ಹಿಂಸಾಚಾರಕ್ಕೆ ತಿರುಗಿದ ಹಾಂಕಾಂಗ್ ಪ್ರತಿಭಟನೆ | ಪೊಲೀಸರ ಮೇಲೆಯೇ ಕಲ್ಲು ತೂರಾಟ, ಲೇಸರ್ ಲೈಟ್ | ವಾಹನಗಳಿಗೂ ಬೆಂಕಿ ಹಚ್ಚಿ ಪ್ರತಿಭಟನಾಕಾರರ ಆಕ್ರೋಶ | ಈ ವೇಳೆ ಪೊಲೀಸರಿಂದ ಜಲಫಿರಂಗಿ, ಅಶ್ರುವಾಯು ಮೊರೆ
ಹಾಂಕಾಂಗ್ (ಸೆ. 01): ಚೀನಾದ ಸ್ವಾಯತ್ತ ಪ್ರದೇಶವಾದ ಹಾಂಕಾಂಗ್‌ನಲ್ಲಿ ಕಳೆದ 13 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯು ಶನಿವಾರ ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರ ನಿಷೇಧಾಜ್ಞೆ ಹೊರತಾಗಿಯೂ, ಹಾಂಕಾಂಗ್ ಪ್ರಜಾಪ್ರಭುತ್ವದ ಪ್ರತಿಪಾದಕರು ಸಂಸತ್ತಿನ ಎದುರು ಬೃಹತ್ ಪ್ರತಿಭಟನೆ ಕೈಗೊಂಡರು.
ಈ ಹಿನ್ನೆಲೆ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಧರಣಿನಿರತರ ಮೇಲೆ ಅಶ್ರುವಾಯು ಹಾಗೂ ಜಲಫಿರಂಗಿ ದಾಳಿ ನಡೆಸಿದರು. ಅಲ್ಲದೆ, ಪ್ರತಿಭಟನೆಯ ನೇತೃತ್ವದ ವಹಿಸಿದ ಕೆಲವು ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.
undefined
ಭದ್ರತೆಯ ಕಾರಣಕ್ಕೆ ಹಾಂಕಾಂಗ್‌ನಲ್ಲಿ ಯಾವುದೇ ರೀತಿಯ ಪ್ರತಿಭಟನೆ ಕೈಗೊಳ್ಳದಂತೆ ನಿಷೇಧ ಹೇರಲಾಗಿತ್ತು. ಆದಾಗ್ಯೂ, ಶನಿವಾರ ಸಾವಿರಾರು ಮಂದಿ ಪ್ರತಿಭಟನಾಕಾರರು ಕಪ್ಪು ಟೀ ಶರ್ಟ್ ಹಾಗೂ ಛತ್ರಿಗಳನ್ನು ಹಿಡಿದು ಸಾಗರೋಪಾದಿಯಲ್ಲಿ ಭಾಗವಹಿಸಿದರು. ಚೀನಾದ ಆರ್ಥಿಕತೆಯ ಹೃದಯ ಎಂದೇ ಭಾವಿಸಲಾದ ಹಾಂಕಾಂಗ್‌ನಲ್ಲಿ ರಸ್ತೆಗಳನ್ನು ತಡೆದ ಹೋರಾಟಗಾರರು, ಪ್ರಜಾಪ್ರಭುತ್ವದ ಪರವಾದ ಘೋಷಣೆಗಳನ್ನು ಮೊಳಗಿಸಿದರು.
ಈ ಧರಣಿಯು ಮಧ್ಯಾಹ್ನದವರೆಗೂ ಶಾಂತವಾಗಿಯೇ ನಡೆದಿತ್ತು. ಆದರೆ, ಮಧ್ಯಾಹ್ನದ ಹೊತ್ತಿಗೆ ಕೆಲ ತೀವ್ರವಾದಿಗಳು ಸಂಸತ್ತಿಗೆ ಭದ್ರತೆ ಕಲ್ಪಿಸಲು ನಿಯೋಜನೆಯಾಗಿದ್ದ ಪೊಲೀಸರ ಮೇಲೆಯೇ ಕಲ್ಲು ತೂರಾಟ, ಲೇಸರ್ ಪೆನ್ ಮೂಲಕ ಬೆಳಕು ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿರೋಧಿಸಿದರು. ಈ ವೇಳೆ ಪೊಲೀಸರು ಉದ್ರಿಕ್ತರನ್ನು ಚದುರಿಸಲು ಜಲಫಿರಂಗಿ ಹಾಗೂ ಅಶ್ರುವಾಯುವನ್ನು ಸಿಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಪ್ರತಿಭಟನಾಕಾರನೋರ್ವ, ‘ನಾನು ಯಾವುದೇ ಪರಿಣಾಮ ಎದುರಿಸಲು ಸಿದ್ಧನಿದ್ದೇನೆ. ಹಾಂಕಾಂಗ್ ಆರೋಪಿಗಳನ್ನು ಚೀನಾಕ್ಕೆ ಹಸ್ತಾಂತರಿಸುವ ಮಸೂದೆ ವಿರೋಧಿಸಿ ಹಾಂಕಾಂಗ್ ಪ್ರಜೆಗಳು ಒಟ್ಟಿಗೆ ಸೇರುವ ಹಕ್ಕು ಹೊಂದಿದ್ದಾರೆ’ ಎಂದು ಗುಡುಗಿದ್ದಾರೆ.