ಈ ನೌಕರರಿಗೆ ಭರ್ಜರಿ ಮೂಲ ವೇತನ ಏರಿಕೆ

First Published Jun 7, 2018, 8:06 AM IST
Highlights

ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮೀಣ ಅಂಚೆ ಸೇವಕರ (ಗ್ರಾಮೀಣ್‌ ಡಾಕ್‌ ಸೇವಾ) ಬೇಡಿಕೆಗೆ ಕೇಂದ್ರ ಸರ್ಕಾರ ಸಮ್ಮತಿಸಿದ್ದು, ಮೂಲ ವೇತನವನ್ನು ಭರ್ಜರಿ ಪ್ರಮಾಣದಲ್ಲಿ ಏರಿಸಿದೆ. 

ನವದೆಹಲಿ: ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮೀಣ ಅಂಚೆ ಸೇವಕರ (ಗ್ರಾಮೀಣ್‌ ಡಾಕ್‌ ಸೇವಾ) ಬೇಡಿಕೆಗೆ ಕೇಂದ್ರ ಸರ್ಕಾರ ಸಮ್ಮತಿಸಿದ್ದು, ಮೂಲ ವೇತನವನ್ನು ಭರ್ಜರಿ ಪ್ರಮಾಣದಲ್ಲಿ ಏರಿಸಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ವರ್ಗಗಳ ಗ್ರಾಮೀಣ ಅಂಚೆ ಸೇವಕರ ವೇತನ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ.

ಅದರನ್ವಯ ಇದುವರೆಗೆ ಮಾಸಿಕ 2295 ರು. ವೇತನ ಪಡೆಯುತ್ತಿದ್ದವರಿಗೆ ಇನ್ನು 10000 ರು. ನೀಡಲಾಗುವುದು, ಮಾಸಿಕ 2775 ರು. ವೇತನ ಪಡೆಯುತ್ತಿದ್ದವರಿಗೆ 12500 ರು. ವೇತನ ಸಿಗಲಿದೆ, ಇನ್ನು ಮಾಸಿಕ 4115 ರು. ವೇತನ ಪಡೆಯುತ್ತಿದ್ದವರಿಗೆ ಇನ್ನು 14500 ರು.ವೇತನ ಸಿಗಲಿದೆ.

2016ರ ಜ.1ರಿಂದಲೇ ಈ ವೇತನ ಏರಿಕೆ ಜಾರಿಯಾಗಲಿದ್ದು, ಇದರ ಲಾಭ ಸುಮಾರು 2.6 ಲಕ್ಷದಷ್ಟಿರುವ ಗ್ರಾಮೀಣ ಅಂಚೆ ಸೇವಕರಿಗೆ ಸಿಗಲಿದೆ. ಈ ಹಿಂಬಾಕಿಯನ್ನು ಒಂದೇ ಬಾರಿಗೆ ಸರ್ಕಾರ ಪಾವತಿ ಮಾಡಲಿದೆ. ಏರಿಕೆ ಅನ್ವಯ, ಪ್ರತಿ ಸಿಬ್ಬಂದಿಗೆ ಕನಿಷ್ಟ1.50 ಲಕ್ಷ ರುವರೆಗೆ ಹಿಂಬಾಕಿ ಹಣ ಸಿಗಲಿದೆ. ಈ ಏರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ 2018-19ನೇ ಸಾಲಿನಲ್ಲಿ 1257 ಕೋಟಿ ರು. ಹೊರೆ ಬೀಳಲಿದೆ.

ಇದಲ್ಲದೆ ಮೂಲ ವೇತನಕ್ಕೆ ಹೊರತಾಗಿ ಭತ್ಯೆ ಕೂಡಾ ನೀಡಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಇದೇ ಮೊದಲ ಬಾರಿಗೆ ಗ್ರಾಮೀಣ ಅಂಚೆ ಸೇವಕರಿಗೆ ಅಪಾಯ ಮತ್ತು ಶ್ರಮ ಭತ್ಯೆಯನ್ನೂ ನೀಡಲೂ ಸರ್ಕಾರ ನಿರ್ಧರಿಸಿದೆ. ಇದೆಲ್ಲರ ಜೊತೆಗೆ ಇನ್ನು ಮುಂದೆ ಗ್ರಾಮೀಣ ಅಂಚೆ ಸೇವಕರು ಮೂರು ಪಾಳಿಯ ಬದಲಾಗಿ ಎರಡು ಪಾಳಿಗಳಲ್ಲಿ ಕಾರ್ಯನಿರ್ವಹಲಿಸದ್ದಾರೆ ಎಂದು ಸಂಪುಟ ಸಭೆಯ ಬಳಿಕ ಟೆಲಿಕಾಂ ಖಾತೆ ಸಚಿವ ಮನೋಜ್‌ ಸಿನ್ಹಾ ತಿಳಿಸಿದರು.

ಗ್ರಾಮೀಣ ಡಾಕ್‌ ಸೇವೆಯಲ್ಲಿದ್ದ ವಿವಿಧ ಹುದ್ದೆಗಳ ಬದಲಿಗೆ ಇನ್ನು ಕೇವಲ ಹುದ್ದೆಗಳು ಮಾತ್ರ ಇರಲಿವೆ. 12000 ರು. ವೇತನ ಪಡೆಯುವ ಸಹಾಯಕ ಬ್ರಾಂಚ್‌ ಪೋಸ್ಟ್‌ ಮಾಸ್ಟರ್‌ ದಿನಕ್ಕೆ 4 ತಾಸು ಕೆಲಸ ಮಾಡಲಿದ್ದರೆ, 14500 ರು. ವೇತನ ಪಡೆಯುವ ಬ್ರಾಂಚ್‌ ಪೋಸ್ಟ್‌ ಮಾಸ್ಟರ್‌ ದಿನಕ್ಕೆ 5 ಗಂಟೆ ಕಾರ್ಯನಿರ್ವಹಿಸಲಿದ್ದಾರೆ.

ಏನಿದು ಗ್ರಾಮೀಣ್‌ ಡಾಕ್‌ ಸೇವಾ?

ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಅಂಚೆ ಸೇವೆ ನೀಡಲು ಅಂಚೆ ಇಲಾಖೆ ಹೊಂದಿರುವ ಸಣ್ಣ ಅಂಚೆ ಕಚೇರಿಗಳು. ಇಲ್ಲಿ ಸಾಮಾನ್ಯ ಅಂಚೆ ಕಚೇರಿಯಲ್ಲಿ ಸಿಗುವ ಹಲವು ಸೇವೆಗಳು ಲಭ್ಯವಿರುತ್ತದೆ.

click me!