
ಬೆಂಗಳೂರು(ಜ.25): ಕಳಂಕಿತ ಅಧಿಕಾರಿಗಳು, ವ್ಯಕ್ತಿಗಳನ್ನೇ ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡುತ್ತಿರುವ ರಾಜ್ಯ ಸರ್ಕಾರದ ಹಾದಿಯನ್ನೇ ಈಗ ರಾಜ್ಯಪಾಲರು ಹಿಡಿದಿದ್ದಾರೆ. ಆರೋಪಗಳ ಕುರಿತು ತನಿಖೆಗೆ ಗುರಿಯಾಗಿರುವ ರಿಟೈರ್ಡ್ ವೈಸ್ ಛಾನ್ಸಲರ್'ನ್ನು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಆಯ್ಕೆಗೆ ರಚನೆಯಾಗಿರುವ ಸರ್ಚ್ ಕಮಿಟಿಗೆ ರಾಜ್ಯಪಾಲ ವಜುಭಾಯ್ ವಾಲಾ ನೇಮಿಸಿದ್ದಾರೆ.
ಸರ್ಚ್ ಕಮಿಟಿಗೆ ಕಳಂಕಿತ ವಿಶ್ರಾಂತ ಕುಲಪತಿ ನೇಮಕ
ವಿಶ್ವವಿದ್ಯಾಲಯಗಳಲ್ಲಿ ಭ್ರಷ್ಟಾಚಾರ ನಡೆಸಿರುವ ಕುರಿತು ದಾಖಲೆ ಸಮೇತ ದೂರು ಸಲ್ಲಿಕೆಯಾಗಿರುವ ವಿಶ್ರಾಂತ ಕುಲಪತಿಗಳಿಗೆ ಒಂದು ರೀತೀಯಲ್ಲಿ ಶುಕ್ರ ದೆಸೆ ಆರಂಭವಾಗಿದೆ. ಹಾಲಿ ಮತ್ತು ವಿಶ್ರಾಂತ ಕುಲಪತಿಗಳ ವಿರುದ್ಧ ಹಲವು ದೂರುಗಳು ರಾಜ್ಯಪಾಲರ ಬಳಿ ಇವೆ. ಕೆಲ ಕುಲಪತಿಗಳ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರೇ ವಿಚಾರಣೆ ಆಯೋಗ ರಚಿಸಿ ತನಿಖೆ ನಡೆಸ್ತಿದಾರೆ. ಈಗ ಅಂತ ಕುಲಪತಿಗಳೇ ಈಗ ವಿವಿಧ ನೇಮಕ ಸಮಿತಿಗಳಿಗೆ ನೇಮಕವಾಗುತ್ತಿದ್ದಾರೆ.
ಬೆಂಗಳೂರು ವಿ.ವಿ.ಕುಲಪತಿ ನೇಮಕ ಸರ್ಚ್ ಕಮಿಟಿ: ಕಮಿಟಿಗೆ ಪ್ರೊ.ಎಸ್.ಇಂದುಮತಿ ನೇಮಕ ಎಷ್ಟು ಸರಿ?
ಹಣಕಾಸು ದುರುಪಯೋಗ ಸೇರಿದಂತೆ ವಿವಿಧ ರೀತಿಯ ಅವ್ಯವಹಾರಗಳನ್ನು ನಡೆಸಿದ್ದಾರೆ ಎಂಬ ಆರೋಪ ಸೇರಿದಂತೆ ವಿವಿಧ ರೀತಿಯ ಆರೋಪಗಳಿಗೆ ಗುರಿಯಾಗಿರುವ ದಾವಣಗೆರೆ ವಿಶ್ರಾಂತ ಕುಲಪತಿ ಪ್ರೊ.ಎಸ್. ಇಂದುಮತಿ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ನೇಮಕಕ್ಕೆ ರಚಿಸಿರುವ ಸರ್ಚ್ ಕಮಿಟಿಗೆ ನೇಮಿಸಲಾಗಿದೆ. ಇವರನ್ನು ನೇಮಿಸಿರೋದು ಖುದ್ದು ರಾಜ್ಯಪಾಲರೇ. ಇವರ ನೇಮಕ ಕುರಿತು ಈಗ ವಿಶ್ವವಿದ್ಯಾಲಯಗಳ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿವೆ.
ಅಭಿವೃದ್ಧಿ ಆಯುಕ್ತರಿಂದ ವಿಚಾರಣೆ
ವಕೀಲ ನಿರಂಜನ್ಮೂರ್ತಿ ಎಂಬುವರು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಪ್ರೊ.ಎಸ್. ಇಂದುಮತಿ ಅವರ ವಿರುದ್ಧ ದಾಖಲೆ ಸಮೇತ ದೂರು ಸಲ್ಲಿಸಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯಪಾಲ ವಜುಭಾಯ್ ವಾಲಾ ಅವರು ಇಂದುಮತಿ ಅವರ ವಿರುದ್ಧ ಕೇಳಿಬಂದ ಆರೋಪಗಳ ಕುರಿತು ತನಿಖೆ ನಡೆಸಲು ಅಭಿವೃದ್ಧಿ ಆಯುಕ್ತರಾಗಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಲತಾ ಕೃಷ್ಣರಾವ್ ಅವರ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸಿದ್ದರು. ತನಿಖಾ ಸಮಿತಿ ನೀಡಿರುವ ವರದಿಯೂ ಇನ್ನೂ ಬಹಿರಂಗವಾಗಿಲ್ಲ. ಇದರ ಮಧ್ಯೆಯೇ ಇಂದುಮತಿ ಅವರನ್ನು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ನೇಮಕಕ್ಕೆ ರಚನೆಯಾಗಿರುವ ಸರ್ಚ್ ಕಮಿಟಿಗೆ ನೇಮಕ ಮಾಡಿರುವ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.