
ಬೆಂಗಳೂರು(ಜೂ.21): ರಾಜ್ಯದಲ್ಲಿ ಯಾವುದೇ ಸಂಘ- ಸಂಸ್ಥೆ, ವ್ಯಾಪಾರ ಕೇಂದ್ರ, ಮಂದಿರ, ಮಸೀದಿ, ಪ್ರಾರ್ಥನಾ ಸ್ಥಳ, ಖಾಸಗಿ ಮನೆಗಳು, ಸಾರ್ವಜನಿಕ ಸ್ಥಳಗಳಾದ ರಸ್ತೆ, ದಾರಿ, ಬಯಲು ಕಟ್ಟಡ, ಸಾರ್ವಜನಿಕ ಸ್ಥಳದ ಸುತ್ತಮುತ್ತಲ ಪ್ರದೇಶ ಸೇರಿದಂತೆ ಯಾವುದೇ ಸ್ಥಳಗಳಲ್ಲಿ ಯಾವುದೇ ವ್ಯಕ್ತಿಗಳು ಅಳವಡಿಸಿದ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳ ಮೇಲೆ ಇನ್ನು ಮುಂದೆ ರಾಜ್ಯ ಸರ್ಕಾರ ತನ್ನ ಹಕ್ಕು ಹೊಂದಿರುತ್ತದೆ. ಈ ಕುರಿತು ಹೊಸ ಕಾನೂನು ಜಾರಿಗೊಳಿಸಲು ಕರ್ನಾಟಕ ಸಾರ್ವಜನಿಕ ಸುರಕ್ಷೆಯ(ಕ್ರಮಗಳ) ಜಾರಿ ವಿಧೇಯಕವನ್ನು ಮಂಗಳವಾರ ವಿಧಾನಸಭೆಯಲ್ಲಿ ಜಾರಿಗೊಳಿಸಲಾಗಿದೆ.
ಗೃಹ ಸಚಿವರ ಪರವಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಿದರು. ಈ ವಿಧೇಯಕದ ಅನ್ವಯ ಕಳ್ಳತನ ಸೇರಿದಂತೆ ಸಾರ್ವಜನಿಕ ಭದ್ರತೆ, ಅಪರಾಧ ತಡೆ, ಅಪರಾಧಿಗಳ ಪತ್ತೆ ಮತ್ತು ನಿಯಂತ್ರಣ ಮತ್ತಿತರ ಕಾರಣಗಳಿಗಾಗಿ ಪೊಲೀಸರಿಗೆ ಸಿಸಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪಡೆಯಬಹುದಾಗಿದೆ. ಭಯೋತ್ಪಾದಕ ದಾಳಿ ಒಳಗೊಂಡು ಭದ್ರತೆಯ ಆತಂಕಗಳ ವಿರುದ್ಧ ಸುರಕ್ಷತೆ ನೀಡಲು ಈ ಕಾನೂನಿನಲ್ಲಿ ಅವಕಾಶವಿದೆ. ರಾಜ್ಯದಲ್ಲಿ ವಾಣಿಜ್ಯ ಮಳಿಗೆಗಳು, ಕೈಗಾರಿಕೆ ಸಂಸ್ಥೆಗಳು, ಧಾರ್ಮಿಕ ಸ್ಥಳಗಳು, ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ಕ್ರೀಡಾ ಸಂಕೀರ್ಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಸಂಘಟಿತ ಧಾರ್ಮಿಕ ಕೂಟಗಳು ಹಾಗೂ ಸರ್ಕಾರ ಬಯಸುವ ಯಾವುದೇ ಸ್ಥಳ ಮತ್ತದರ ಸುತ್ತಲೂ ಖಾಸಗಿಯವರು ಅಳವಡಿಸಿದ ಅಥವಾ ಸಂಬಂಧಪಟ್ಟಸಂಸ್ಥೆಗಳೇ ಅಳವಡಿಸಿದ ಸಿಸಿಟಿವಿಗಳ ದೃಶ್ಯಗಳನ್ನು ಸರ್ಕಾರ ಪಡೆಯಬಹುದಾಗಿದೆ. ಒಂದು ವೇಳೆ ಸಿಸಿಟಿವಿ ದೃಶ್ಯಾವಳಿ ಒದಗಿಸಲು ವಿಫಲವಾದರೆ ದಂಡ ವಿಧಿಸಲು ಕೂಡ ಕಾನೂನಿನಲ್ಲಿ ಅವಕಾಶವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.