ಮನಮೋಹನ್ ಸಿಂಗ್ ಜಗತ್ತಿನ ಬಲಿಷ್ಠ ಪ್ರಧಾನಿ?

By Web DeskFirst Published Aug 3, 2018, 2:59 PM IST
Highlights

ಜಗತ್ತಿನ ಅತ್ಯಂತ ಬಲಿಷ್ಠ  ಪ್ರಧಾನಿ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪ್ರಶಸ್ತಿ ಲಭಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ. ಆದರೆ ಇದರ ಸತ್ಯಾಸತ್ಯತೆಯನ್ನು ತಿಳಿಯಲು ಹೋದಾಗ ಕಂಡು ಬಂದ ಅಂಶವೇ ಬೇರೆಯಾಗಿದೆ. 

ನವದೆಹಲಿ :  ಡಾ. ಮನಮೋಹನ್ ಸಿಂಗ್ ಅವರಿಗೆ ಜಗತ್ತಿನ ಶಕ್ತಿಶಾಲಿ ಪ್ರಧಾನಿ ಎಂಬ ಪ್ರಶಸ್ತಿ ಲಭಿಸಿದೆ ಎಂಬ ಸಂದೇಶವೊಂದು ಸಾಮಾಜಿಕ  ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ವೈರಲ್ ಇಂಡಿಯಾ’ ಎಂಬ ವೆಬ್‌ಸೈಟ್ ಮೊದಲಿಗೆ ಜೂನ್‌ 16,2018 ರಂದು ಈ ಲೇಖನವನ್ನು ಪ್ರಕಟಿಸಿತ್ತು.

 ಆ ಲೇಖನದಲ್ಲಿ ‘ನರೇಂದ್ರ ಮೋದಿ ಅಲ್ಲ,  ಡಾ. ಮನಮೋಹನ ಸಿಂಗ್ ಜಗತ್ತಿನ ಬಲಿಷ್ಠ ಪ್ರಧಾನಿ ಎಂಬ ಪ್ರಶಸ್ತಿ ಪಡೆದಿದ್ದಾರೆ’ ಎಂದು ಬರೆಯಲಾಗಿತ್ತು. ಜೊತೆಗೆ ಜಪಾನ್, ಮನಮೋಹನ್ ಅವರ ಸಾಧನೆಯನ್ನು ಗುರುತಿಸಿ ಈ ಶ್ರೇಷ್ಠ ಪ್ರಶಸ್ತಿಯನ್ನು ನೀಡಿದೆ ಎಂದೂ ಹೇಳಲಾಗಿದೆ. 

ಈ ವೆಬ್‌ಸೈಟ್‌ನಲ್ಲಿ ಲೇಖನ ಪ್ರಕಟವಾದ ಬಳಿಕ ಬೇರೆ ಬೇರೆ ವೆಬ್‌ಸೈಟ್‌ಗಳೂ ಕೂಡ ಇದನ್ನೇ ವರದಿ ಮಾಡಿದ್ದವು. ಕೆಲವೊಂದು ವೆಬ್‌ಸೈಟ್‌ಗಳು ಮತ್ತೊಂದು ಆಯಾಮ ನೀಡಿ ಮನಮೋಹನ್ ಸಿಂಗ್ ಅರ್ಹ ಪ್ರಧಾನಿ ಎಂದು ತಲೆಬರಹ ನೀಡಿ ಪ್ರಕಟಿಸಿದ್ದವು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿಯೂ ಕೂಡ ಈ ಸುದ್ದಿ ವೈರಲ್ ಆಗಿದೆ. 

ಆದರೆ ನಿಜಕ್ಕೂ ಡಾ.ಮನಮೋಹನ್ ಸಿಂಗ್ ವಿಶ್ವದ ಬಲಿಷ್ಠ ಪ್ರಧಾನಿ ಎಂದು ಜಪಾನ್ ಅತ್ಯಂತ ಶ್ರೇಷ್ಠ ಪ್ರಶಸ್ತಿಯನ್ನು ನೀಡಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ. ವಾಸ್ತವವಾಗಿ 2014 ರಲ್ಲಿ ಜಪಾನ್‌ನ ಅತ್ಯಂತ ಶ್ರೇಷ್ಠ ನಾಗರಿಕ ಪ್ರಶಸ್ತಿಯನ್ನು ಮನಮೋಹನ್ ಸಿಂಗ್ ಅವರಿಗೆ ನೀಡಿದೆ. 

ಜಪಾನ್ ಸರ್ಕಾರ ನೀಡುವ ಅತ್ಯುತ್ತಮ ಪ್ರಶಸ್ತಿ ಇದು. ಅಂದು ಮನಮೋಹನ್ ಸಿಂಗ್ ಪ್ರಶಸ್ತಿ ಸ್ವೀಕರಿಸಿದ ಫೋಟೋವನ್ನೇ ಬಳಸಿಕೊಂಡು ಮನಮೋಹನ್ ಸಿಂಗ್ ಅವರಿಗೆ ಜಗತ್ತಿನ ಬಲಿಷ್ಠ ಪ್ರಧಾನಿ ಎಂಬ ಪ್ರಶಸ್ತಿ ಲಭಿಸಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಲಾಗಿದೆ.

click me!