
ಮಡಿಕೇರಿ(ಡಿ.20): ಕಳೆದ 14 ದಿನಗಳಿಂದ ತಲೆ ಮೇಲಿನ ಸೂರಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಗಿರಿಜನರ ಮುಖದಲ್ಲಿ ಕೊಂಚ ಮಟ್ಟಿಗೆ ಮಂದಹಾಸ ಮೂಡಿದೆ. ಉಗ್ರ ಪ್ರತಿಭಟನೆಗೆ ಮಣಿದ ಸರ್ಕಾರ ಇದೀಗ ಅದೇ ಸ್ಥಳದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದೆ. ಹೀಗಾಗಿ ಗಿರಿಜನರು, ಉಗ್ರ ಹೋರಾಟ ಕೈಬಿಟ್ಟು, ಶಾಂತಿಯುತ ಹೋರಾಟಕ್ಕೆ ಮುಂದಾಗಿದ್ದಾರೆ.
ಇಷ್ಟು ದಿನ ಬೆತ್ತಲೆ ಪ್ರತಿಭಟನೆ ಮಾಡಿದರೂ ತಲೆಕೆಡೆಸಿಕೊಳ್ಳದ ಸರ್ಕಾರ ಇದೀಗ, ಪ್ರತಿಭಟನೆ ತೀವ್ರಗೊಳ್ಳುತ್ತಿದಂತೆ ಪ್ರತಿಭಟನಾಕಾರರ ಮನವೊಲಿಕೆಗೆ ಮುಂದಾಗಿದೆ. ಒಕ್ಕಲೆಬ್ಬಿಸಿರುವ ಮಡಿಕೇರಿ ಜಿಲ್ಲೆಯ ದಿಡ್ಡಳ್ಳಿಯ 577 ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವ ಭರವಸೆ ನೀಡಿದೆ.
ನಿನ್ನೆ ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಪರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್ ಸೀತಾರಾಮ್ ಸ್ಥಳಕ್ಕೆ ಆಗಮಿಸಿ, ಭರವಸೆ ಮಾತುಗಳನ್ನಾಡಿದರು. ಇದಕ್ಕೆ ಬಗ್ಗದ ಆದಿವಾಸಿಗಳು ಇದೇ ಸ್ಥಳದಲ್ಲಿ ಮನೆ ನಿರ್ಮಿಸಿಕೊಡಬೇಕೆಂದು ಪಟ್ಟು ಹಿಡಿದರು. ಸ್ಥಳದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಸೀತರಾಮ್, ಸಭೆ ನಡೆಸಿ, ಸದ್ಯಕ್ಕೆ ನಿರಾಶ್ರಿತಗೊಂಡವರಿಗೆ ಸ್ಥಳದಲ್ಲೇ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರ ಈ ಭರವಸೆ, ಹೋರಾಟಗಾರರ ಮುಖದಲ್ಲಿ ಕೊಂಚ ಮಂದಹಾಸ ಮೂಡಿಸಿದೆ.
ಇನ್ನೂ ಸಭೆಗೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಮ್'ಗೆ ಗಿರಿಜನ ಮಹಿಳೆ ಮುತ್ತಮ್ಮ ತಮ್ಮದೆ ಧಾಟಿಯಲ್ಲಿ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಟ್ಟರು.
ಒಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನೀಡಿರುವ ಭರವಸೆ ಹಿನ್ನೆಲೆಯಲ್ಲಿ ತಾತ್ಕಲಿಕವಾಗಿ ಉಗ್ರ ಪ್ರತಿಭಟನೆ ಕೈಬಿಟ್ಟು ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಮೂರು ತಿಂಗಳೊಳಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಕೊಡದಿದ್ದಲ್ಲಿ ಮತ್ತೆ ಉಗ್ರ ಹೋರಾಟ ಮಾಡಲು ತೀರ್ಮಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.