
ಬೆಂಗಳೂರು(ಜೂ.21): ಆಸ್ತಿಗಳ ನೋಂದಣಿ ವೇಳೆ ಆಧಾರ್ ಕಡ್ಡಾಯ ಮಾಡುವ ನೀತಿಯನ್ನು ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಶಿಫಾರಸು ಮಾಡಿದೆ ಎಂಬುದು ವದಂತಿಯಲ್ಲ, ಬದಲಾಗಿ ಸತ್ಯ ಎಂದು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ನೀತಿಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಕನ್ನಡಪ್ರಭಕ್ಕೆ ಈ ವಿಷಯ ತಿಳಿಸಿದ ಮುದ್ರಾಂಕ ಇಲಾಖೆಯ ಆಯುಕ್ತ ಮನೋಜ್ ಕುಮಾರ್ ಮೀನಾ, ಹೆಚ್ಚುತ್ತಿರುವ ಆಸ್ತಿಗಳ ನಕಲಿ ದಾಖಲೆ ನೋಂದಣಿ, ಬೇನಾಮಿ ಆಸ್ತಿ ಮಾಲೀಕರ ನೋಂದಣಿ ತಡೆಗೆ ಕೇಂದ್ರ ಸರ್ಕಾರ ಆಧಾರ್ ಅಸ್ತ್ರ ಬಳಸುವಂತೆ ರಾಜ್ಯಗಳಿಗೆ ಸಲಹೆ ನೀಡಿದ್ದು, ಅದರಂತೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಪ್ರಸ್ತಾವನೆ ಸಿದ್ಧವಾದ ನಂತರ ಅದನ್ನು ಸಚಿವ ಸಂಪುಟದ ಮುಂದಿಟ್ಟು ಜಾರಿ ಕುರಿತು ಅಂತಿಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದರು.
ಆಸ್ತಿ ನೋಂದಣಿಗೆ ಆಧಾರ್ ಕಡ್ಡಾಯ ಮಾಡುವ ಕುರಿತು ಪರಿಶೀಲನೆ ನಡೆಸು ವಂತೆ ಕೇಂದ್ರ ಸರ್ಕಾರವು ರಾಜ್ಯಕ್ಕೆ ಪತ್ರ ಬರೆದಿದೆ. ಇದಕ್ಕೆ ಪೂರಕವಾಗಿ ಈ ನಿಟ್ಟಿನಲ್ಲಿ ಕೇಂದ್ರದ ನೋಂದಣಿ ಕಾಯ್ದೆಗೆ ತಿದ್ದುಪಡಿ ತರುವುದಾಗಿಯೂ ತಿಳಿಸಿತ್ತು. ಕೇಂದ್ರ ಸರ್ಕಾರದ ಭೂ ಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಪುಷ್ಪೇಂದ್ರ ಸಿಂಗ್ ಅವರು ಮೇ 17ರಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯಾ ಅವರಿಗೆ ಪತ್ರ ಬರೆದು ಈ ಬಗ್ಗೆ ಸೂಚನೆಗಳನ್ನು ನೀಡಿದ್ದಾರೆ. ಇದನ್ನಾಧರಿಸಿ ರಾಜ್ಯ ಕಂದಾಯ ಇಲಾಖೆಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ನೋಂದಣಿಗೆ ಆಧಾರ್ ಕಡ್ಡಾಯ ಎನ್ನುವ ಅಂಶಗಳನ್ನು ಒಳಗೊಂಡ ಪ್ರಸ್ತಾಪವನ್ನೂ ಸಿದ್ಧಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರದ ಕಾಯ್ದೆ ತಿದ್ದುಪಡಿ:
ರಾಜ್ಯದಲ್ಲಿ 34 ಜಿಲ್ಲಾ ನೋಂದಣಿ ಕಚೇರಿಗಳಿದ್ದು, ತಾಲೂಕು, ಹೋಬಳಿಗಳೂ ಸೇರಿದಂತೆ 242 ಉಪ ನೋಂದಣಿ ಕಚೇರಿಗಳಿವೆ. ಈ ಎಲ್ಲಾ ಕಚೇರಿಗಳಲ್ಲೂ ನಿತ್ಯ ಆಸ್ತಿಗಳಿಗೆ ಸಂಬಂಧಿಸಿದ 6000 ದಾಖಲೆಗಳು ನೋಂದಣಿಯಾಗುತ್ತವೆ. ಈ ಸಂದರ್ಭದಲ್ಲಿ ನಿತ್ಯ ಒಂದಲ್ಲ ಒಂದು ಕಡೆ ನಕಲಿ ದಾಖಲೆಗಳ ನೋಂದಣಿ ಅಥವಾ ಬೇನಾಮಿ ವ್ಯಕ್ತಿಯ ಹೆಸರಿನಲ್ಲಿ ನೋಂದಣಿ ಆಗುತ್ತಿರಬಹುದು. ಆದರೆ ಈ ಬಗ್ಗೆ ದೂರು ದಾಖಲಿಸುವವರಿಲ್ಲದೆ ಅಧಿಕೃತವಾಗಿ ಯಾವುದೇ ಮಾಹಿತಿಗಳು ಲಭ್ಯವಾಗುವುದಿಲ್ಲ.
ಆಸ್ತಿ ಖರೀದಿಸಿದವರು ತಮ್ಮ ಆಸ್ತಿ ಬೇರೊಬ್ಬರಿಗೆ ನೋಂದಣಿಯಾಗಿದೆ ಎಂದು ವರ್ಷಗಳ ನಂತರ ಬರುವುದು, ಮಾರಾಟಗಾರರು ನಕಲಿ ದಾಖಲೆ ನೀಡಿ ನನಗೆ ನೋಂದಣಿ ಮಾಡಿಕೊಟ್ಟಿದ್ದಾರೆ ಎನ್ನುವ ದೂರುಗಳು ಬಂದಿವೆ. ಅಷ್ಟೊತ್ತಿಗಾಗಲೇ ಬೋಗಸ್ ಆಸ್ತಿ ದಾಖಲೆ ನೀಡಿ ಮಾರಾಟ ಮಾಡಿದವರು ನಾಪತ್ತೆಯಾಗಿರುತ್ತಾರೆ. ಇಂಥ 80ಕ್ಕೂ ಹೆಚ್ಚು ಪ್ರಕರಣಗಳು ಪೋಲೀಸರ ಬಳಿ ದಾಖಲಾಗಿವೆ.
ಇದೆಲ್ಲ ರಾಜ್ಯ ಕಂದಾಯ ಇಲಾಖೆಗೆ ಚೆನ್ನಾಗಿಯೇ ಗೊತ್ತಿದ್ದರೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಕೇಂದ್ರ ಸರ್ಕಾರದ ನೋಂದಣಿ ಕಾಯ್ದೆ 1908ರ ಅಡಿಯಲ್ಲಿ ರಾಜ್ಯ ನೋಂದಣಿ ನಿಯಮಗಳನ್ನು ರೂಪಿಸಲಾಗಿದೆ. ಇದರ ಪ್ರಕಾರ ರಾಜ್ಯ ಸರ್ಕಾರ ಆಸ್ತಿಗಳನ್ನು ನೋಂದಣಿ ಮಾಡಬೇಕೇ ವಿನಃ ಅಕ್ರಮ ಪತ್ತೆ ಮಾಡುವುದು, ಬೋಗಸ್ ಆಸ್ತಿ ದಾಖಲೆ ಗುರುತಿಸಿ ಕ್ರಮ ಕೈಗೊಳ್ಳುವುದಕ್ಕೆ ಅವಕಾಶವಿಲ್ಲ. ಹೀಗಾಗಿ ಬೋಗಸ್ ನೋಂದಣಿ ಮತ್ತು ಬೇನಾಮಿ ನೋಂದಣಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ತನ್ನ ಕಾಯ್ದೆಗೇ ತಿದ್ದುಪಡಿ ತರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಆಧಾರ್ ಏಕೆ ಬಳಕೆ?
ಈಗಿನ ನಿಯಮದ ಪ್ರಕಾರ ಆಸ್ತಿ ನೋಂದಣಿ ವೇಳೆ ಆಸ್ತಿ ಮಾರಾಟ ಮತ್ತು ಖರೀದಿಸುವವರ ಕ್ರಯ ಪತ್ರಗಳು ಮತ್ತು ಅವರ ಬೆರಳಚ್ಚು, ಭಾವಚಿತ್ರಗಳನ್ನು ಮಾತ್ರ ಪಡೆಯಲಾಗುತ್ತದೆ. ಉಳಿದಂತೆ ಯಾವುದೇ ಮಾಹಿತಿಗಳು ಮುದ್ರಾಂಕ ಇಲಾಖೆಗೆ ಸಿಗುವುದಿಲ್ಲ.
ಹೀಗಾಗಿ ಬಹುತೇಕ ವಿಳಾಸ ದೃಢೀಕರಣವಿಲ್ಲದೆ, ಗುರುತಿನ ದೃಢೀಕರಣವಿಲ್ಲದೆ ಆಸ್ತಿಗಳನ್ನು ನೋಂದಣಿ ನಡೆಯುತ್ತಿದ್ದು, ಆಸ್ತಿ ಮೌಲ್ಯ 30 ಲಕ್ಷ ಮೀರಿದರೂ ಪ್ಯಾನ್ ಕಾರ್ಡ್ ಕೂಡ ಕೇಳುತ್ತಿಲ್ಲ. ಕೆಲವು ಕಡೆ ಕೇಳಿದರೂ ಕಡ್ಡಾಯವಲ್ಲ. ಇದರಿಂದಾಗಿ ಆಸ್ತಿ ನೋಂದಣಿ ಮಾಡಿದವರು ಅಕ್ರಮ ನಡೆಸಿದರೂ ಪತ್ತೆಯಾಗುತ್ತಿಲ್ಲ.
ಈಗ ಆಧಾರನ್ನು ಒಂದು ದೃಢೀಕರಣವಾಗಿ ಬಳಸಿದರೆ ಮಾರಾಟಗಾರರು ಅಥವಾ ಖರೀದಿದಾರರು ಒಂದೊಮ್ಮೆ ಅಕ್ರಮ ನಡೆಸಿದ್ದರೆ ಪತ್ತೆ ಹಚ್ಚುವುದು ಸುಲಭ. ಅವರ ಫೋಟೋ ಮತ್ತು ಬೆರಳಚ್ಚು ಮಾಹಿತಿ ಜತೆಗೆ ಆಧಾರ್ ಲಿಂಕ್ ಮಾಡಿ ಹುಡುಕಿದರೆ ಆಸ್ತಿ ನೋಂದಣಿ ಮಾಹಿತಿಗಳು, ಇತರ ಬೋಗಸ್ ಮತ್ತು ನಕಲಿ ದಾಖಲೆ ನೋಂದಣಿಗಳ ಮಾಹಿತಿ ಲಭ್ಯವಾಗುತ್ತದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನೋಂದಣಿಗೆ ಬರುವ ವ್ಯಕ್ತಿಯ 12 ಅಂಕಿಗಳ ಆಧಾರ್ ನಂಬರ್ ದಾಖಲಿಸುತ್ತಿದ್ದಂತೆ ಆತ ಸರ್ಕಾರದಿಂದ ಪಡೆದಿರುವ ಸವಲತ್ತು, ಸೇವೆ ಮತ್ತು ಬ್ಯಾಂಕ್‌ಗಳ ಹಣಕಾಸು ವ್ಯವಹಾರಗಳ ಮಾಹಿತಿ ಸಿಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.