
ಕೆಲವರು ಅನಗತ್ಯವಾಗಿ ಬ್ಯಾಂಕ್'ಗಳಲ್ಲಿ ಹಲವು ಉಳಿತಾಯ ಖಾತೆಗಳನ್ನು ತೆರೆಯುತ್ತಾರೆ. ಒಂದೋ ಎಲ್ಲ ಖಾತೆಗಳ ಮೂಲಕ ಅವರು ವ್ಯವಹಾರ ನಡೆಸುತ್ತಾರೆ ಇಲ್ಲವೇ ಖಾತೆಗಳ ಉದ್ದೇಶ ಮುಗಿದ ಬಳಿಕ ಅದನ್ನು ಮುಕ್ತಾಯಗೊಳಿಸುವುದನ್ನು ಮರೆಯುತ್ತಾರೆ. ಉದಾಹರಣೆಗೆ, ಹಳೆಯ ವೇತನ ಖಾತೆಗಳು ಚಾಲ್ತಿಯಲ್ಲಿ ಇಲ್ಲದಿದ್ದರೂ, ಬಹುತೇಕ ಸಕ್ರಿಯವಾಗೇ ಇರುತ್ತವೆ. ಅಂಥ ಖಾತೆಗಳನ್ನು ಮುಕ್ತಾಯಗೊಳಿಸುವುದರಿಂದ ಆರ್ಥಿಕವಾಗಿ ಉಪಯೋಗವಿದೆ. ಏಕೆಂದರೆ,
1.ಕನಿಷ್ಠ ಮೊತ್ತವನ್ನು ಖಾತೆಗಳಲ್ಲಿ ಉಳಿಸಬೇಕಾಗಿರುವುದರಿಂದ, ಅನಗತ್ಯ ವೆಚ್ಚ ಆಗಲಿದೆ.
-ಬಹುತೇಕ ಬ್ಯಾಂಕ್'ಗಳು ಖಾತೆಗಳಲ್ಲಿ ಮಾಸಿಕ ಕನಿಷ್ಠ ಮೊತ್ತವನ್ನು ಅಥವಾ ಸರಾಸರಿ ತ್ರೈಮಾಸಿಕ ಮೊತ್ತವನ್ನು ಇರಿಸಬೇಕೆಂದು ಹೇಳುತ್ತವೆ. ಈ ಕನಿಷ್ಠ ಮೊತ್ತ 5,000 ದಿಂದ 25,000 ರೂ.ವರೆಗೆ ಇರಬಹುದಾಗಿದ್ದು, ಒಂದು ವೇಳೆ ನೀವು ಅಷ್ಟು ಮೊತ್ತವನ್ನು ಉಳಿಸಲು ವಿಫಲರಾದಲ್ಲಿ ದಂಡ ಕಟ್ಟಬೇಕಾಗುತ್ತದೆ. ಆದ್ದರಿಂದ, ಖಾತೆಗಳು ಸಕ್ರಿಯವಾಗಿರದೆ ಇದ್ದಲ್ಲಿ ಅದರಲ್ಲಿ ಕನಿಷ್ಠ ಮೊತ್ತವನ್ನು ಇರಿಸುವುದು ಅನಗತ್ಯ ವೆಚ್ಚವಾಗಿರಲಿದೆ.
ವೇತನ ಖಾತೆಗಳು ಕೂಡ,ಅವು ಶೂನ್ಯ ಶಿಲ್ಕು ಖಾತೆಗಳಾಗಿದ್ದರೂ, ಒಂದು ವೇಳೆ 3 ತಿಂಗಳು ಕಾಲ ಸಕ್ರಿಯವಾಗಿರದೆ ಹೋದಲ್ಲಿ ಉಳಿತಾಯ ಖಾತೆಯಾಗಿ ಪರಿವರ್ತನೆ ಆಗಲಿವೆ. ಇಂಥ ಖಾತೆಗಳಲ್ಲಿ ಕೂಡ ಕನಿಷ್ಠ ಮೊತ್ತವನ್ನು ಇರಿಸಬೇಕಾಗುತ್ತದೆ.
2. ಸ್ವಲ್ಪ ಪ್ರಮಾಣದ ಮಾಸಿಕ ಶುಲ್ಕಗಳಿಂದ ಆರ್ಥಿಕ ಹೊರೆ
-ಬಹುತೇಕ ಉಳಿತಾಯ ಖಾತೆಗಳು ಡೆಬಿಟ್ ಕಾರ್ಡ್, ಎಸ್ಎಂಎಸ್ ಎಚ್ಚರ, ಫೋನ್ ಬ್ಯಾಂಕಿಂಗ್ ಮತ್ತು ಏಟಿಎಂ ಬಳಕೆಗೆ ಸೇರಿದಂತೆ ನಾನಾ ಶುಲ್ಕಗಳನ್ನು ವಿಧಿಸುತ್ತವೆ. ಇವುಗಳನ್ನೆಲ್ಲ ಸೇರಿಸಿದರೆ, ಸ್ವಲ್ಪಮಟ್ಟಿಗೆ ದೊಡ್ಡ ಮೊತ್ತವೇ ಆಗಲಿದೆ.ಅನಗತ್ಯವಾದ ಖಾತೆಗಳನ್ನು ಮುಕ್ತಾಯಗೊಳಿಸಿದರೆ,ಸ್ವಲ್ಪ ಹೆಚ್ಚಿನ ಮೊತ್ತವನ್ನೇ ಉಳಿಸಬಹುದು.
3.ಹೂಡಿಕೆ ಅವಕಾಶ ನಷ್ಟ
-ಹಲವು ಉಳಿತಾಯ ಖಾತೆಗಳನ್ನು ಹೊಂದಿದ್ದರೆ, ಅವುಗಳಲ್ಲಿ ಕನಿಷ್ಠ ಶಿಲ್ಕು ಉಳಿಸಬೇಕಾದ್ದು ಕಡ್ಡಾಯ. ಉಳಿತಾಯ ಖಾತೆಯಲ್ಲಿನ ಮೊತ್ತಕ್ಕೆ ನಿಮಗೆ ಸಿಗಬಹುದಾದ್ದು ಹೆಚ್ಚೆಂದರೆ ವಾರ್ಷಿಕ ಶೇ 4 ಬಡ್ಡಿ.ಇದು ಪಿಪಿಎಫ್,ಮ್ಯುಚುಯಲ್ ಫಂಡ್ ಇತ್ಯಾದಿ ಹೂಡಿಕೆಗೆ ಹೋಲಿಸಿದರೆ ಬಹಳ ಕಡಿಮೆ. ಹೀಗಾಗಿ ನಿಮ್ಮ ಹಣಕ್ಕೆ ಹೆಚ್ಚು ಲಾಭ ಗಳಿಸುವ ಅವಕಾಶವನ್ನು ನೀವು ಕಳೆದುಕೊಳ್ಳುತ್ತೀರಿ.
4. ಖಾತೆಗಳ ದುರುಪಯೋಗ ಸಾಧ್ಯತೆ
-ಒಂದು ವೇಳೆ ನೀವು ಇದಕ್ಕಿಂತ ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದಿದ್ದರೆ, ಅವುಗಳನ್ನು ನೋಡಿಕೊಳ್ಳುವುದು ಸಮಸ್ಯೆಯಾಗುವ ಸಂಭವವಿದೆ ಮತ್ತು ಅದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದ, ಇಂಥ ಖಾತೆಗಳ ಕಡೆಗೆ ಗಮನ ಹರಿಸಲು ಸಾಧ್ಯವಿಲ್ಲದೆ ಅವು ದುರುಪಯೋಗ ಆಗುವ ಸಾಧ್ಯತೆ ಇದೆ. ನೀವು ಖಾತೆಯನ್ನು ನಿಯತವಾಗಿ ಬಳಸದೆ ಇದ್ದಲ್ಲಿ,ಅವುಗಳನ್ನು ಮುಕ್ತಾಯಗೊಳಿಸುವುದು ಸೂಕ್ತ.
5. ಐಟಿಆರ್ ಸಲ್ಲಿಕೆ ವೇಳೆ ಗೊಂದಲ
-ನೀವು ನಿಮ್ಮ ಬ್ಯಾಂಕ್ ಖಾತೆಗಳ ಮೂಲಕ ವ್ಯವಹಾರ ನಡೆಸಬಹುದಾದರೂ, ಐಟಿಆರ್'ಅನ್ನು ಸಲ್ಲಿಸುವಾಗ ನಿಮ್ಮ ಹೆಸರಿನ ಎಲ್ಲ ಖಾತೆಗಳ ಬಗೆಗೆ ಸಂಪೂರ್ಣ ವಿವರ ಕೊಡಬೇಕಾಗುತ್ತದೆ. ಹೆಚ್ಚು ಸಂಖ್ಯೆಯ ಖಾತೆಗಳು ಎಂದರೆ, ಹೆಚ್ಚುವರಿ ಕಾಗದದ ಕೆಲಸ. ಉಳಿತಾಯ ಖಾತೆಗಳ ಸಂಖ್ಯೆಯನ್ನು ಕಡಿಮೆಗೊಳಿಸಿದರೆ, ಐಟಿಆರ್ ಲೆಕ್ಕಾಚಾರ ಸುಲಭವಾಗಲಿದೆ.
ಅನಗತ್ಯವಾದ ಉಳಿತಾಯ ಖಾತೆಗಳನ್ನು ಮುಕ್ತಾಯಗೊಳಿಸುವುದು ಉತ್ತಮ ಆರ್ಥಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಇಡುವ ಮೊದಲ ಸಣ್ಣ ಹೆಜ್ಜೆ ಎನ್ನಿಸಿದರೂ, ಅದು ದೂರ ಕಾಲದಲ್ಲಿ ಉಪಯುಕ್ತ ಎನಿಸಲಿದೆ.
ಲೇಖಕರು: ಆದಿಲ್ ಶೆಟ್ಟಿ, ಸಿಇಒ, ಬ್ಯಾಂಕ್ ಬಜಾರ್.ಕಾಂ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.