ಐಸಿಸ್‌ ಉಗ್ರನ ಏಮಾರಿಸಿ ದಿಲ್ಲಿ ದಾಳಿ ತಪ್ಪಿಸಿದರು!

Published : Jul 12, 2018, 11:57 AM IST
ಐಸಿಸ್‌ ಉಗ್ರನ ಏಮಾರಿಸಿ ದಿಲ್ಲಿ ದಾಳಿ ತಪ್ಪಿಸಿದರು!

ಸಾರಾಂಶ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆಸಲು ತಯಾರಿಯಲ್ಲಿ ತೊಡಗಿದ್ದ ಕುಖ್ಯಾತ ಉಗ್ರ ಸಂಘಟನೆ ಐಸಿಸ್‌ ಗುಂಪಿನೊಳಕ್ಕೆ ತಮ್ಮ ಪ್ರತಿನಿಧಿಯೊಬ್ಬರನ್ನು ಸೇರಿಸಿ, ಆ ಸಂಘಟನೆಯನ್ನು ಏಮಾರಿಸಿ, ಇಡೀ ದಾಳಿಯನ್ನೇ ಭಾರತೀಯ ತನಿಖಾಧಿಕಾರಿಗಳು ನಿಷ್ಫಲಗೊಳಿಸಿರುವ ಅತ್ಯಂತ ರೋಚಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆಸಲು ತಯಾರಿಯಲ್ಲಿ ತೊಡಗಿದ್ದ ಕುಖ್ಯಾತ ಉಗ್ರ ಸಂಘಟನೆ ಐಸಿಸ್‌ ಗುಂಪಿನೊಳಕ್ಕೆ ತಮ್ಮ ಪ್ರತಿನಿಧಿಯೊಬ್ಬರನ್ನು ಸೇರಿಸಿ, ಆ ಸಂಘಟನೆಯನ್ನು ಏಮಾರಿಸಿ, ಇಡೀ ದಾಳಿಯನ್ನೇ ಭಾರತೀಯ ತನಿಖಾಧಿಕಾರಿಗಳು ನಿಷ್ಫಲಗೊಳಿಸಿರುವ ಅತ್ಯಂತ ರೋಚಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಭಾರತದಲ್ಲಿ ದಾಳಿ ನಡೆಸಲು ಬಂದಿದ್ದ ಐಸಿಸ್‌ ಭಯೋತ್ಪಾದಕನ ಹೆಡೆಮುರಿಯನ್ನು ಒಂದೂವರೆ ವರ್ಷದ ಹಿಂದೆಯೇ ಕಟ್ಟಿ, ಆಷ್ಘಾನಿಸ್ತಾನದಲ್ಲಿನ ಅಮೆರಿಕ ಅಧಿಕಾರಿಗಳಿಗೆ ಒಪ್ಪಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ಉಗ್ರವಾದಿ ನೀಡಿದ ಮಾಹಿತಿ ಆಧರಿಸಿ, ಆಷ್ಘಾನಿಸ್ತಾನದಲ್ಲಿ ತಾಲಿಬಾನ್‌ ವಿರುದ್ಧ ಯಶಸ್ವಿ ಹೋರಾಟಗಳನ್ನು ನಡೆಸುವಲ್ಲಿ ಅಮೆರಿಕ ಸಫಲವಾಗಿದೆ. ತನಿಖಾಧಿಕಾರಿಗಳ ಚಾಕಚಕ್ಯತೆಯಿಂದಾಗಿ ರಾಜಧಾನಿ ಸಂಭಾವ್ಯ ಘೋರ ಭಯೋತ್ಪಾದಕ ಕೃತ್ಯವೊಂದರಿಂದ ಪಾರಾದಂತಾಗಿದೆ.

ಆಗಿದ್ದೇನು?:  ದುಬೈನಲ್ಲಿರುವ ವ್ಯಕ್ತಿಗಳಿಂದ ಆಷ್ಘಾನಿಸ್ತಾನದ ಸ್ಥಳವೊಂದಕ್ಕೆ 35 ಲಕ್ಷ ರು. ಹಣ ವರ್ಗಾವಣೆಯಾಗಿತ್ತು. ಇದರ ಮೇಲೆ ನಿಗಾ ಇಟ್ಟಿದ್ದ ಭಾರತದ ವಿದೇಶಿ ಬೇಹುಗಾರಿಕಾ ಸಂಸ್ಥೆ ‘ರಾ’ ಕೂಲಂಕಷವಾಗಿ 18 ತಿಂಗಳ ಕಾಲ ಪರಿಶೀಲನೆ ನಡೆಸಿದಾಗ, ದೆಹಲಿಯಲ್ಲಿ ದಾಳಿಗೆ ಐಸಿಸ್‌ ಸಜ್ಜಾಗುತ್ತಿರುವ ಆತಂಕಕಾರಿ ಮಾಹಿತಿ ಗೊತ್ತಾಯಿತು.

ಐಸಿಸ್‌ ಸಂಘಟನೆಯ 12 ಯುವಕರಿಗೆ ಪಾಕಿಸ್ತಾನದಲ್ಲಿ ತರಬೇತಿ ಕೊಡಿಸಿ, ಬಾಂಬ್‌ ದಾಳಿ ನಡೆಸಲು ಭಾರತಕ್ಕೆ ಕಳುಹಿಸುತ್ತಿರುವ ಸ್ಫೋಟಕ ಮಾಹಿತಿ ಬಹಿರಂಗವಾಯಿತು. ಅಷ್ಟರಲ್ಲಾಗಲೇ 20 ವರ್ಷ ವಯಸ್ಸಿನ ಆಷ್ಘಾನಿಸ್ತಾನದ ಯುವಕನೊಬ್ಬ ದೆಹಲಿಗೆ ಕಾಲಿಟ್ಟಿದ್ದ. ಆತ್ಮಾಹುತಿ ಬಾಂಬ್‌ ದಾಳಿ ನಡೆಸುವ ಉದ್ದೇಶದಿಂದಲೇ ದೆಹಲಿ ಹೊರವಲಯದಲ್ಲಿರುವ ಲಜಪತ ನಗರದಲ್ಲಿರುವ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದ. ಈತನ ಚಲನವಲನಗಳ ಮೇಲೆ 80 ತನಿಖಾಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ನಿಗಾ ಇಟ್ಟಿದ್ದರು. ಆತ ತಮ್ಮ ಕಣ್ತಪ್ಪಿ ಹೋಗದಂತೆ ಎಚ್ಚರಿಕೆ ವಹಿಸಿದ್ದರು.

2017ರ ಮೇನಲ್ಲಿ ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ 23 ಮಂದಿಯ ಸಾವಿಗೆ ಕಾರಣವಾದ ಸ್ಫೋಟಕ್ಕೆ ಬಳಸಲಾದ ಬಾಂಬ್‌ಗಳನ್ನೇ ದೆಹಲಿಯಲ್ಲೂ ಬಳಸುವುದು ಈತನ ಕಾರ್ಯಯೋಜನೆಯಾಗಿತ್ತು. ಆ ವೇಳೆ ಉಪಾಯ ಮಾಡಿದ ತನಿಖಾಧಿಕಾರಿಗಳು, ತಮ್ಮ ಪ್ರತಿನಿಧಿಯೊಬ್ಬ ಉಗ್ರನ ಸ್ನೇಹಿತನಾಗುವಂತೆ ಮಾಡಿದರು. ಈ ಸ್ನೇಹಿತ ಐಸಿಸ್‌ ಉಗ್ರನಿಗೆ ಸ್ಫೋಟಕ ಸರಬರಾಜು ಮಾಡುವ ಮೂಲಕ ಆತನ ವಿಶ್ವಾಸ ಗಳಿಸಿದ್ದ. ಅಲ್ಲದೆ ಆತನಿಗೆ ಲಜಪತ ನಗರದಲ್ಲಿ ವಾಸ್ತವ್ಯಕ್ಕೂ ಅವಕಾಶ ಕಲ್ಪಿಸುವ ಮೂಲಕ ಅನುಮಾನ ಬಾರದಂತೆ ನಡೆದುಕೊಂಡಿದ್ದ. ಕೊನೆಗೆ 2017ರ ಸೆಪ್ಟೆಂಬರ್‌ನಲ್ಲಿ ಐಸಿಸ್‌ ಭಯೋತ್ಪಾದಕನನ್ನು ಬಂಧಿಸಿದ ತನಿಖಾಧಿಕಾರಿಗಳು, ಆತನನ್ನು ಆಷ್ಘಾನಿಸ್ತಾನಕ್ಕೆ ಕರೆದೊಯ್ದು ಅಲ್ಲಿನ ಅಮೆರಿಕ ಸೇನಾ ನೆಲೆಗೆ ಹಸ್ತಾಂತರಿಸಿದರು. ತನ್ಮೂಲಕ ಭಾರತದ ಮೇಲೆ ದಾಳಿ ನಡೆಸುವ ಐಸಿಸ್‌ ಪ್ರಯತ್ನ ವಿಫಲವಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಿ: ಸಿಎಂಗೆ ಮಹಿಳಾ ಆಯೋಗ ಮನವಿ
ಬಿಪಿಎಲ್ ಕಾರ್ಡ್‌ನ 2.95 ಲಕ್ಷ ಅರ್ಜಿ ವಿಲೇವಾರಿ: ಮುನಿಯಪ್ಪ