
ದಿ ಗೋಟ್ ಇಂಡಿಯಾ ಟೂರ್ ಹೆಸರಿನಲ್ಲಿ ಪುಟ್ಬಾಲ್ ದಂತಕತೆ ಲಿಯೋನಲ್ ಮೆಸ್ಸಿ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದರು. ಕೋಲ್ಕತ್ತಾ ದೆಹಲಿ, ಹೈದರಾಬಾಸ್ ಮುಂಬೈನಲ್ಲಿ ಅವರು ಟೂರ್ ಮಾಡುವ ಮೂಲಕ ಪುಟ್ಬಾಲ್ ಆಡಿ ಅಭಿಮಾನಿಗಳ ಮನ ಸೆಳೆದಿದ್ದರು. ಭಾರತದಲ್ಲಿ ಮೆಸ್ಸಿ ಟೂರ್ ಆಯೋಜಿಸಿದ್ದ ಆಯೋಜಕರು, ಮೆಸ್ಸಿ ಜೊತೆ ಒಂದು ಫೋಟೋ ತೆಗೆಸಿಕೊಳ್ಳುವುದಕ್ಕೆ ಅಭಿಮಾನಿಗಳಿಗೆ 10 ಲಕ್ಷ ರೂಪಾಯಿ ನಿಗದಿ ಮಾಡಿದ್ದರು. ಹಾಗೆಯೇ ಜಸ್ಟ್ ಶೇಕ್ ಹ್ಯಾಂಡ್ ಮಾಡುವುದಕ್ಕೂ 10 ಲಕ್ಷ ರೂಪಾಯಿ ನಿಗದಿ ಮಾಡಲಾಗಿತ್ತು. ಹಾಗೆಯೇ ಇನ್ನೂ ವಿವಿಧ ಹಂತಗಳಲ್ಲಿ ವಿವಿಧ ರೀತಿಯ ಬೆಲೆಯ ಟಿಕೆಟ್‌ಗಳನ್ನು ಮಾರಲಾಗಿತ್ತು. ಹೀಗಿರುವಾಗ ಲಿಯೋನೆಲ್ ಮೆಸ್ಸಿ ಅವರು ಈ ಭಾರತದ ಪ್ರವಾಸದಿಂದ ಗಳಿಸಿದ್ದು ಎಷ್ಟು ಕೋಟಿ? ಕಾರ್ಯಕ್ರಮದ ಆಯೋಜಕರು ಹೇಳಿದ್ದೇನು ಈ ಬಗ್ಗೆ ಒಂದು ವರದಿ ಇಲ್ಲಿದೆ.
ಡಿಸೆಂಬರ್ 13 ರಂದು ಲಿಯೋನೆಲ್ ಮೆಸ್ಸಿ ಗೋಟ್ ಇಂಡಿಯಾ ಟೂರ್ ಪ್ರವಾಸಕ್ಕಾಗಿ ಭಾರತದ ಕೋಲ್ಕತ್ತಾಕ್ಕೆ ಬಂದಿಳಿದಿದ್ದರು. ಆದರೆ ಅಲ್ಲಿ ನಡೆದ ಕೆಲ ಎಡವಟ್ಟುಗಳಿಂದಾಗಿ ಕೇವಲ 20 ನಿಮಿಷದಲ್ಲಿ ಮೆಸ್ಸಿ ಅಲ್ಲಿಂದ ಹೊರಟು ಹೋಗಿದ್ದರು. ಹೀಗಾಗಿ ಅಲ್ಲಿ ರೊಚ್ಚಿಗೆದ್ದ ಅಭಿಮಾನಿಗಳು ಅಲ್ಲಿನ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ದೊಡ್ಡ ಕೋಲಾಹಲವನ್ನೇ ಎಬ್ಬಿಸಿದ್ದರು. ಕುರ್ಚಿಗಳನ್ನು ಮುರಿದು ಹಾಕಿ ಸ್ಟೇಡಿಯಂನಲ್ಲಿದ್ದ ಮ್ಯಾಟ್‌ಗಳನ್ನು ಕಿತ್ತೆಸೆದು ಆಕ್ರೋಶ ಹೊರ ಹಾಕಿದ್ದರು. ಹೀಗಾಗಿ ಪಶ್ಚಿಮ ಬಂಗಾಳ ಸರ್ಕಾರವೂ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅರ್ಜೆಂಟೀನಾದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಆಗಮಿಸಿದ್ದ ವೇಳೆ ನಡೆದ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಿದೆ. ಪಶ್ಚಿಮ ಬಂಗಾಳ ಸರ್ಕಾರದ ಹಿರಿಯ ಐಪಿಎಸ್ ಅಧಿಕಾರಿಗಳಾದ ಪಿಯೂಷ್ ಪಾಂಡೆ, ಜಾವೇದ್ ಶಮೀಮ್, ಸುಪ್ರತಿಮ್ ಸರ್ಕಾರ್ ಮತ್ತು ಮುರಳೀಧರ್ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡ ಈ ಪ್ರಕರಣದ ವಿಚಾರಣೆ ನಡೆಸುತ್ತಿದೆ.
ಈ ಎಸ್‌ಐಟಿ ತಂಡ ಈಗ ಕಾರ್ಯಕ್ರಮದ ಆಯೋಜಕ ಸತಾದ್ರು ದತ್ತಾ ಅವರನ್ನು ಬಂಧಿಸಿದೆ. ವಿಚಾರಣೆ ವೇಳೆ ಅವರು ಮೆಸ್ಸಿಗೆ ಕೊಟ್ಟ ಹಣ ಎಷ್ಟು ಕೋಟಿ ಎಂಬ ವಿಚಾರವೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಕೆಲವರು ಮೆಸ್ಸಿ ಅವರನ್ನು ತಬ್ಬಿಕೊಂಡಿದ್ದರಿಂದ ಮೆಸ್ಸಿ ಅಸಮಾಧಾನಗೊಂಡಿದ್ದರು. ಹಾಗೂ ನಿಗದಿತ ಸಮಯದವರೆಗೂ ಅವರು ಅಲ್ಲೇ ಇರಲು ನಿರಾಕರಿಸಿದ್ದರು. ಮೆಸ್ಸಿಗೆ ಜನ ಅವರ ಬೆನ್ನು ಮುಟ್ಟುವುದು ಅಪ್ಪಿಕೊಳ್ಳುವುದು ಇಷ್ಟವಿರಲಿಲ್ಲ ಮೆಸ್ಸಿಯ ರಕ್ಷಣೆಗೆ ಜವಾಬ್ದಾರರಾಗಿರುವ ವಿದೇಶಿ ಭದ್ರತಾ ಅಧಿಕಾರಿಗಳು ಈ ಕಳವಳವನ್ನು ಮುಂಚಿತವಾಗಿ ತಿಳಿಸಿದ್ದರು. ಆದರೆ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಜನಸಮೂಹವನ್ನು ನಿಯಂತ್ರಿಸಲು ಪದೇ ಪದೇ ಸಾರ್ವಜನಿಕ ಘೋಷಣೆಗಳನ್ನು ಮಾಡಿದರೂ, ಯಾವುದೇ ಪರಿಣಾಮ ಬೀರಲಿಲ್ಲ. ಮೆಸ್ಸಿಯನ್ನು ಸುತ್ತುವರೆದು ಅಭಿಮಾನಿಗಳು ಅಪ್ಪಿಕೊಂಡ ರೀತಿ ವಿಶ್ವಕಪ್ ವಿಜೇತ ಫುಟ್ಬಾಲ್ ಆಟಗಾರನಿಗೆ ಸಂಪೂರ್ಣವಾಗಿ ಇಷ್ಟವಾಗಲಿಲ್ಲ ಎಂದು ದತ್ತಾ ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಮಧ್ಯೆ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರು ಕಾರ್ಯಕ್ರಮದ ಉದ್ದಕ್ಕೂ ಮೆಸ್ಸಿಯ ಹತ್ತಿರದಲ್ಲೇ ಕಾಣಿಸಿಕೊಂಡರು, ಅವರು ಫೋಟೋಗಳಿಗೆ ಪೋಸ್ ನೀಡುವಾಗ ಮೆಸ್ಸಿಯನ್ನು ಸೊಂಟದ ಸುತ್ತಲೂ ಹಿಡಿದುಕೊಂಡಿರುವುದನ್ನು ಹಲವು ವೈರಲ್ ದೃಶ್ಯಗಳು ತೋರಿಸಿವೆ. ಬರೀ ಇಷ್ಟೇ ಅಲ್ಲದೇ ಬಿಸ್ವಾಸ್ ತಮ್ಮ ಪ್ರಭಾವ ಬಳಸಿ ಸಂಬಂಧಿಕರು ಮತ್ತು ವೈಯಕ್ತಿಕ ಪರಿಚಯಸ್ಥರು ಮೆಸ್ಸಿಯನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪಗಳ ಬೆನ್ನಲ್ಲೇ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಅಲ್ಲದೇ ಈ ಸಮಯದಲ್ಲಿ ಸಾಲ್ಟ್ ಲೇಕ್ ಸ್ಟೇಡಿಯಂಗೆ ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ಹೇಗೆ ಪ್ರವೇಶ ಪಡೆದರು ಎಂಬುದರ ಬಗ್ಗೆಯೂ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆರಂಭದಲ್ಲಿ ಕೇವಲ 150 ಗ್ರೌಂಡ್ ಪಾಸ್‌ಗಳನ್ನು ನೀಡಲಾಗಿತ್ತು. ಆದರೆ ಬಹಳ ಪ್ರಭಾವಿ ವ್ಯಕ್ತಿಯೊಬ್ಬರು ಕ್ರೀಡಾಂಗಣವನ್ನು ತಲುಪಿ ಅಲ್ಲಿದ್ದವರನ್ನು ನಿಯಂತ್ರಣಕ್ಕೆ ಪಡೆದಾಗ ಆ ಸಂಖ್ಯೆ ಮೂರು ಪಟ್ಟು ಹೆಚ್ಚಾಯ್ತು. ಆ ನಿರ್ದಿಷ್ಟ ಪ್ರಭಾವಿ ವ್ಯಕ್ತಿ ಕ್ರೀಡಾಂಗಣವನ್ನು ತಲುಪಿದ ನಂತರ, ಮೆಸ್ಸಿ ಕಾರ್ಯಕ್ರಮದ ಎಲ್ಲಾ ರೂಪುರೇಷೆ ಬದಲಾಯ್ತು. ಅದನ್ನು ನಿಯಂತ್ರಿಸಲು ನಮಗೆ ಸಾಧ್ಯವಾಗಲಿಲ್ಲ ಎಂದು ಎಂದು ದತ್ತಾ ಹೇಳಿದ್ದಾರೆ.
ಇದೇ ವೇಳೆ ಮೆಸ್ಸಿಯ ಭಾರತ ಭೇಟಿಗೆ ಸಂಬಂಧಿಸಿದ ಹಣಕಾಸಿನ ವಿವರಗಳನ್ನು ದತ್ತಾ ಬಹಿರಂಗಪಡಿಸಿದ್ದು, ಲಿಯೋನೆಲ್ ಮೆಸ್ಸಿಗೆ ಭಾರತ ಪ್ರವಾಸಕ್ಕಾಗಿ 89 ಕೋಟಿ ರೂ.ಗಳನ್ನು ನೀಡಲಾಗಿದ್ದು, 11 ಕೋಟಿ ರೂ.ಗಳನ್ನು ಭಾರತ ಸರ್ಕಾರಕ್ಕೆ ತೆರಿಗೆಯಾಗಿ ಪಾವತಿಸಲಾಗಿತ್ತು. ಹೀಗಾಗಿ ಒಟ್ಟು ವೆಚ್ಚವನ್ನು 100 ಕೋಟಿ ರೂ. ಎಂದು ದತ್ತಾ ಹೇಳಿದ್ದಾರೆ. ಈ ಮೊತ್ತದಲ್ಲಿ, ಶೇಕಡಾ 30 ರಷ್ಟನ್ನು ಪ್ರಾಯೋಜಕರಿಂದ ಪಡೆಯಲಾಗಿದ್ದು, ಇನ್ನೂ ಶೇಕಡಾ 30 ರಷ್ಟು ಟಿಕೆಟ್ ಮಾರಾಟದ ಮೂಲಕ ಗಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 13 ವರ್ಷದೊಳಗಿನ 4 ಅಪ್ರಾಪ್ತರಿಂದ 8ನೇ ಕ್ಲಾಸ್ ಬಾಕಿಗೆ ಕಿರುಕುಳ: ಮಕ್ಕಳು ಮಾಡಿದ ತಪ್ಪಿಗೆ ತಾಯಂದಿರನ್ನು ಬಂಧಿಸಿದ ಪೊಲೀಸರು
ಈ ನಡುವೆ ಎಸ್‌ಐಟಿ ಅಧಿಕಾರಿಗಳು ದತ್ತಾ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ 20 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಪತ್ತೆಹಚ್ಚಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಶುಕ್ರವಾರ, ದತ್ತಾ ಅವರ ಮನೆ ಮೇಲೆ ದಾಳಿ ನಡೆಸಿದ ನಂತರ, ಎಸ್‌ಐಟಿಯ ತನಿಖಾಧಿಕಾರಿಗಳು ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡರು. ದತ್ತ ತನ್ನ ಬ್ಯಾಂಕ್ ಖಾತೆಯಲ್ಲಿರುವ ಹಣವು ಕೋಲ್ಕತ್ತಾ ಮತ್ತು ಹೈದರಾಬಾದ್‌ನಲ್ಲಿ ನಡೆದ ಮೆಸ್ಸಿ ಕಾರ್ಯಕ್ರಮದ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದರಿಂದ ಮತ್ತು ಪ್ರಾಯೋಜಕರಿಂದ ಪಡೆದ ಹಣ ಎಂದು ಹೇಳಿದ್ದಾರೆ ಅವರ ಹೇಳಿಕೆಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ: ಜವರಾಯನಂತೆ ಬಂತು ಜಲ್ಲಿಕಲ್ಲು ತುಂಬಿದ್ದ ಲಾರಿ: ಮನೆ ಮುಂದೆ ಚಳಿ ಕಾಯಿಸುತ್ತಿದ್ದ ವೃದ್ಧ ಬಲಿ
ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಹಾಜರಾಗಲು ಸಾವಿರಾರು ಪ್ರೇಕ್ಷಕರು ದುಬಾರಿ ಟಿಕೆಟ್‌ಗಳನ್ನು ಖರೀದಿಸಿದ್ದರು, ಆದರೆ ಮೈದಾನದಲ್ಲಿ ಮೆಸ್ಸಿಯ ಸುತ್ತಲೂ ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರಿಂದ ಕಾರ್ಯಕ್ರಮವು ಅವ್ಯವಸ್ಥೆಯ ಗೂಡಾಯಿತು, ಗ್ಯಾಲರಿಗಳಿಂದ ಅವರು ಕೇವಲ ಗೋಚರಿಸುತ್ತಿದ್ದರು ಇದು ಅಷ್ಟೊಂದು ಹಣ ಪಾವತಿ ಮಾಡಿದ ಅಭಿಮಾನಿಗಳು ಸಿಟ್ಟಿಗೇಳುವಂತೆ ಮಾಡಿತು. ಆಕ್ರೋಶಗೊಂಡ ಕೆಲವರು ನಂತರ ಕ್ರೀಡಾಂಗಣದ ಕೆಲವು ಭಾಗಗಳನ್ನು ಧ್ವಂಸಗೊಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.