ಬಗ್ಗದ ಮಾಯಾವತಿ : ಸಚಿವರ ರಾಜೀನಾಮೆ ಅಂಗೀಕಾರ

By Web DeskFirst Published Oct 16, 2018, 11:22 AM IST
Highlights

ಸಂಧಾನಕ್ಕೆ ಮಣಿಯದ ಬಿಎಸ್ಪಿ ಅಧಿನಾಯಕಿ ಮಾಯವತಿ ಅವರು, ಪಕ್ಷದ ಸಚಿವರ ರಾಜೀನಾಮೆ ಅಂಗೀಕರಿಸುವಂತೆ ತಮ್ಮ ಸಂದೇಶವನ್ನು ದೂತ ಸತೀಶ್ ಮಿಶ್ರಾ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಲುಪಿಸಿದರು. ಎನ್. ಮಹೇಶ್ ಸಲ್ಲಿಸಿದ್ದ ರಾಜೀನಾಮೆ ಯನ್ನು ಸೋಮವಾರ ರಾಜ್ಯಪಾಲರು ಅಂಗೀಕರಿಸಿದ್ದಾರೆ. 

ಬೆಂಗಳೂರು: ನಾಲ್ಕು ದಿನಗಳ ಹಿಂದೆ ದಿಢೀರ್‌ನೇ ಸಚಿವ ಸ್ಥಾನಕ್ಕೆ ಬಿಎಸ್ಪಿ ಶಾಸಕ ಎನ್. ಮಹೇಶ್ ಸಲ್ಲಿಸಿದ್ದ ರಾಜೀನಾಮೆ ಯನ್ನು ಸೋಮವಾರ ರಾಜ್ಯಪಾಲರು ಅಂಗೀಕರಿಸಿದ್ದಾರೆ. 

ಮೈತ್ರಿ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ಬಿಎಸ್ಪಿಯ ಏಕೈಕ ಶಾಸಕ ಮಹೇಶ್ ಅವರು ಪಕ್ಷದ ಸಂಘಟನೆ ಮತ್ತು ಸ್ವಕ್ಷೇತ್ರದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸುವ ಕಾರಣ ನೀಡಿ ಮಂತ್ರಿ ಪದವಿ ತ್ಯಜಿಸಿದ್ದರು. ಬಳಿಕ ತೃತೀಯ ರಂಗದ ನಾಯಕರ ಮೂಲಕ ಬಿಎಸ್ಪಿ ಮುಖಂಡರ ಮನವೊಲಿಕೆಗೆ ಜೆಡಿಎಸ್ ಪಕ್ಷದಿಂದ ಯತ್ನವೂ ನಡೆಯಿತು. 

ಆದರೆ ಈ ಸಂಧಾನಕ್ಕೆ ಮಣಿಯದ ಬಿಎಸ್ಪಿ ಅಧಿನಾಯಕಿ ಮಾಯವತಿ ಅವರು, ಪಕ್ಷದ ಸಚಿವರ ರಾಜೀನಾಮೆ ಅಂಗೀಕರಿಸುವಂತೆ ತಮ್ಮ ಸಂದೇಶವನ್ನು ದೂತ ಸತೀಶ್ ಮಿಶ್ರಾ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಲುಪಿಸಿದರು. 

ಈ ಸಂದೇಶ ರವಾನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಹೇಶ್ ಅವರ ರಾಜೀನಾಮೆ ಅಂಗೀಕರಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿದರು. ಇದಕ್ಕೆ ಸಂಜೆ ಹೊತ್ತಿಗೆ  ರಾಜ್ಯಪಾಲರು ಸಮ್ಮತಿಸಿದರು. ಮಹೇಶ್ ರಾಜೀನಾಮೆ ಅಂಗೀಕಾರದಿಂದಾಗಿ ಸಂಪುಟದಲ್ಲಿ 8 ಸ್ಥಾನ ಖಾಲಿ ಉಳಿದಂತಾಗಿದೆ.

click me!