
ಬೆಂಗಳೂರು: ಮಾಗಡಿ ಮುಖ್ಯರಸ್ತೆಯ ಪೊಲೀಸ್ ವಸತಿ ಗೃಹಗಳ ಸಮುಚ್ಛಯ ಸಮೀಪ ಅನಧಿಕೃತವಾಗಿ ಸಾಯಿಬಾಬಾ ದೇವಸ್ಥಾನ ನಿರ್ಮಾಣಕ್ಕೆ ಬೆಂಬಲ ನೀಡುತ್ತಿರುವ ಆರೋಪ ಸಂಬಂಧ ವಸತಿ ಸಚಿವ ಎಂ. ಕೃಷ್ಣಪ್ಪ ಹಾಗೂ ಅವರ ಪುತ್ರ ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಮತ್ತು ಪರಿಷತ್ ಸದಸ್ಯ ವಿ.ಸೋಮಣ್ಣ ಅವರಿಗೆ ಹೈಕೋರ್ಟ್ ಗುರುವಾರ ನೋಟಿಸ್ ನೀಡಿದೆ.
ದೇವಸ್ಥಾನದ ನಿರ್ಮಾಣದ ಕ್ರಮ ಪ್ರಶ್ನಿಸಿ ಎಸ್. ರವಿಚಂದ್ರ ಸೇರಿ ಮತ್ತಿತರ ಸ್ಥಳೀಯ ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಪ್ರಕರಣ ಸಂಬಂಧ ಹೈಕೋರ್ಟ್ ಈ ಹಿಂದೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಮುಜರಾಯಿ ಇಲಾಖೆ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿತ್ತು. ಗುರುವಾರ ವಸತಿ ಸಚಿವರ ಜೊತೆಗೆ ಬಿಬಿಎಂಪಿ ಆಯುಕ್ತರು, ನಗರ ಪೂರ್ವ ವಿಶೇಷ ಆಯುಕ್ತರು, ಸಾಯಿಬಾಬಾ ಸಾರ್ವಜನಿಕ ಗಣಪತಿ ದೇವಾಲಯ ಟ್ರಸ್ಟ್'ಗೂ ನ್ಯಾಯಪೀಠ ಇದೇ ವೇಳೆ ನೋಟಿಸ್ ನೀಡಿತು.
ಮಾಗಡಿ ರಸ್ತೆಯಲ್ಲಿ 500ಕ್ಕೂ ಹೆಚ್ಚು ಪೊಲೀಸ್ ವಸತಿ ಗೃಹಗಳನ್ನು ಸರ್ಕಾರ ನಿರ್ಮಾಣ ಮಾಡುತ್ತಿದೆ. ಇಲ್ಲಿ ಸುಮಾರು 1,000 ಪೊಲೀಸ್ ಕುಟುಂಬಗಳು ವಾಸ ಮಾಡುತ್ತಿವೆ. ಪಕ್ಕದ ಒಂದು ಎಕರೆ ಜಾಗವನ್ನು ಉದ್ಯಾನ ನಿರ್ಮಾಣಕ್ಕಾಗಿ ಗೊತ್ತು ಮಾಡಲಾಗಿದ್ದರೂ, ಆ ಜಾಗದಲ್ಲಿ ಸಾಯಿಬಾಬಾ ಸಾರ್ವಜನಿಕ ಗಣಪತಿ ದೇವಾಲಯ ಟ್ರಸ್ಟ್ ಅನಧಿಕೃತವಾಗಿ ಸಾಯಿಬಾಬಾ ದೇವಸ್ಥಾನ ನಿರ್ಮಾಣ ಮಾಡುತ್ತಿದೆ. ಅದಕ್ಕೆ ವಸತಿ ಸಚಿವ ಎಂ. ಕೃಷ್ಣಪ್ಪ, ಶಾಸಕ ಪ್ರಿಯಕೃಷ್ಣ ಮತ್ತು ವಿಧಾನ ಪರಿಷತ್ ಸದಸ್ಯ ವಿ. ಸೋಮಣ್ಣ ಬೆಂಬಲ ನೀಡುತ್ತಿದ್ದಾರೆ. ರಾಜಕಾರಣಿಗಳ ಬೆಂಬಲದೊಂದಿಗೆ ಸಾಯಿಬಾಬಾ ದೇವಾಲಯಯದ ಟ್ರಸ್ಟ್, ಭಕ್ತಾದಿಗಳಿಂದ ಹಣ ಸಂಗ್ರಹಿಸುತ್ತ ಹಗಲು ದರೋಡೆ ಮಾಡುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಜೊತೆಗೆ, ಸಾರ್ವಜನಿಕ ಉದ್ಯಾನ, ಸಾರ್ವಜನಿಕ ರಸ್ತೆ ಹಾಗೂ ಪ್ರದೇಶಗಳಲ್ಲಿ ದೇವಸ್ಥಾನ, ಮಸೀದಿ, ಕ್ರೈಸ್ತ ದೇವಾಲಯ ಮತ್ತು ಗುರುದ್ವಾರ ಸೇರಿದಂತೆ ಯಾವುದೇ ಧಾರ್ಮಿಕ ಕಟ್ಟಡ ನಿರ್ಮಾಣ ಮಾಡುವುದನ್ನು ತಡೆಗಟ್ಟಬೇಕು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಹೀಗಿದ್ದರೂ ಪಾರ್ಕ್ ಜಾಗದಲ್ಲಿ ಸಾಯಿಬಾಬಾ ದೇವಸ್ಥಾನ ನಿರ್ಮಿಸುತ್ತಿರುವುದು ಕಾನೂನು ಬಾಹಿರವಾಗಿವೆ ಮತ್ತು ಇದನ್ನು ತಡೆಗಟ್ಟಲು ಬಿಬಿಎಂಪಿ ಹಾಗೂ ಸರ್ಕಾರ ವಿಫಲವಾಗಿದೆ. ಆದ್ದರಿಂದ ದೇವಸ್ಥಾನವನ್ನು ಮುಜರಾಯಿ ಇಲಾಖೆಯ ವಶಕ್ಕೆ ಪಡೆದು, ಆಡಳಿತ ನಿರ್ವಹಣೆಗೆ ಸರ್ಕಾರದಿಂದ ಆಡಳಿತಾಧಿಕಾರಿಯನ್ನು ನೇಮಿಸಲು ಸರ್ಕಾರಕ್ಕೆ ಆದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.
ಕನ್ನಡಪ್ರಭ ವಾರ್ತೆ
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.