
ಧಾರವಾಡ(ಜೂ.05): ಮಹದಾಯಿ ಹಾಗೂ ಕಳಸಾ ಬಂಡೂರಿ ಹೋರಾಟದಲ್ಲಿ ಪೊಲೀಸರಿಂದ ಹಲ್ಲೆಗೊಳದಾಗ ಅಮಾಯಕ ರೈತರಿಗಗೆ ಸರ್ಕಾರ ಬಿಡಿಗಾಸಿನ ಪರಿಹಾರ ನೀಡಿದೆ. ಹೀನಮಾನವಾಗಿ ಹಲ್ಲೆಗೊಳಗಾಗಿದ್ದ ರೈತರು ಚಿಲ್ಲರೆ ಕಾಸು ಪಡೆದು ಮತ್ತೆ ಅವಮಾನಕ್ಕೀಡಾಗಿದ್ದಾರೆ.
2016ರ ಜುಲೈ 29 ರಂದು ಧಾರವಾಡ ಯಮನೂರಲ್ಲಿ ರೈತರ ಮೇಲೆ ನಡೆದಿದ್ದ ಅಮಾನವೀಯ ಹಲ್ಲೆ ಮಹಾಪ್ರಮಾದ ಎಂದು ಸರ್ಕಾರ ಒಪ್ಪಿಕೊಂಡಿದೆ. ಯಾವುದೇ ತಪ್ಪು ಮಾಡದ ರೈತರು, ವೃದ್ಧರು, ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಲ್ಲೆಗೆ ಸರ್ಕಾರ ಬೆಲೆ ತೆರಲು ಮುಂದಾಗಿದೆ. ಆದರೆ, ಅಗಾಧ ನೋವುಂಡ ರೈತರಿಗೆ ಚಿಲ್ಲರೆ ಕಾಸು ಪರಿಹಾರ ನೀಡಿ ಮತ್ತೆ ಅಮಾಯಕರನ್ನು ಸರ್ಕಾರ ಅವಮಾನಿಸುತ್ತಿದೆ. ಗಾಯಗೊಂಡವರಿಗೆ ಸೂಕ್ತ ಪರಿಹಾರ ನೀಡುವಂತೆ ಮಾನವ ಹಕ್ಕು ಆಯೋಗ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ, ಅಮಾಯಕರು ತಿಂದ ಏಟುಗಳನ್ನು ಏಣಿಸಿ ಪರಿಹಾರ ನೀಡಿರುವುದು ಸರ್ಕಾರದ ನಿಕೃಷ್ಟ ನಡೆ ಅಂತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲ್ಲೆಗೊಳಗಾದವರ ವೈದ್ಯಕೀಯ ವೆಚ್ಚ ಹಾಗೂ ಅವರ ದುಡಿಮೆಯ ನಷ್ಟವನ್ನು ಪರಿಹಾರವಾಗಿ ನೀಡುವಂತೆ ಮೀರಾ ಸಕ್ಸೇನಾ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಕಂದಾಯ ಅಧಿಕಾರಿಗಳು ಕುಟುಂಬ ಕಲ್ಯಾಣ ಇಲಾಖೆ ಸಮೀಕ್ಷೆ ಆಧಾರಿಸಿ ಕೇವಲ 113 ಮಂದಿಗೆ ಮಾತ್ರ ಪರಿಹಾರ ನೀಡಿದೆ. ಕೆಲವರಿಗೆ 500, 1000 ಮತ್ತು 2000 ರೂಪಾಯಿ ರೀತಿ ಮನಬಂದಂತೆ ಪರಿಹಾರ ನೀಡಿದೆ. ಕೇವಲ ಓರ್ವ ಗರ್ಭಿಣಿಗೆ ಮಾತ್ರ 25 ಸಾವಿರ ರೂಪಾಯಿ ನೀಡಿ ಅಧಿಕಾರಿಗಳು ಪರಿಹಾರ ಕಡತಕ್ಕೆ ಮಂಗಳ ಹಾಡಿದ್ದಾರೆ.
ರೈತರ ಮೇಲೆ ಹಲ್ಲೆ ನಡೆಸಿದ್ದು ತಪ್ಪು ಅಂತ ಒಪ್ಪಿಕೊಂಡಿರುವುದೇ ರೈತರಿಗೆ ಸಿಕ್ಕ ದೊಡ್ಡ ಗೆಲುವು ಮಾತ್ರ. ಅಧಿಕಾರಿಗಳಿಂದ ತಪ್ಪಾಗಿದೆ ಅಂತ ಒಪ್ಪಿಕೊಂಡ ಸರ್ಕಾರ ಬಿಡಿಗಾಸು ನೀಡಿ ಅಮಾಯಕರನ್ನು ಮತ್ತೊಮ್ಮೆ ನಿಕೃಷ್ಟವಾಗಿಸಿರೋದೆ ದುರಂತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.