ಬಸವನಗುಡಿಯಲ್ಲಿ ಐತಿಹಾಸಿಕ ಕಡಲೇಕಾಯಿ ಪರಿಷೆ

By Suvarna Web DeskFirst Published Nov 28, 2016, 7:24 AM IST
Highlights

ಕಡಲೇಕಾಯಿ ಪರಿಷೆಗೆ ಬೆಂಗಳೂರು ಸುತ್ತಮುತ್ತಲ ಹಳ್ಳಿಗಳು, ತುಮಕೂರು, ರಾಮನಗರ, ಚನ್ನಪಟ್ಟಣ, ಕೋಲಾರ, ಚಿಂತಾಮಣಿ, ಹೊಸೂರು ಸೇರಿದಂತೆ ದೂರದ ಬಿಜಾಪುರದಿಂದಲೂ ರೈತರು, ವ್ಯಾಪಾರಿಗಳು ಆಗಮಿಸಿದ್ದಾರೆ.

ಬೆಂಗಳೂರು(ನ. 28): ಐತಿಹಾಸಿಕ ಕಡಲೇಕಾಯಿ ಪರಿಷೆ ಸೋಮವಾರ ಹಾಗೂ ಮಂಗಳವಾರ ನಡೆಯಲಿದ್ದು, ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನದ ಬಳಿ ಜಾತ್ರೆ ಕಳೆಗಟ್ಟಿದೆ. ದೇವಸ್ಥಾನದ ಸುತ್ತುಮುತ್ತಲ ರಸ್ತೆಯಲ್ಲಿ ತರಹೇವಾರಿ ಕಡಲೇಕಾಯಿ, ಕಡಲೇಪುರಿ, ಖಾರ, ತಿಂಡಿ- ತಿನಿಸಿನ ರಾಶಿಗಳ ಸಾಲು ಕಂಡುಬಂದಿದ್ದು, ಭಾರಿ ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಿದ್ದಾರೆ. 

ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನದಲ್ಲಿ ಕಡೆಯ ಕಾರ್ತಿಕ ಸೋಮವಾರ ಹಾಗೂ ಅಮಾವಾಸ್ಯೆ​ಯಂದು ಪರಿಷೆ ನಡೆಯಲಿದ್ದು, ಸಂಭ್ರಮದ ಆಚರಣೆಗೆ ದೇವಸ್ಥಾನ ಸಜ್ಜಾಗಿದೆ. ಆಧುನಿಕ ಯುಗದಲ್ಲೂ ಆಚರಣೆ​ಯಲ್ಲಿರುವ ಪರಿಷೆಗೆ ಭಾನುವಾರವೇ ಸಾಕಷ್ಟುಸಂಖ್ಯೆಯಲ್ಲಿ ಜನರು ಭೇಟಿ ನೀಡಿದ್ದು ಅದರ ಮಹತ್ವ ಸಾರುತ್ತಿತ್ತು.

ಪರಿಷೆ ಹಿನ್ನೆಲೆಯಲ್ಲಿ ನ.28 ಮತ್ತು 29ರಂದು ಬ್ಯೂಗಲ್‌ ರಾಕ್‌ ಉದ್ಯಾನ ಮತ್ತು ಕತ್ತರಿಗುಪ್ಪೆಯ ನರಸಿಂಹಸ್ವಾಮಿ ಉದ್ಯಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ​ಗಳನ್ನು ಆಯೋಜಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಪರಿಷೆ ನಡೆಯುವ ಪ್ರದೇಶದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಪೊಲೀಸ್‌ ಸಿಬ್ಬಂದಿ ನಿಯೋಜನೆ ಕೂಡ ಪೂರ್ಣಗೊಂಡಿದೆ. ಸಂಚಾರ ವ್ಯವಸ್ಥೆಯಲ್ಲಿ ಕೆಲ ಬದಲಾವಣೆ ಮಾಡಲಾಗಿದ್ದು, ವಿದ್ಯುತ್‌ ಪೂರೈಕೆ, ಸ್ವಚ್ಛತೆಯಲ್ಲಿ ವ್ಯತ್ಯಯವಾಗದಂತೆ ಸಂಬಂಧಪಟ್ಟಇಲಾಖೆಗಳು ಅಗತ್ಯ ಕ್ರಮ ಕೈಗೊಂಡಿವೆ.

ಕಡಲೇಕಾಯಿ ಪರಿಷೆಗೆ ಬೆಂಗಳೂರು ಸುತ್ತಮುತ್ತಲ ಹಳ್ಳಿಗಳು, ತುಮಕೂರು, ರಾಮನಗರ, ಚನ್ನಪಟ್ಟಣ, ಕೋಲಾರ, ಚಿಂತಾಮಣಿ, ಹೊಸೂರು ಸೇರಿದಂತೆ ದೂರದ ಬಿಜಾಪುರದಿಂದಲೂ ರೈತರು, ವ್ಯಾಪಾರಿಗಳು ಆಗಮಿಸಿದ್ದಾರೆ. ಅಷ್ಟೇ ಅಲ್ಲದೆ ದೂರದ ತಮಿಳುನಾಡಿನ ಚಂಗೂರು, ತಿರುವಣ್ಣಾಮಲೈನಿಂದ ಕಡಲೆಕಾಯಿ ಕೊಂಡು ತಂದು ಮಾರಾಟ ಮಾಡುವವರೂ ಇದ್ದಾರೆ.

ಇಳುವರಿ ಕಡಿಮೆ: ಮುಂಗಾರು ಬೆಳೆ ಕಡಲೇಕಾಯಿ ಬಿತ್ತನೆಯಾಗುವುದು ಜೂನ್‌-ಜುಲೈ ಅವಧಿಯಲ್ಲಿ. ಈ ಬಾರಿ ಮಳೆಯ ಕೊರತೆ, ಬರದಿಂದಾಗಿ ಗುಣಮಟ್ಟದ ಕಾಯಿ ದೊರೆಯುತ್ತಿಲ್ಲ. ಜತೆಗೆ ಇಳುವರಿ ಕಡಿಮೆ ಆಗಿರುವುದರಿಂದ ಬೆಲೆ ಹೆಚ್ಚಾಗಿದೆ. ಪ್ರತಿ ಕೆ.ಜಿಗೆ 50ರಿಂದ 70 ರೂ ಹಾಗೂ ಪ್ರತಿ ಸೇರಿಗೆ 25 ರಿಂದ 30 ರೂ. ಬೆಲೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

ಚಿಲ್ಲರೆ ಸಮಸ್ಯೆ ಬಿಸಿ!: ಒಂದೆಡೆ ಮಳೆಯ ಕೊರತೆಯಿಂದ ಇಳುವರಿ ಕಡಿಮೆಯಾಗಿದೆ. ಇನ್ನೊಂದೆಡೆ 500 ಹಾಗೂ 1000 ರೂ. ಮುಖಬೆಲೆಯ ನೋಟು ಅಮಾನ್ಯದ ಬಿಸಿ. ಚಿಲ್ಲರೆ ಸಮಸ್ಯೆಯಿಂದ ರೈತರು, ಸಣ್ಣಪುಟ್ಟವ್ಯಾಪಾರಿಗಳ ವ್ಯವಹಾರಕ್ಕೆ ಹೊಡೆತಬಿದ್ದಿದೆ.

(ಕನ್ನಡಪ್ರಭ ವಾರ್ತೆ)

click me!