ಬೆಂಗಳೂರಲ್ಲಿದ್ದ 31 ಮಂದಿ ಅರೆಸ್ಟ್ : ಯಾರವರು..?

By Web DeskFirst Published Oct 16, 2018, 8:35 AM IST
Highlights

ಬೆಂಗಳೂರಿನಲ್ಲಿ 2- 3 ವರ್ಷಗಳಿಂದ ವಾಸವಿದ್ದು, ಇದೀಗ ತವರಿಗೆ ತೆರಳಲು ಸಜ್ಜಾಗಿದ್ದ 31 ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಸೋಮ ವಾರ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ವಶಕ್ಕೆ ಪಡೆಯಲಾಗಿದೆ. 

ಗುವಾಹಟಿ: ಬೆಂಗಳೂರಿನಲ್ಲಿ 2- 3 ವರ್ಷಗಳಿಂದ ವಾಸವಿದ್ದು, ಇದೀಗ ತವರಿಗೆ ತೆರಳಲು ಸಜ್ಜಾಗಿದ್ದ 31 ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಸೋಮ ವಾರ ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿ ವಶಕ್ಕೆ ಪಡೆಯಲಾಗಿದೆ. ರೈಲು ನಿಲ್ದಾಣದಲ್ಲಿ ಶಂಕಾಸ್ಪದ ವಾಗಿ ವರ್ತಿಸುತ್ತಿದ್ದ ಕೆಲವರನ್ನು ರೈಲ್ವೆ ಪೊಲೀಸರು ತಪಾಸಣೆ ನಡೆಸಿದಾಗ ಅವರೆಲ್ಲಾ ಅಕ್ರಮ ವಲಸಿಗರು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ
ಎಲ್ಲಾ 31 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮನೆಕೆಲಸ ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ ಅಕ್ರಮ ವಲಸಿಗರು, ತ್ರಿಪುರಾ ರಾಜಧಾನಿ ಅಗರ್ತಲಾ ಮೂಲಕ ಬಾಂಗ್ಲಾಕ್ಕೆ ತೆರಳಲು ಸಜ್ಜಾಗಿದ್ದರು. ಈ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಮೂಲಕ ವಲಸಿಗರ ಗುಂಪು ಗುವಾಹಟಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ, ನಿಲ್ದಾಣದಲ್ಲೇ ಬೀಡುಬಿಟ್ಟಿತ್ತು ಸೋಮವಾರ ಇವರೆಲ್ಲಾ ಕಾಂಚನಜುಂಗಾ ರೈಲಿನ ಮೂಲಕ ಅಗರ್ತಲಾಕ್ಕೆ ಹೊರಡಲು ಸಜ್ಜಾಗಿದ್ದರು. 

ಈ ವೇಳೆ ರೈಲ್ವೆ ಪೊಲೀಸರ ತಂಡವೊಂದು ಅನುಮಾನದ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರ ಬಳಿ ಗುರುತಿನ ಚೀಟಿ ಕೇಳಿತ್ತು. ಈ ವೇಳೆ ಅವರು ತಾವು ಭಾರತೀಯ ನಾಗರಿಕರು ಎಂಬ ದಾಖಲೆ ಒದಗಿಸುವಲ್ಲಿ ವಿಫಲವಾಗಿದ್ದಾರೆ. ಬಳಿಕ ವಿಚಾರಣೆ ವೇಳೆ ತಾವೆಲ್ಲಾ ಬಾಂಗ್ಲಾದೇಶದ ಬಗೇರ್‌ಹಟ್ ಜಿಲ್ಲೆಗೆ ಸೇರಿದವರು. 2- 3  ವರ್ಷದ ಹಿಂದೆ ಅಕ್ರಮವಾಗಿ ಭಾರತ ಪ್ರವೇಶಿಸಿ, ಬೆಂಗಳೂರಿಗೆ ತೆರಳಿದ್ದೆವು. ಅಲ್ಲಿಯೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದೆವು ಎಂದು ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ 31  ಜನರನ್ನು ವಶಕ್ಕೆ ಪಡೆಯಲಾಯಿತು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

click me!