ದಿಲ್ಲಿಮಾತು: ರಾಜ್ಯ ಬಿಜೆಪಿಗೆ ಈಗ ಈಶ್ವರಪ್ಪ ತಲೆನೋವು

Published : Nov 28, 2016, 06:43 AM ISTUpdated : Apr 11, 2018, 12:47 PM IST
ದಿಲ್ಲಿಮಾತು: ರಾಜ್ಯ ಬಿಜೆಪಿಗೆ ಈಗ ಈಶ್ವರಪ್ಪ ತಲೆನೋವು

ಸಾರಾಂಶ

ನೋಟು ರದ್ದತಿಯ ಬಗ್ಗೆ ವಿವರಣೆಗಾಗಿ ಸಂಸದರಿಗೆ ಡಿನ್ನರ್‌ ನೀಡಲು ವಿತ್ತ ಸಚಿವರ ಮನೆಯಲ್ಲಿ ನೋಟುಗಳೇ ಇರಲಿಲ್ಲ! 50 ಜನಕ್ಕೆ ಊಟ ಹಾಕುವುದು ಕಷ್ಟಎಂದು ಅರುಣ್‌ ಜೇಟ್ಲಿ ಪತ್ನಿ ಡಿನ್ನರ್‌ ಆಯೋಜಿಸಲು ನಿರಾಕರಿಸಿಬಿಟ್ಟರು.

ಅಂಕಣ: ದಿಲ್ಲಿ ಮಾತು
ವರದಿ: ಪ್ರಶಾಂತ್ ನಾತು, ಸುವರ್ಣನ್ಯೂಸ್

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕರ್ನಾಟಕದ ಬಿಜೆಪಿ ಸಂಸದರ ಸಭೆ ನಡೆಸು­ತ್ತಿದ್ದಾಗ ‘ರಾಜ್ಯದಲ್ಲಿ ಏನಾಗುತ್ತಿದೆ' ಎಂದು ಕೇಳಿ­ದ್ದರು. ಕೂಡಲೇ ಕಿಸೆಯಿಂದ ಒಂದು ಹಾಳೆ ತೆಗೆದ ಯಡಿಯೂರಪ್ಪನವರು, ‘‘ರಾಜ್ಯದಲ್ಲಿ ಬಿಜೆಪಿ ಪರ­ವಾದ ವಾತಾವರಣವೇನೋ ಇದೆ. ಆದರೆ ಈಶ್ವರಪ್ಪ ಮಾಡುತ್ತಿರುವ ಕಿತಾಪತಿಯಿಂದ ಸಾಕಾಗಿ ಹೋಗಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಬಗ್ಗೆ ಮತ್ತೆ ಗೊಂದಲ ಎಬ್ಬಿಸುತ್ತಿದ್ದಾರೆ. ರಾಮಲಾಲ್‌ ಬಂದು ಬುದ್ಧಿ ಹೇಳಿದರೂ ಕೇಳುತ್ತಿಲ್ಲ'' ಎಂದು ಲಿಖಿತ ದೂರು ಸಲ್ಲಿಸಲು ಹೋದರು. ಆದರೆ ಯಡಿಯೂರಪ್ಪನವರು ಕೊಟ್ಟಿದ್ದ ದೂರಿನ ಹಾಳೆಯನ್ನು ವಾಪಾಸ್‌ ಅವರ ಕೈಗೆ ಕೊಟ್ಟಅಮಿತ್‌ ಶಾ, ‘‘ನೀವಿಬ್ಬರು ಒಂದೇ ಊರಿನವರು. ನೀವೇ ಕುಳಿತು ಬಗೆಹರಿಸಿಕೊಳ್ಳಿ. ಇಲ್ಲ­ವಾ­ದಲ್ಲಿ ನಾನು ಸೆಟರೈಟ್‌ ಮಾಡುತ್ತೇನೆ'' ಎಂದು ಹೇಳಿದರು. ಆಗ ಅಲ್ಲಿದ್ದ ಸಂಸದರೆಲ್ಲರೂ, ಈಶ್ವರಪ್ಪರ ಸಮಸ್ಯೆಯನ್ನು ಬಗೆಹರಿಸಿ. ಇಲ್ಲವಾದಲ್ಲಿ ಮಾಧ್ಯಮ­ಗಳು ನಮ್ಮ ಜಗಳವನ್ನೇ ದೊಡ್ಡದಾಗಿ ಬರೆಯುತ್ತವೆ ಎಂದು ಮನವಿ ಮಾಡಿಕೊಂಡರು. 

ಕೆಪಿಸಿಸಿ ಅಧ್ಯಕ್ಷ ಯಾರು?
ಕಾಂಗ್ರೆಸ್‌ ರಾಜ್ಯ ಅಧ್ಯಕ್ಷರಾಗಲು ಸಚಿವರಾದ ಜಿ ಪರಮೇಶ್ವರ್‌ ಮತ್ತು ಡಿ ಕೆ ಶಿವಕುಮಾರ್‌ ನಡುವೆ ಪೈಪೋಟಿ ಜೋರಾಗಿದೆ. ಇಬ್ಬರೂ ಅನೇಕ ದಿನಗಳ ಪ್ರಯತ್ನದ ನಂತರ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗುವಲ್ಲಿ ಯಶಸ್ವಿಯಾ­ಗಿ­ದ್ದಾರೆ. ಅನಾರೋಗ್ಯದ ಕಾರಣದಿಂದ ಸೋನಿಯಾ ಮೇಡಂ ಎರಡು ತಿಂಗಳಿನಿಂದ ಯಾರನ್ನೂ ಭೇಟಿ­ಯಾಗಿರಲಿಲ್ಲ. ಆದರೆ ಕಳೆದ ವಾರ ಸೋನಿಯಾರನ್ನು ಭೇಟಿಯಾದ ಪರಮೇಶ್ವರ್‌, ಬೇಕಾದಲ್ಲಿ ಮಂತ್ರಿ ಸ್ಥಾನ ಬಿಟ್ಟು ಕೊಡುತ್ತೇನೆ. ನನ್ನನ್ನೇ ಅಧ್ಯಕ್ಷರಾಗಿ ಮಾಡಿ ಎಂದು ಮನವಿ ಮಾಡಿದ್ದಾರೆ. ಅತ್ತ ಇಂಧನ ಸಚಿವ ಡಿ ಕೆ ಶಿವಕುಮಾರ ಸಚಿವ ಸ್ಥಾನದ ಜೊತೆಗೆ ಅಧ್ಯಕ್ಷ ಸ್ಥಾನ ಕೊಡಿ ಎಂದು ಬಿನ್ನವತ್ತಳೆ ಸಲ್ಲಿಸಿದ್ದಾರೆ. ಇನ್ನು ನಾನೇನು ಕಮ್ಮಿ ಎಂಬಂತೆ 7 ಬಾರಿ ಸಂಸದ­ರಾಗಿ­ರುವ ಕೆ ಎಚ್‌ ಮುನಿಯಪ್ಪನವರು ಮೇಡಂ ಬಳಿಗೆ ಹೋಗಿ ದಲಿತ ಬಲ ಮತ್ತು ಎಡ ವರ್ಗದ ಪಾಲಿಟಿಕ್ಸ್‌ ಮನವರಿಕೆ ಮಾಡಿದ್ದಾರೆ. ಆದರೆ ಮುಖ್ಯ­ಮಂತ್ರಿ ಸಿದ್ಧರಾಮಯ್ಯನವರಿಗೆ ಪರಮೇಶ್ವರ್‌, ಡಿ ಕೆ ಶಿವಕುಮಾರ್‌, ಮುನಿಯಪ್ಪ ಅಧ್ಯಕ್ಷ­ರಾ­ಗುವ ಬಗ್ಗೆ ಅಷ್ಟೊಂದು ಒಲವಿಲ್ಲ. ಯಾರಾದರೂ ಲಿಂಗಾಯತ­ರನ್ನು ಅಧ್ಯಕ್ಷರಾಗಿ ಮಾಡಿ ಎನ್ನುತ್ತಿದ್ದಾರಂತೆ ಸಿದ್ದು ಸಾಹೇಬರು. 

ಎನರ್ಜೆಟಿಕ್‌ ಮೋದಿ:
ಪ್ರಧಾನಿ ಮೋದಿಯನ್ನು ಯಾರು ಎಷ್ಟೇ ಟೀಕಿಸ­ಬಹುದು, ಆದರೆ ಮೋದಿ ಎನರ್ಜಿ ಮಾತ್ರ ಅನೇಕ­ರನ್ನು ಕುತೂಹಲಕ್ಕೆ ದೂಡುತ್ತದೆ. ನವೆಂಬರ್‌ 8ರಂದು ರಾತ್ರಿ ನೋಟು ರದ್ದತಿ ಘೋಷಣೆ ಮಾಡಿದ ಮೋದಿ, ಅವತ್ತು ರಾತ್ರಿ 11 ಗಂಟೆವರೆಗೆ ಮಂತ್ರಿಗಳೊಂದಿಗೆ ಸಭೆ ನಡೆಸಿ ಬೆಳಿಗ್ಗೆ 5 ಗಂಟೆಗೆ ಜಪಾನ್‌ ವಿಮಾನ ಹತ್ತಿದ್ದರು. ಅಲ್ಲಿಂದ ಮೂರು ದಿನಗಳ ಎಡೆಬಿಡದ ಕಾರ್ಯಕ್ರಮ ಮುಗಿಸಿ ರಾತ್ರಿ 12 ಗಂಟೆಗೆ ದೆಹಲಿಗೆ ಬಂದ ಮೋದಿ, ಮರುದಿನ ಬೆಳಿಗ್ಗೆ 9 ಗಂಟೆಗೆ ಗೋವಾದ ಪಣಜಿಯಲ್ಲಿದ್ದರು. ಮಧ್ಯಾಹ್ನ ಬೆಳಗಾವಿ, ಸಂಜೆ ಪುಣೆ ಕಾರ್ಯಕ್ರಮ ಮುಗಿಸಿ ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿ 2 ಗಂಟೆವರೆಗೆ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ನಂತರ ಬೆಳಿಗ್ಗೆ 9 ಗಂಟೆಗೆ ದೆಹಲಿಯಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗ­ವ­ಹಿಸಿ, ಮಧ್ಯಾಹ್ನ 1 ಗಂಟೆಗೆ ಉತ್ತರ ಪ್ರದೇಶದ ಗಾಜಿಪುರದಲ್ಲಿ 50 ನಿಮಿಷಗಳ ಬಿಜೆಪಿ ಪ್ರಚಾರ ಭಾಷಣ ಮುಗಿಸಿ ಸಂಜೆ 4 ಗಂಟೆಗೆ ದೆಹಲಿಯಲ್ಲಿ ಬಿಜೆಪಿ ಮಿತ್ರಪಕ್ಷಗಳೊಂದಿಗೆ ಸಭೆ ಮುಗಿಸಿದ್ದಾರೆ. ರಾತ್ರಿ ಸ್ಪೀಕರ್‌ ಸುಮಿತ್ರಾ ಮಹಾಜನ್‌ ಏರ್ಪಡಿಸಿದ್ದ ಡಿನ್ನರ್‌ನಲ್ಲಿ ಭಾಗವಹಿಸಿ ಅವತ್ತೇ ರಾತ್ರಿ ಮರಳಿ 2 ಗಂಟೆವರೆಗೆ ನೋಟು ರದ್ದತಿಯ ನಂತರ ಬ್ಯಾಂಕ್‌ಗಳಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಸಭೆ ನಡೆಸಿದ್ದಾರೆ. ಮೋದಿ ಆಪ್ತರು ಹೇಳುವ ಪ್ರಕಾರ, ಹೀಗೆ ಹಗಲು ರಾತ್ರಿ ಎನ್ನದೆ ಓಡಾಡುತ್ತಿರುವುದ­ರಿಂದಲೇ ಪ್ರಧಾನಿ ಆಗಾಗ್ಗೆ ಮಾತನಾಡುವಾಗ ಭಾವ­ನಾ­ತ್ಮಕವಾಗಿ ಅಳುತ್ತಾರೆ. ಬಿಜೆಪಿ ಬೀಟ್‌ ಕವರ್‌ ಮಾಡುವ ಪತ್ರಕರ್ತರು ತಮಾಷೆಯಾಗಿ ಹೇಳುವ ಪ್ರಕಾರ ಪ್ರಧಾನಿಗೆ ಒಂದು ಸಣ್ಣ ರಜೆಯ ಅವಶ್ಯಕತೆಯಿದೆ. 

ಮದುವೆಗೆ ಹೋಗಬೇಡಿ:
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿಎಸ್‌ ಯಡಿಯೂರಪ್ಪನವರು ಜನಾರ್ದನ ರೆಡ್ಡಿ ಪುತ್ರಿಯ ಮದುವೆಗೆ ಹೋಗಿದ್ದು ಪ್ರಧಾನಿ ಮೋದಿ ಅವರಿಗೆ ಸಿಟ್ಟು ಬರಿಸಿದೆ. ಹಣಕಾಸು ಸಚಿವ ಅರುಣ್‌ ಜೇಟ್ಲಿ ಮೂಲಕ ಮದುವೆಗೆ ಮುಂಚೆಯೇ ಯಡಿಯೂರಪ್ಪ­ನವರಿಗೆ ಮದುವೆಗೆ ಹೋಗಬೇಡಿ ಎಂದು ಸೂಚನೆ ಇತ್ತಂತೆ. ಆದರೂ ಮದುವೆಗೆ ಹೋಗಿದ್ದ ಯಡಿಯೂರಪ್ಪ­ನವರನ್ನು ಕರೆಸಿಕೊಂಡ ಅರುಣ್‌ ಜೇಟ್ಲಿ, ‘‘ಈಗಷ್ಟೇ ನಿಮ್ಮ ಮೇಲಿನ ಕೇಸ್‌ಗಳು ಕೆಳ ನ್ಯಾಯಾಲಯದಲ್ಲಿ ಮುಗಿದಿವೆ. ನಿಮಗೆ ಮದುವೆಗೆ ಹೋಗಬೇಡಿ ಎಂದು ಹೇಳಲಾಗಿತ್ತು. ಆದರೂ ಯಾಕೆ ಹೋಗುತ್ತೀರಿ. ಇಲ್ಲಿ ನಮ್ಮ ಸರ್ಕಾರ ಕಪ್ಪು ಹಣದ ವಿರುದ್ಧ ಸಮರ ಸಾರಿದೆ. ನೀವು ಅಲ್ಲಿ ಹೋಗಿ ಅದ್ಧೂರಿ ಮದುವೆಯಲ್ಲಿ ಪಾಲ್ಗೊಂಡರೆ ಪಕ್ಷದ ಇಮೇಜ್‌ ಏನಾಗಬೇಕು? ಪ್ರಧಾನಿ ಕೂಡ ನಿಮ್ಮ ಮೇಲೆ ಸಿಟ್ಟಾಗಿದ್ದಾರೆ'' ಎಂದು ಕ್ಲಾಸ್‌ ತೆಗೆದು­ಕೊಂಡಿ­ದ್ದಾರೆ. ಹಿಂದೊಮ್ಮೆ 2009ರಲ್ಲಿ ಯಡ್ಡಿ- ರೆಡ್ಡಿ ಜಗಳ ಬಿಡಿಸಲು ಹೋಗಿ ಹೈರಾಣಾಗಿ ಹೋಗಿದ್ದರು ಅರುಣ್‌ ಜೇಟ್ಲಿ.

ಡಿನ್ನರ್‌ ಸಭೆಗೂ ದುಡ್ಡಿಲ್ಲ:
‘‘ನೋಟು ರದ್ದತಿ ಬಗ್ಗೆ ತಿಳಿ ಹೇಳಲು ನೀವು ನಿಮ್ಮ ಮನೆಯಲ್ಲಿ 50 ಸಂಸದರನ್ನು ಊಟಕ್ಕೆ ಕರೆಯಿರಿ. ನಾನು ಮತ್ತು ಪ್ರಧಾನಿ ಮೋದಿ ಕೂಡ ಬರುತ್ತೇವೆ'' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಗೆ ಹೇಳಿ­ದ್ದರು. ಕೂಡಲೇ ತನ್ನ ಪತ್ನಿ ಸಂಗೀತಾರಿಗೆ ಫೋನ್‌ ಮಾಡಿದ ಅರುಣ್‌ ಜೇಟ್ಲಿ 50 ಸಂಸದರ ಡಿನ್ನರ್‌ಗೆ ತಯಾರಿ ಮಾಡು ಎಂದರು. ಆದರೆ ಸಂಗೀತಾ ಜೇಟ್ಲಿ, ‘‘ಕಳೆದ ವಾರವಷ್ಟೇ ಇಬ್ಬರ ಅಕೌಂಟ್‌ನಿಂದ 14 ಸಾವಿರ ತೆಗೆದಿದ್ದೇನೆ. ಈಗ 6 ಸಾವಿರ ಉಳಿದಿದೆ. ಕೇಟರಿಂಗ್‌ನವರು ಕಾರ್ಡ್‌ನಿಂದ ಪೇಮೆಂಟ್‌ ತೆಗೆದುಕೊಳ್ಳೋಲ್ಲ. 50 ಜನಕ್ಕೆ ಊಟ ಹಾಕುವುದು ಕಷ್ಟ'' ಎಂದು ಹೇಳಿದರು. ಸೆಂಟ್ರಲ್‌ ಹಾಲ್‌ನಲ್ಲಿ ಪತ್ರಕರ್ತರ ಬಳಿ ಹರಟೆ ಹೊಡೆಯುವಾಗ ಅರುಣ್‌ ಜೇಟ್ಲಿ ಸ್ವತಃ ಇದನ್ನು ಹೇಳಿಕೊಂಡಿದ್ದಾರೆ. 

ರಾಹುಲ್ ಸ್ಪೀಕಿಂಗ್‌:
ಕಾಂಗ್ರೆಸ್‌ ವರ್ಕಿಂಗ್‌ ಕಮಿಟಿ ಸಭೆಯಲ್ಲಿ ಅಂತೋನಿ ಸೇರಿದಂತೆ ಹಿರಿಯ ನಾಯಕರು ರಾಹುಲ್‌ ಗಾಂಧಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನ ವಹಿಸುವಂತೆ ಕೇಳಿ­ಕೊಂಡಾಗ ರಾಹುಲ್‌ ಗಾಂಧಿ ‘‘ನೀವು ಅಧಿಕೃತ­ವಾಗಿ ನಾನು ಅಧ್ಯಕ್ಷನಾಗಬೇಕು ಎಂದು ಇಲ್ಲಿ ಹೇಳು­ತ್ತೀರಿ. ಆದರೆ ಹೊರಗೆ ಹೋದ ಮೇಲೆ ನನ್ನ ಮೇಲೆ ಅನ­ಗತ್ಯ­ವಾಗಿ ಪತ್ರಕರ್ತರ ಎದುರು ಆಫ್‌ ದಿ ರೆಕಾರ್ಡ್‌ ಏನೇನೋ ಮಾತನಾಡುತ್ತೀರಿ. ನೀವು ಎಲ್ಲರೂ ನಿಜಕ್ಕೂ ಒಟ್ಟಾಗಿ ಹೇಳಿದರೆ ಮಾತ್ರ ನಾನು ಅಧ್ಯಕ್ಷನಾ­ಗುವ ಬಗ್ಗೆ ಯೋಚಿಸುತ್ತೇನೆ'' ಎಂದು ಹೇಳಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕರಾಗಿದ್ದ ಅಸ್ಸಾಂನ ಹೇಮಂತ್‌ ಶರ್ಮ ಮತ್ತು ಉತ್ತರ ಪ್ರದೇಶದ ರೀಟಾ ಬಹುಗುಣ ಜೋಶಿ ಪಕ್ಷ ಬಿಡುವಾಗ ತನ್ನ ಮೇಲೆ ನಡೆಸಿದ ವಾಗ್ದಾಳಿಯಿಂದ ಬಹಳ ನೊಂದಿದ್ದೇನೆ ಎಂದು ಕೂಡ ರಾಹುಲ… ಮುಕ್ತವಾಗಿ ಹೇಳಿ­ಕೊಂಡಿದ್ದಾರೆ ಎಂದು ಸುದ್ದಿ.

ಸುಷ್ಮಾ ಅನಾರೋಗ್ಯ:
ಮೂತ್ರಪಿಂಡ ಸಮಸ್ಯೆಯಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಸಂಸತ್‌ ಅಧಿವೇಶನದಿಂದ ದೂರ ಉಳಿದಿದ್ದು, ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿ­ರುವ ಕಾರಣದಿಂದ ಯಾರನ್ನೂ ಭೇಟಿಯಾಗುತ್ತಿಲ್ಲ. ಕಿಡ್ನಿ ಕಸಿಗಾಗಿ ದಾನಿಗಳನ್ನು ಹುಡುಕುತ್ತಿರುವ ಸುಷ್ಮಾ­ರಿಗೆ, ದಾನಿ ಸಿಕ್ಕಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವವರೆಗೂ ಡಯಾಲಿಸಿಸ್‌ ಅನಿವಾರ್ಯ. ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರಿಗೆ ಫೋನ್‌ ಮಾಡಿದ್ದ ಸುಷ್ಮಾ ಸ್ವರಾಜ್‌ ಸದನದಿಂದ ದೂರವಿರಲು ರಜೆ ಕೇಳಿದ್ದಾರೆ. ಅಲ್ಲದೆ ವಿದೇಶಾಂಗ ಇಲಾಖೆ ಸಂಬಂಧಿಸಿದ ಪ್ರಶ್ನೆಗಳಿ­ದ್ದಲ್ಲಿ ಎಂ ಜೆ ಅಕ್ಬರ್‌ ನೋಡಿಕೊಳ್ಳುತ್ತಾರೆ ಎಂದೂ ಹೇಳಿ­ದ್ದಾರೆ. ಸ್ಪೀಕರ್‌ ಸುಮಿತ್ರಾ ಅವರು, ‘‘ಚಿಂತೆ ಮಾಡಬೇಡಿ ಬಜೆಟ್‌ ಅಧಿವೇಶನಕ್ಕೆ ನೀವು ಆರೋಗ್ಯ­ವಾಗಿ ಬರುತ್ತೀರಿ'' ಎಂದು ಹೇಳಿದಾಗ, ‘‘ನಾನು ಮರಳಿ ಸದನಕ್ಕೆ ಬರುತ್ತೇನೋ ಇಲ್ಲವೋ, ದೈವೇಚ್ಛೆ ಏನಿದೆಯೋ'' ಎಂದು ಹತಾಶೆ ವ್ಯಕ್ತಪಡಿಸಿದ ಸುಷ್ಮಾ ಸ್ವರಾಜ್‌ಗೆ ಅಳು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಅವರ ಅಳು ಕಂಡು ಸುಮಿತ್ರಾ ಮಹಾಜನ್‌ ಅವರೂ ಭಾವನೆಗಳ ಕಟ್ಟೆಯೊಡೆದು ಬಿಕ್ಕಿ ಬಿಕ್ಕಿ ಅತ್ತರು.

ತೊಗಾಡಿಯ ಮೌನ:
ಮೋದಿ ಪ್ರಧಾನಿಯಾಗಿ ದೆಹಲಿಯಲ್ಲಿ ಅಧಿಕಾರ ಸ್ವೀಕರಿಸಿದ ಮೇಲೆ ವಿಶ್ವ ಹಿಂದೂ ಪರಿಷತ್ತಿನ ನಾಯಕ ಪ್ರವೀಣ್‌ ಭಾಯಿ ತೊಗಾಡಿಯ ಸಂಪೂರ್ಣ ಮೌನ­ವಾಗಿ­ದ್ದಾರೆ. ಒಂದು ಕಾಲದಲ್ಲಿ ಮೋದಿ ಪರಮಾಪ್ತ ಮಿತ್ರನಾಗಿದ್ದ ತೊಗಾಡಿಯ ನಂತರ ಮೋದಿ ಜೊತೆಗೆ ವೈರತ್ವ ಬೆಳೆಸಿಕೊಂಡಿದ್ದರು. ಹೀಗಾಗಿ ಮೋದಿ ಪ್ರಧಾನಿಯಾದ ಮೇಲೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ‘‘ಬಹಿರಂಗವಾಗಿ ಸರ್ಕಾರದ ವಿರುದ್ಧ ಏನೂ ಮಾತನಾಡಬೇಡಿ'' ಎಂದು ತೊಗಾಡಿಯ­ರಿಗೆ ಸೂಚನೆ ನೀಡಿದ್ದಾರೆ. ಕೆಲ ಗುಜರಾತಿ ಸಂಘ ಪರಿವಾರದ ನಾಯಕರು ಹೇಳುವ ಪ್ರಕಾರ ತೊಗಾಡಿಯ ಪ್ರಧಾನಿ ಮೋದಿ ಅವರೊಂ­ದಿಗೆ ಮರಳಿ ಜೊತೆಗೂಡಲು ತಯಾರಾಗಿದ್ದಾರೆ. ಆದರೆ ಮೋದಿ ಮಾತ್ರ ಯಾವುದೇ ಕಾರಣಕ್ಕೂ ತೊಗಾಡಿಯ­ರನ್ನು ಭೇಟಿಯಾಗಲು ತಯಾರಿಲ್ಲ.

ರಮ್ಯಾ ಪ್ರಯತ್ನ:
ವಿಧಾನಪರಿಷತ್‌ಗೆ ನಾಮ ನಿರ್ದೇಶನ ಮಾಡಲು ಸಿ ಎಂ ಲಿಂಗಪ್ಪ ಕೊಂಡಜ್ಜಿ ಮೋಹನ್‌ ಮತ್ತು ಕೆಪಿ ನಂಜುಂಡಿ ಹೆಸರುಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೈಕಮಾಂಡ್‌ಗೆ ಕಳುಹಿಸಿ 20 ದಿನ­ಗಳಾದರೂ ಈವರೆಗೆ ಅಸ್ತು ಎಂದಿಲ್ಲ. ಕೊಂಡಜ್ಜಿ ಮೋಹನ್‌ ಬಗ್ಗೆ ಮುಖ್ಯಮಂತ್ರಿಗಳು ಪಟ್ಟು ಹಿಡಿದರೆ, ನಂಜುಂಡಿ ಹೆಸರನ್ನು ಪರಮೇಶ್ವರ್‌ ಮತ್ತು ಲಿಂಗಪ್ಪ ಹೆಸರನ್ನು ಡಿ ಕೆ ಶಿವಕುಮಾರ ಗಟ್ಟಿಯಾಗಿ ಹಿಡಿದಿದ್ದಾರೆ. ಆದರೆ ಚಿತ್ರನಟಿ ರಮ್ಯಾ ಕೂಡ ತನಗಿರುವ ಹೈ ಕಮಾಂಡ್‌ ಕನೆಕ್ಷನ್‌ ಇಟ್ಟುಕೊಂಡು ಒಂದು ಪ್ರಯತ್ನ ನಡೆಸಿದ್ದಾರೆ ಎನ್ನುವುದು ಹೊಸ ಬೆಳವಣಿಗೆ. ಇಷ್ಟೆಲ್ಲಾ ಆದ ಮೇಲೆ ರಾಜ್ಯಪಾಲರು ಸುಲಭವಾಗಿ ಒಪ್ಪಿಗೆ ಕೊಡುತ್ತಾರೆಯೇ ಎಂಬ ಆತಂಕ ವಲಯದಲ್ಲಿದೆ. 

ಯೆಚೂರಿ- ಕಾರಟ್‌ ತಿಕ್ಕಾಟ:
ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಮತ್ತು ಪ್ರಕಾಶ್‌ ಕಾರಟ್‌ ನಡುವಿನ ತಿಕ್ಕಾಟ ಹಳೆಯದು. ಆದರೆ ಈಗ ಪಕ್ಷದ ಪ್ರಧಾನ ಕಾರ್ಯ­ದರ್ಶಿಯಾಗಿರುವ ಯೆಚೂರಿ ರಾಜ್ಯಸಭೆ­ಯಲ್ಲಿ ಮುಂದುವರಿಯುವ ಬಗ್ಗೆ ಪೊಲಿಟ್‌ ಬ್ಯೂರೋನಲ್ಲಿ ಪ್ರಕಾಶ ಕಾರಟ್‌ ಅಸಮಾಧಾನ ವ್ಯಕ್ತಪಡಿಸಿದ್ದು ಪಕ್ಷದ ಪರಂಪರೆ ಪ್ರಕಾರ ಒಂದನ್ನು ಆಯ್ಕೆ ಮಾಡಿಕೊಳ್ಳು­ವಂತೆ ಹೇಳಿದ್ದಾರೆ. ನೋಟು ರದ್ದತಿಯ ವಿಚಾರ­ದಲ್ಲಿಯೂ ಕಾಂಗ್ರೆಸ್‌ ಜೊತೆಗೆ ಕೈಜೋಡಿಸುವ ಬಗ್ಗೆ ಯೆಚೂರಿ ಉತ್ಸುಕರಾಗಿದ್ದರೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಜೊತೆ ಮೈತ್ರಿ ಬೇಡ ಅದು ಬೂಜ್ರ್ವಾ ಪಕ್ಷ ಎನ್ನುವುದು ಕಟ್ಟಾಕಮ್ಯುನಿಸ್ಟ್‌ ಪ್ರಕಾಶ್‌ ಕಾರಟ್‌ ಅಭಿಮತ.

(ಕನ್ನಡಪ್ರಭ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ಹಳದಿ ಮಾರ್ಗದ ಮೆಟ್ರೋ ನಿಲ್ದಾಣಗಳ ಬಳಿ, 6 ಹೊಸ ಬಿಎಂಟಿಸಿ ಬಸ್ ತಂಗುದಾಣಗಳ ಸ್ಥಾಪನೆ!
ಅಂಬಾನಿ ಅಳಿಯನಿಗೆ ಯಾಕೆ ಬಂತು ಇಂಥಾ ಸ್ಥಿತಿ, ಶ್ರೀರಾಮ್‌ ಲೈಫ್‌ ಇನ್ಶುರೆನ್ಸ್‌ ಪಾಲು ಮಾರಾಟಕ್ಕೆ ನಿರ್ಧಾರ!