ಸಚಿವ ಎನ್‌. ಮಹೇಶ್‌ ರಾಜೀನಾಮೆ ಸುತ್ತ ಹಲವು ಅನುಮಾನಗಳ ಹುತ್ತ

By Web DeskFirst Published Oct 12, 2018, 9:45 AM IST
Highlights

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್‌. ಮಹೇಶ್‌ ರಾಜೀನಾಮೆ ಸುತ್ತ ಹಲವು ಅನುಮಾನಗಳ ಹುತ್ತ ಹುಟ್ಟಿಕೊಂಡಿವೆ. 

ಬೆಂಗಳೂರು, [ಅ. 12]: ಮೈತ್ರಿ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ದಿಢೀರ್ ರಾಜೀನಾಮೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

 ಎನ್‌.ಮಹೇಶ್‌ ಅವರು ಹಠಾತ್ತನೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಹಿಂದೆ ಬಿಎಸ್‌ಪಿಯ ರಾಷ್ಟ್ರ ರಾಜಕಾರಣದಲ್ಲಿನ ಲೆಕ್ಕಾಚಾರ ಅಡಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ, ಅದರ ಹಿಂದೆ ಇನ್ನೂ ಅನೇಕ ಕಾರಣಗಳಿವೆ ಎಂಬ ಮಾಹಿತಿ ಹೊರಬೀಳುತ್ತಿವೆ. 

ಮೈತ್ರಿ ಸರ್ಕಾರಕ್ಕೆ ಮೊದಲ ಶಾಕ್: ಸಚಿವ ಎನ್. ಮಹೇಶ್ ರಾಜೀನಾಮೆ

ಮಹೇಶ್‌ ಅವರೊಬ್ಬರೇ ಬಿಎಸ್‌ಪಿಯಿಂದ ಗೆಲುವು ಸಾಧಿಸಿದ ಏಕೈಕ ಶಾಸಕರಾಗಿರುವುದರಿಂದ ಜೆಡಿಎಸ್‌ ಕೋಟಾದಲ್ಲಿಯೇ ಸಚಿವ ಸ್ಥಾನವೂ ಸಿಕ್ಕಿತ್ತು. ನೇರವಾಗಿ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಆಗಿಯೇ ಇಲ್ಲ. ಹೀಗಿರುವಾಗ ದಿಢೀರನೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಹಲವು ಅನುಮಾನಗಳಿಗೂ ಅವಕಾಶ ಮಾಡಿಕೊಟ್ಟಿದೆ.

ಮಹೇಶ್ ರಾಜೀನಾಮೆಗೆ ಈ ಕಾರಣಗಳಿರಬಹುದಾ?

* ಹಲವು ಬಾರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಮೊದಲ ಬಾರಿಗೆ ಗೆದ್ದಿರುವ ಮಹೇಶ್‌ ಅವರಿಗೆ ಆಡಳಿತದ ಶಕ್ತಿ ಕೇಂದ್ರವಾದ ವಿಧಾನಸೌಧದಲ್ಲಿನ ವ್ಯವಸ್ಥೆಯೇ ಅರ್ಥವಾಗದೇ ಇದ್ದಿರಬಹುದು. 

* ಮಹೇಶ್‌ ಅವರಿಗೆ ಅನುಭವದ ಕೊರತೆ ಕಾಡಿರಬಹುದು ಎಂಬ ಮಾತು ಕೇಳಿಬರುತ್ತಿದೆ.

* ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಂಥ ಮಹತ್ವದ ಖಾತೆ ದೊರೆತಿದ್ದರಿಂದ ಆ ಖಾತೆಯ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲರಾದ್ರಾ?

* ಈ ಬಾರಿಯ ಸಂಪುಟ ವಿಸ್ತರಣೆ ವೇಳೆ ಮಹೇಶ್ ಅವರನ್ನು ಕೈಬಿಟ್ಟು ಬೇರೆಯವರಿಗೆ ಅವಕಾಶ ನೀರಲಾಗುತ್ತೆ ಎನ್ನುವ ಸುದ್ದಿಗಳು ಹಬ್ಬಿದ್ದವು. ಇದನ್ನು ತಿಳಿದೇ ಮಹೇಶ್ ರಾಜೀನಾಮೆ ಕೊಟ್ರಾ?

* ಜೆಡಿಎಸ್‌ನ ಶಿಕ್ಷಣ ಕ್ಷೇತ್ರ ಪ್ರತಿನಿಧಿಸುವ ಹಲವು ಶಾಸಕರು ಸವಾರಿ ಮಾಡುತ್ತಿದ್ದರು ಎನ್ನುವ ಗಂಭೀರ ಆರೋಪವೂ ಕೇಳಿಬಂದಿದೆ.

* ಚಾಮರಾಜನಗರ ಜಿಲ್ಲೆಯನ್ನೇ ಪ್ರತಿನಿಧಿಸುವ ಕಾಂಗ್ರೆಸ್ಸಿನ ಸಚಿವ ಪುಟ್ಟರಂಗ ಶೆಟ್ಟಿಅವರೊಂದಿಗೆ ಆರಂಭದಿಂದಲೂ ತಿಕ್ಕಾಟ ಉಂಟಾಗಿತ್ತು. ಇದು ಬಹಿರಂಗವಾಗಿ ವಾಕ್ಸಮರ ನಡೆಯುವ ಮಟ್ಟಕ್ಕೂ ಹೋಗಿತ್ತು.

* ಕಾಂಗ್ರೆಸ್‌ ಪಕ್ಷದೊಂದಿಗೆ ಮೊದಲಿನಿಂದಲೂ ಅಂತರ ಕಾಪಾಡಿಕೊಂಡೇ ಬಂದಿದ್ದ ಮಹೇಶ್‌ ಅವರಿಗೆ ಸರ್ಕಾರದಲ್ಲಿ ಕಾಂಗ್ರೆಸ್‌ ಜೊತೆ ಅಧಿಕಾರ ಹಂಚಿಕೊಂಡಿರುವುದು ನುಂಗಲಾರದ ತುತ್ತಾಗಿತ್ತು. 

* ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಬಲಪಡಿಸುವುದೇ ಮುಖ್ಯವಾಗಿರುವುದರಿಂದ ಸಚಿವ ಸ್ಥಾನದ ಬದಲು ಶಾಸಕ ಸ್ಥಾನದ ಜೊತೆಗೆ ಬಿಎಸ್‌ಪಿಯ ರಾಜ್ಯಾಧ್ಯಕ್ಷ ಹುದ್ದೆಯಲ್ಲೇ ಮುಂದುವರೆಯುವುದು ಸೂಕ್ತ ಎಂಬ ನಿಲವಿಗೆ ಬಂದಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

click me!