
ಬೆಂಗಳೂರು (ಮೇ.04): ಹೃದ್ರೋಗ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆ ಎದುರಿಸುತ್ತಾ ಶೋಚನೀಯ ಜೀವನ ನಡೆಸುತ್ತಿರುವ ವೃದ್ಧ ತಂದೆ-ತಾಯಿಯ ಯೋಗಕ್ಷೇಮ ನೋಡಿಕೊಳ್ಳದ ಇಬ್ಬರು ಸುಶಿಕ್ಷಿತ ಮಕ್ಕಳಿಗೆ ಹೈಕೋರ್ಟ್ ೨೦ ಸಾವಿರ ರು. ದಂಡ ವಿಧಿಸಿದ್ದಲ್ಲದೆ ಪೋಷಕರಿಗೆ ಮಾಸಿಕ ಏಳು ಸಾವಿರ ರು. ಜೀವನಾಂಶ ನೀಡುವಂತೆ ಅಪರೂಪ ಆದೇಶ ಮಾಡಿರುವ ಪ್ರಕರಣವಿದು.
ಕೆಎಸ್‌ಆರ್‌ಟಿಸಿ ನಿವೃತ್ತ ಚಾಲಕ ಕಲಬುರಗಿ ನಿವಾಸಿ ಸುರೇಶ್ (೬೭) ಕಲಬುರಗಿಯ ಜಿಲ್ಲಾ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿದ್ದರು. ‘ನಾನು ೨೦೦೮ರಲ್ಲಿ ಸೇವೆಯಿಂದ ನಿವೃತ್ತ್ತಿಯಾಗಿದ್ದೇನೆ. ಮಾಸಿಕ ೧,೯೫೧ರು. ಪಿಂಚಣಿ ಪಡೆಯುತ್ತಿದ್ದು, ಶಹಬಾದ್‌ನಲ್ಲಿ ಮಾಸಿಕ ೨೦೦೦ ರು.ಗೆ ಬಾಡಿಗೆ ಮನೆ ಮಾಡಿಕೊಂಡಿದ್ದೇನೆ. ನಾನು ಹೃದ್ರೋಗ, ಮಧುಮೇಹ ಮತ್ತು ರಕ್ತದೊತ್ತಡ ಸಮಸ್ಯೆಯಿಂದ ನರಳುತಿದ್ದೇನೆ. ಇನ್ನು ಪತ್ನಿ ಮತ್ತು ಮೂರನೇ ಪುತ್ರ ಮಾನಸಿಕ ಅಸ್ವಸ್ಥರಾಗಿದ್ದಾರೆ. ನನಗೆ ಎರಡು ಬಾರಿ ಲಘು ಹೃದಯಾಘಾತವಾಗಿದ್ದು, ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆಗಳು ಇವೆ. ಸದ್ಯ ಬಾಡಿಗೆಯನ್ನೂ ಕಟ್ಟಲಾಗುತ್ತಿಲ್ಲ. ಸ್ನೇಹಿತರಿಂದ ಪಡೆದ ೧೫೦೦೦ ರು. ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು.
ನನ್ನ ಹಿರಿಯ ಪುತ್ರ ವೀರಶೆಟ್ಟಿಯು ಬೆಂಗಳೂರಿನ ಕನಕಪುರ ರಸ್ತೆಯ ಎಪಿಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು ಮಾಸಿಕ ೯೦ ಸಾವಿರ ರು. ವೇತನ ಪಡೆಯುತ್ತಿದ್ದಾರೆ. ಎರಡನೇ ಪುತ್ರ ಲಕ್ಷ್ಮೀಕಾಂತ್, ಗೋಕಾಕ್ ಎನ್‌ಇಕೆಆರ್‌ಟಿಸಿ ಡಿಪೋದಲ್ಲಿ ಚಾಲಕ ಹಾಗೂ ಕಂಡಕ್ಟರ್ ಆಗಿದ್ದು ಮಾಸಿಕ ೨೦ ಸಾವಿರ ರು. ಪಡೆಯುತ್ತಿದ್ದಾರೆ. ಆದರೆ, ಇಬ್ಬರು ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದು, ನಮ್ಮ ಯೋಗಕ್ಷೇಮ ನೋಡಿಕೊಳ್ಳುತ್ತಿಲ್ಲ. ಸದ್ಯ ಆರ್ಥಿಕ ಸಂಕಷ್ಟದಿಂದ ಶೋಚನೀಯ ಜೀವನ ನಡೆಸುತ್ತಿದ್ದೇನೆ. ಹೀಗಾಗಿ, ತಮ್ಮ ಹಿರಿಯ ಪುತ್ರರಿಂದ ಮಾಸಿಕ ೪೦ ಸಾವಿರ ರು. ಜೀವನಾಂಶ ಕೊಡಿಸುವಂತೆ ಕೋರಿದ್ದರು.
ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಹಿರಿಯ ಮಗ ವೀರಶೆಟ್ಟಿ ಮಾಸಿಕ ೫ ಸಾವಿರ, ಎರಡನೇ ಮಗ ಲಕ್ಷ್ಮೀ ಕಾಂತ್ ಮಾಸಿಕ ೨,೫೦೦ ರು.ಗಳನ್ನು ತಮ್ಮ ತಂದೆಗೆ ಜೀವನಾಂಶವಾಗಿ ನೀಡಬೇಕು ಎಂದು ಆದೇಶಿಸಿತ್ತು. ಆದರೆ ಜೀವನಾಂಶ ಮೊತ್ತ ಕಡಿಮೆ ಮಾಡುವಂತೆ ಕೋರಿ ಪುತ್ರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠವು ತಂದೆಗೆ ಜೀವನಾಂಶ ನೀಡದ ಲಕ್ಷ್ಮೀಕಾಂತ್ ಮತ್ತು ವೀರಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅರ್ಜಿ ವಜಾಗೊಳಿಸಿತು. ಜತೆಗೆ, ಇಬ್ಬರಿಗೂ ತಲಾ ೧೦ ಸಾವಿರ ರು. ದಂಡ ವಿಧಿಸಿ, ಆ ದಂಡದ ಹಣವನ್ನು ಒಂದು ತಿಂಗಳಲ್ಲಿ ತಂದೆಗೆ ಪಾವತಿಸಬೇಕು. ತಪ್ಪಿದರೆ ತಂದೆಯು ಕೋರ್ಟ್ ಅಧಿಕಾರಿ ಮೂಲಕ ಮಕ್ಕಳಿಂದ ವಸೂಲಿ ಮಾಡಿಕೊಳ್ಳಬಹುದು ಎಂದು ಅಪರೂಪದ ಆದೇಶ ಮಾಡಿದೆ.
ದುರದೃಷ್ಟಕರ ಪ್ರಕರಣ:
ಇದೊಂದು ಅತ್ಯಂತ ದುರದೃಷ್ಟಕರ ಪ್ರಕರಣ ಎಂಬುದಾಗಿ ಆದೇಶದ ಮೊದಲ ವಾಕ್ಯದಲ್ಲಿ ಹೇಳಿದ ನ್ಯಾಯಮೂರ್ತಿಗಳು, ‘ತಂದೆಯ ರಕ್ತದಿಂದ ಹುಟ್ಟಿ, ಆತನ ನೆರಳಿನಲ್ಲಿ ಉತ್ತಮ ಶಿಕ್ಷಣ ಹಾಗೂ ಉದ್ಯೋಗ ಪಡೆದು ಕೈತುಂಬಾ ಸಂಬಳ ಪಡೆಯುತ್ತಿರುವ ಮಕ್ಕಳು, ತಂದೆ ಹಾಗೂ ತಾಯಿನ್ನು ನೋಡಿಕೊಳ್ಳುವುದು ಕರ್ತವ್ಯ. ಆದರೆ, ಪ್ರಕರಣದಲ್ಲಿ ತಂದೆ-ತಾಯಿಗೆ ಜೀವನಾಂಶ ನೀಡದೆ ಕೋರ್ಟ್‌ಗೆ ಮೆಟ್ಟಿಲೇರಿರುವುದು ದುರಾದೃಷ್ಟಕರ ಸಂಗತಿ. ಮಕ್ಕಳ ಇಂತಹ ಧೋರಣೆಯಿಂದಲೇ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಇಂತಹ ಪ್ರಕರಣಗಳನ್ನು ತಡೆಯಬೇಕು. ಪ್ರಕರಣದಲ್ಲಿ ತಂದೆಗೆ ಈಗಾಗಲೇ ಎರಡು ಬಾರಿ ಲಘು ಹೃದಯಘಾತ ಸಂಭವಿಸಿದೆ. ತಾಯಿ ಹಾಗೂ ಇನ್ನೊಬ್ಬ ಸಹೋದರ ಅನಾರೋಗ್ಯದಿಂದ ನರಳುತ್ತಾ ಶೋಚನೀಯ ಜೀವನ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅರ್ಜಿದಾರರು, ಪೋಷಕರಿಗೆ ನೈತಿಕ ಹಾಗೂ ಆರ್ಥಿಕ ಬೆಂಬಲ ನೀಡುವುದು ಅಗತ್ಯ ಎಂದು ಹೇಳಿದೆ.
‘ಜೀವನವು ಪ್ರತಿಕ್ರಿಯೆ, ಪ್ರತಿಧ್ವನಿ ಮತ್ತು ಪ್ರತಿಫಲನ ಹೊಂದಿರುತ್ತದೆ. ಸದ್ಯ ತಮ್ಮ ಪೋಷಕರ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದಾರೋ, ಅದನ್ನೇ ತಾವು ಮುಂದೆ ಎದುರಿಸುತ್ತೇವೆ ಎಂಬುದನ್ನು ಅರಿತುಕೊಳ್ಳಲು ಹೃದಯ ಹೀನರಾದ ಅರ್ಜಿದಾರರಿಗೆ (ಮಕ್ಕಳು) ಇದು ಸೂಕ್ತ ಸಮಯ’.
- ಹೈಕೋರ್ಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.