
ಮೈಸೂರು (ಜ.08): ‘ನಾವು ಇಂಗ್ಲಿಷ್ ಕಲಿಯಬೇಕಾಗಿಲ್ಲ. ನಾವಿರುವುದು ಕರ್ನಾಟಕದಲ್ಲಿ, ಕನ್ನಡವೇ ಮಾತೃಭಾಷೆಯಾದ್ದರಿಂದ ಅದೇ ನಮಗೆ ಮೊದಲ ಆದ್ಯತೆಯಾಗಿರಬೇಕು’ ಈ ಮಾತು ಹೇಳಿದ್ದು ಈ ಮಣ್ಣಿನಲ್ಲೇ ಹುಟ್ಟಿ ಬೆಳೆದ ಕನ್ನಡಿಗನಲ್ಲ. ಬದಲಾಗಿ ಡೆನ್ಮಾರ್ಕ್ ಪ್ರಜೆ.
ಮೂಲತಃ ಡೆನ್ಮಾರ್ಕ್ ಪ್ರಜೆ, ಡಚ್ ಮಾತೃ ಭಾಷಿಗರಾದ ಹೆಂದ್ರಿಕ್ ಹರದಮನ್ ಈಗ ಮೈಸೂರಿನ ಪ್ರಜೆಯಾಗಿದ್ದಾರೆ. ಅಪ್ಪಟ ಕನ್ನಡಿಗರೂ ಆಗಿದ್ದಾರೆ. 1956 ರಲ್ಲಿ ಬೆಲ್ಜಿಯಂನಲ್ಲಿ ಹುಟ್ಟಿ, ಅಲ್ಲೆ ಬೆಳೆದು, ಅನಂತರದ ವರ್ಷಗಳಲ್ಲಿ ಬೇರೆ ಬೇರೆ ದೇಶಗಳಲ್ಲಿ ವಾಸ ಮಾಡಿಕೊಂಡು ಸದ್ಯಕ್ಕೆ ಮೈಸೂರಿನಲ್ಲಿ ನೆಲೆಸಿದ್ದಾರೆ. ಕಳೆದ ಮಾಸದಲ್ಲಿ ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಪರಿಚಾರಕತೆಯನ್ನು ಪರಿಚಯಿಸುವ ಮೂಲಕ ಮತ್ತಷ್ಟು ಮಂದಿಗೆ ಚಿರಪರಿಚಿತರಾದರು.
ಮೈಸೂರಿಗೆ ಬರುವ ಮುನ್ನ ಸುಮಾರು ವರ್ಷಕೆಲಸಕ್ಕಾಗಿ ಬೆಂಗಳೂರಿನಲ್ಲಿ ವಾಸವಿದ್ದ ಹೆಂದ್ರಿಕ್,2001 ರಲ್ಲಿ ಅಲ್ಲೆ ಭಾರತದ ಮೊದಲ ಒಗಟು ರಚಿಸುವ ಕಂಪನಿಯನ್ನು ಹುಟ್ಟು ಹಾಕಿದ್ದಾರೆ. 2002- 2008 ರ ಅವಧಿಯಲ್ಲಿ ವರ್ಲ್ಡ್ ಫಜಲ್ ಫೆಡರೇಷನ್ ಎಂಬ ಅಂತಾರಾಷ್ಟ್ರೀಯ ಫಜಲ್ ಸಂಸ್ಥೆಯ ಪ್ರತಿನಿಧಿಯಾಗಿ ಭಾರತದಲ್ಲಿ ಫಜಲ್ ಹಾಗೂ ಸುಡುಕೋ ಪಂದ್ಯಾವಳಿಗಳನ್ನು ರೂಪಿಸಿದ್ದಾರೆ. ಗೋವಾದಲ್ಲಿ ನಡೆದ 2008 ರ ವಿಶ್ವ ಸುಡೋಕು ಚಾಂಪಿಯನ್‌ಶಿಪ್‌ನ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ.
ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ನಲೆಸಿದ ಮೇಲೆ ಹೆಂದ್ರಿಕ್ ಕನ್ನಡದಲ್ಲಿ ಆಸಕ್ತಿ ಬೆಳೆಸಿಕೊಂಡರು. ಅವರೇ ಹೇಳುವ ಹಾಗೆ ‘ಕನ್ನಡದ ಮೇಲಿನ ಆಸಕ್ತಿಗೆ ಸರಿಯಾದ ಸ್ಫೂರ್ತಿ, ಪ್ರೋತ್ಸಾಹ ಸಿಗಲಿಲ್ಲ. ಬೆಂಗಳೂರಿನಲ್ಲಿ ಕನ್ನಡ ಕಲಿಯಲು, ಮಾತಾಡಲು ಅವಕಾಶ ತುಂಬಾ ಕಡಿಮೆಯಾಗಿದ್ದರಿಂದ, ಕೊನೆಗೆ 2012 ರಲ್ಲಿ ರಾಜಧಾನಿ ಬಿಟ್ಟು ಬಂದೆ’ ಎಂಬ ದನಿಯಲ್ಲಿ ಕನ್ನಡಿಗರ ನಿರಾಭಿಮಾನದ ಎಳೆಯನ್ನು ಬಿಡಿಸಿಟ್ಟರು.
ಮೈಸೂರಿನಲ್ಲಿ ಹೆಮ್ಮೆಯಿಂದ ಕನ್ನಡದಲ್ಲೆ ಮಾತನಾಡುತ್ತೇನೆ. ಅವಕಾಶ ಸಿಕ್ಕಾಗ ನಾನು ನಾನಾ ರೀತಿಯಲ್ಲಿ ಬೇರೆ ರಾಜ್ಯ ಅಥವಾ ಬೇರೆ ದೇಶಗಳಿಂದ ಬಂದವರಲ್ಲಿ ಕನ್ನಡದ ಮೇಲೆ ಆಸಕ್ತಿ ಹುಟ್ಟಿಸಲು ಪ್ರಯತ್ನ ಮಾಡುತ್ತೇನೆ. ಕನ್ನಡ ಹೇಗೆ ಕಲಿತುಕೊಂಡಿರಿ, ಕನ್ನಡದ ಮೇಲೆ ಯಾಕೆ ಅಷ್ಟೊಂದು ಆಸಕ್ತಿ ಎಂಬ ಪ್ರಶ್ನೆಗಳಿಗೆ ನನ್ನ ಉತ್ತರ ಹೀಗೆ- ನಿಮಗೆ ಆಸಕ್ತಿ ಇದ್ದರೆ, ಮನಸ್ಸು ಮಾಡಿದರೆ ನೀವು ಕನ್ನಡ ಕಲಿಯಬಹುದು. ಈ ನಾಡಿನ ಅತಿಥಿಯಾಗಿ ಕನ್ನಡ ಕಲಿಯುವುದು, ಮಾತನಾಡುವುದು ನನ್ನ ಕರ್ತವ್ಯ. ಮಾತ್ರವಲ್ಲದೆ, ಇಲ್ಲಿ ನೆಲೆಸಿರುವ ಎಲ್ಲಾ ಜನರ ಕರ್ತವ್ಯ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳುತ್ತಾರೆ ಹರದಮನ್.
ಕನ್ನಡ ಪರಿಚಾಕರರಷ್ಟೇ ಅಲ್ಲ ಹೆಂದ್ರಿಕ್ ಹರದಮನ್ ಒಳ್ಳೆಯ ಕನ್ನಡ ಕತೆಗಾರ. ಸದ್ಯ ‘ನಮೂನೆ’ ಎಂಬ ಸಣ್ಣ ಕತೆಯನ್ನೂ ರಚಿಸಿದ್ದಾರೆ. ಇದು ಅವರ ಚೊಚ್ಚಲ ಪುಸ್ತಕ. ಇನ್ನು ಮಕ್ಕಳಿಗಾಗಿ ಕನ್ನಡದಲ್ಲಿ ಕತೆ ಬರೆಯಲು ಆರಂಭಿಸಿದ್ದಾರೆ. ಇವರ ನಮೂನೆ ಪುಸ್ತಕ ಹಾಗೂ ಸುಡೋಕು ಪುಸ್ತಕಗಳು ಹೊರಬಂದಿವೆ.
ವರದಿ: ಉತ್ತನಹಳ್ಳಿ ಮಹದೇವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.