಡಿಸಿದರೆ ಬೇರೆ ಸಂದರ್ಭಗಳಲ್ಲಿ ಯದುವೀರ ಒಡೆಯರ್ ಹಾಗೂ ತ್ರಿಶಿಕಾ ಕುಮಾರಿ ಹೆಚ್ಚಿನ ಅಲಂಕಾರಗಳನ್ನು ಮಾಡಿಕೊಳ್ಳುವುದಿಲ್ಲ. ಅವರು ಸರಳವಾಗಿ ಇರುವುದನ್ನು ಇಷ್ಟಪಡುತ್ತಾರೆ. ಇಬ್ಬರೂ ಹೆಚ್ಚಾಗಿ ಪ್ರವಾಸ ಹೋಗುತ್ತಾರೆ. ಇಂಥ ಸಂದರ್ಭಗಳಲ್ಲಿ ಅವರನ್ನು ಅರಸರೆಂದೇ ಯಾರೂ ಗುರುತಿಸಲು ಸಾಧ್ಯವಿಲ್ಲ. ಅಷ್ಟು ಸಿಂಪಲ್ ಆಗಿ ಇರುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.