ಬ್ಯಾಂಕುಗಳು ರೈತರ ಸಾಲದ ಲೆಕ್ಕವನ್ನೇ ನೀಡುತ್ತಿಲ್ಲ-ಹೆಚ್‌ಡಿಕೆ ಆರೋಪ!

By Web DeskFirst Published Oct 12, 2018, 9:59 AM IST
Highlights

ರೈತರ ಮನ್ನ ಮಾಡದ ಸಾಲವನ್ನ ಪಾವಿತಿಸಲು ಸರ್ಕಾರ ಸಿದ್ದವಿದ್ದರೂ, ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲದ ವಿವರ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇಲ್ಲಿದೆ ಹೆಚ್.ಡಿ.ಕೆ ಆರೋಪದ ವಿವರ.

ಬೆಂಗಳೂರು(ಅ.12): ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಮಾಡಿರುವ ಸಾಲ ಮನ್ನಾ ಮಾಡುವ ಸಂಬಂಧ ನವೆಂಬರ್‌ ಒಂದರಿಂದ ಬ್ಯಾಂಕುಗಳಿಗೆ ಹಣವನ್ನು ಪಾವತಿ ಮಾಡಲು ಸರ್ಕಾರ ಸಿದ್ಧವಾಗಿದ್ದರೂ ಬ್ಯಾಂಕುಗಳು ವಿವರ ನೀಡದೇ ಇರುವುದನ್ನು ನೋಡಿದರೆ ಇದಕ್ಕೆ ರಾಜಕಾರಣ ಎನ್ನದೇ ಇನ್ನೇನೆಂದು ಹೇಳಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತೀಕ್ಷಣವಾಗಿ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾಲ ಮನ್ನಾ ಮಾಡಲು ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ಸಾಲ ಮನ್ನಾ ಮಾಡಲು 6,500 ಕೋಟಿ ರು. ಹಣವನ್ನು ಈಗಾಗಲೇ ತೆಗೆದಿರಿಸಲಾಗಿದೆ. ಆದರೆ ಯಾವ ರೈತ ಎಷ್ಟುಸಾಲ ಪಡೆದಿದ್ದಾರೆಂಬ ಎಂಬ ಬಗ್ಗೆ ಬ್ಯಾಂಕುಗಳು ಮಾಹಿತಿ ನೀಡಬೇಕಾಗುತ್ತದೆ. ನಾವು ರೈತರ ಸಾಲ ಮನ್ನಾ ಮಾಡಲು ಹಣ ರೆಡಿ ಮಾಡಿಟ್ಟುಕೊಂಡಿದ್ದರೂ ಬ್ಯಾಂಕುಗಳು ವಿವರ ನೀಡುತ್ತಿಲ್ಲ ಎಂದರೆ ಏನರ್ಥ, ರಾಜಕಾರಣ ಎಂದು ಹೇಳಬೇಕಾಗುತ್ತದೆ ಎಂದರು.

ರಾಷ್ಟ್ರೀಕೃತ ಬ್ಯಾಂಕುಗಳು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತವೆ. ಬಿಜೆಪಿ ನಾಯಕರು ರಾಜ್ಯದ ರೈತರ ಸಾಲ ಮನ್ನಾ ಮಾಡಲು ಕೇಂದ್ರದಿಂದ ಬಿಡಿಗಾಸು ತರಲಿಲ್ಲ. ಕೊನೆ ಪಕ್ಷ ಪ್ರಧಾನಿ ಮೋದಿ ಅಥವಾ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಬಳಿ ಹೋಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರಾಜ್ಯದ ರೈತರು ಮಾಡಿರುವ ಸಾಲದ ವಿವರವನ್ನು ಸರ್ಕಾರಕ್ಕೆ ಕೊಡುವಂತೆ ಸಂಬಂಧ ಪಟ್ಟಬ್ಯಾಂಕುಗಳಿಗೆ ನಿರ್ದೇಶನ ನೀಡುವಂತೆ ಒತ್ತಾಯಿಸುವ ಕೆಲಸ ಮಾಡಿದರೆ ಅವರಿಗೆ ಆಭಾರಿಯಾಗಿರುತ್ತೇನೆ ಎಂದು ತಿರುಗೇಟು ನೀಡಿದರು.

ಸಾಲ ಮನ್ನಾ ಸಂಬಂಧ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಅವರುಗಳು ನಿರಂತರವಾಗಿ ಬ್ಯಾಂಕ್‌ಗಳಿಂದ ಮಾಹಿತಿ ಪಡೆಯುವ ಕೆಲಸ ಮಾಡುತ್ತಿದ್ದಾರೆ, ಬರುವ ನವೆಂಬರ್‌ 1ರಿಂದ ಬ್ಯಾಂಕುಗಳಿಗೆ ರೈತರ ಸಾಲದ ಹಣವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದರ ಉಪಯೋಗವನ್ನು ಬ್ಯಾಂಕುಗಳು ಪಡೆಯಬೇಕು ಎಂದು ಮುಖ್ಯಮಂತ್ರಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನೋಟಿಸ್‌ ಅಲ್ಲ ತಿಳಿವಳಿಕೆ ಪತ್ರ:
ಸಾಲ ಪಾವತಿ ಮಾಡುವಂತೆ ಯಾವುದೇ ನೋಟಿಸ್‌ ನೀಡಿಲ್ಲ, ಬದಲಾಗಿ ಅದೊಂದು ತಿಳಿವಳಿಕೆ ಪತ್ರ ಎಂಬುದಾಗಿ ಎಸ್‌ಬಿಐ ಸ್ಪಷ್ಟಪಡಿಸಿದೆ. ಒಂದು ಬಾರಿ ಸಾಲ ತೀರುವಳಿ ಮಾಡುತ್ತೇವೆ. ಕಡಿಮೆ ಬಡ್ಡಿ ಆಕರಿಸಲಾಗುವುದು ಎಂಬುದಾಗಿ ಬ್ಯಾಂಕುಗಳು ಹೇಳಿವೆ. ಬ್ಯಾಂಕುಗಳ ಸಹ ರೈತರಿಗೆ ಕೆಲವು ವಿವರ ಕೇಳಿವೆ. ಅದನ್ನು ಅವರು ಸಲ್ಲಿಸಬೇಕು ಎಂದು ಇದೇ ವೇಳೆ ಮುಖ್ಯಮಂತ್ರಿಗಳು ಹೇಳಿದರು.

click me!