
ಬೆಂಗಳೂರು(ಜೂ.05): ಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ, ಸಂಪುಟ ವಿಸ್ತರಣೆಗೆ ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ. ಜೂನ್ 18 ರಿಂದ 20 ರ ಒಳಗೆ ಸಂಪುಟ ವಿಸ್ತರಣೆ ಗ್ಯಾರಂಟಿ ಎನ್ನಲಾಗುತ್ತಿದೆ.
ಮಳೆಗಾಲದ ಅಧಿವೇಶನ ಮುಗಿದ ತಕ್ಷಣವೇ ಸಂಪುಟ ವಿಸ್ತರಣೆಗೆ ಸಿಎಂ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಸಂಪುಟದಲ್ಲಿ ಮೂರು ಸ್ಥಾನಗಳು ಖಾಲಿ ಉಳಿದಿದ್ದು, ಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗ್ತಿದೆ. ದಿವಂಗತ ಮಹದೇವಪ್ರಸಾದ್, ಹೆಚ್.ವೈ.ಮೇಟಿ ಹಾಗೂ ಜಿ.ಪರಮೇಶ್ವರ ಅವರಿಂದ ಮೂರು ಸ್ಥಾನಗಳು ತೆರವಾಗಿದೆ.
ದಲಿತ, ಕುರುಬ, ಒಕ್ಕಲಿಗ ಶಾಸಕರಿಗೆ ಸಚಿವ ಸ್ಥಾನ ನೀಡಲು ಸಿಎಂ ಒಲವು ಹೊಂದಿದ್ದಾರೆ ಎನ್ನಲಾಗಿದೆ. ಅದರಲ್ಲೂ, ಕುರುಬ ಖೋಟಾದಲ್ಲಿ ಮತ್ತೇ ಮೇಟಿಗೆ ಮಂತ್ರಿ ಸ್ಥಾನ ಸಾಧ್ಯತೆ ಹೆಚ್ಚಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರ್ತಿದೆ.
ಇನ್ನು, ದಲಿತ ಖೋಟಾದಲ್ಲಿ ಸ್ಪರ್ಧೆ ಹೆಚ್ಚಾಗಿದೆ.ಶಾಸಕರಾದ ಆರ್ ಬಿ ತಿಮ್ಮಾಪುರ, ನರೇಂದ್ರಸ್ವಾಮಿ, ಮೋಟಮ್ಮ, ಶಿವರಾಜ ತಂಗಡಗಿ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ಸಚಿವ ಶಿವರಾಜ ತಂಗಡಗಿ ಕೂಡ ಸಚಿವ ಸ್ಥಾನಕ್ಕೆ ಪ್ರಬಲ ಫೈಟ್ ನೀಡ್ತಿದ್ದಾರೆ. ಸಿಎಂ ಬಳಿ ಈ ವಿಚಾರವನ್ನೂ ಚರ್ಚಿಸಿರುವ ಶಿವರಾಜ್ ತಂಗಡಗಿ ನನಗೇ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗ್ತಿದೆ.
ಲಿಂಗಾಯತ ಖೋಟಾದಲ್ಲಿ ತಿಪಟೂರು ಶಾಸಕ ಷಡಕ್ಷರಿ ಮತ್ತು ಮಹದೇವಪ್ರಸಾದ್ ಪತ್ನಿ ಗೀತಾ ಮಹದೇವ ಪ್ರಸಾದ್ ಇಬ್ಬರಲ್ಲಿ ,ಒಬ್ಬರಿಗೆ ಸಚಿವ ಸ್ಥಾನ ಸಿಗೋ ಸಾಧ್ಯತೆ ಇದೆ ಎನ್ನಲಾಗಿದೆ. ಗುಂಡ್ಲುಪೇಟೆ ಉಪ ಚುನಾವಣೆ ಸಂದರ್ಭದಲ್ಲೂ ಗೀತಾ ಮಹದೇವ ಪ್ರಸಾದ್ ಗೆ ಮಂತ್ರಿ ಸ್ಥಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹಲವು ಬಾರಿ ಹೇಳಿದ್ದರು. ಅಲ್ಲದೆ, ಗೀತಾ ಮಹದೇವಪ್ರಸಾದ್ ಸಚಿವೆರಾದ್ರೆ,ಚಾಮರಾಜನಗರ ಭಾಗದಲ್ಲಿ ಪಕ್ಷ ಸಂಘಟನೆಗೂ ಅನುಕೂಲ ಅನ್ನೋ ಮಾತು ಕೇಳಿ ಬರ್ತಿದೆ.
ಇವೆಲ್ಲದರ ನಡುವೆ ಒಕ್ಕಲಿಗ ಸಮುದಾಯದ ಶಾಸಕರಿಗೂ ಒಂದು ಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಮಾಜಿ ಸಚಿವರಾದ ಅಂಬರೀಷ್, ಸಿ ಪಿ ಯೋಗೀಶ್ವರ್ ಹೆಸರು ಚಾಲ್ತಿಯಲ್ಲಿದೆ. ಅದರಲ್ಲಿ ಅಂಬರೀಶ್'ಗೆ ಮತ್ತೇ ಮಂತ್ರಿ ಮಾಡಿ ಮಂಡ್ಯದಲ್ಲಿ ಕಾಂಗ್ರೆಸ್ ಬಲಪಡಿಸುವ ಉದ್ದೇಶ ಸಿದ್ದರಾಮಯ್ಯರದ್ದಾಗಿದೆ ಎನ್ನಲಾಗಿದೆ.
ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಉಳಿದಿದ್ದು, ಹಲವು ಶಾಸಕರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಶತಾಯ ಗತಾಯ ಮಂತ್ರಿ ಆಗಲೇ ಬೇಕು ಅನ್ನೋ ಹಟಕ್ಕೆ ಬಿದ್ದವರಂತೆ ಲಾಬಿ ನಡೆಸಿದ್ದಾರೆ.
-ಶ್ರೀನಿವಾಸ ಹಳಕಟ್ಟಿ, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.