
ನವದೆಹಲಿ (ಜೂ. 02): ಬೇನಾಮಿ ಆಸ್ತಿಯ ಬಗ್ಗೆ ಖಚಿತ ಮಾಹಿತಿ ನೀಡುವವರಿಗೆ 1 ಕೋಟಿ ರು.ವರೆಗೆ ಬಹುಮಾನ ನೀಡುವ ಆಕರ್ಷಕ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ. ಇದಕ್ಕಾಗಿ ‘ಆದಾಯ ತೆರಿಗೆ ಮಾಹಿತಿದಾರರ ಬಹುಮಾನ ಯೋಜನೆ-2018’ ಎಂಬ ಆದೇಶವೊಂದನ್ನು ಶುಕ್ರವಾರ ಹೊರಡಿಸಿದ್ದು, ಇದು ತೆರಿಗೆ ಇಲಾಖೆಗೆ ಸಂಬಂಧಿಸಿದ ಈ ಹಿಂದಿನ ಎಲ್ಲಾ ಬಹುಮಾನ ಯೋಜನೆಗಳನ್ನು ರದ್ದುಪಡಿಸಿದೆ.
ಈ ಯೋಜನೆಯಡಿ, ಯಾರಾದರೂ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಜನರಿಗೆ ಗೊತ್ತಿದ್ದರೆ ಆ ಕುರಿತ ಖಚಿತ ಮಾಹಿತಿಯನ್ನು ನಿರ್ದಿಷ್ಟನಮೂನೆಯಲ್ಲಿ ಆದಾಯ ತೆರಿಗೆ ಇಲಾಖೆಯ ತನಿಖಾ ನಿರ್ದೇಶನಾಲಯದಲ್ಲಿರುವ ಬೇನಾಮಿ ನಿಷೇಧ ಘಟಕದ ಜಂಟಿ ಅಥವಾ ಹೆಚ್ಚುವರಿ ಆಯುಕ್ತರಿಗೆ ಸಲ್ಲಿಸಬೇಕು.
ಆ ಮಾಹಿತಿ ನಿಜವಾಗಿದ್ದಲ್ಲಿ ಮತ್ತು ಅದರಲ್ಲಿ ಹೇಳಲಾದ ಬೇನಾಮಿ ಆಸ್ತಿಯು ಬೇನಾಮಿ ಕಾಯ್ದೆಯ ಪ್ರಕಾರ ಹರಾಜು ಹಾಕುವಂಥದ್ದಾಗಿದ್ದಲ್ಲಿ ಮಾಹಿತಿದಾರರಿಗೆ 1 ಕೋಟಿ ರು.ವರೆಗೆ ಬಹುಮಾನ ಸಿಗಲಿದೆ. ವಿದೇಶದಲ್ಲಿರುವ ಬೇನಾಮಿ ಆಸ್ತಿಯ ಬಗ್ಗೆಯೂ ಮಾಹಿತಿ ನೀಡಬಹುದು ಹಾಗೂ ವಿದೇಶದಲ್ಲಿರುವವರೂ ಭಾರತದಲ್ಲಿರುವ ಬೇನಾಮಿ ಆಸ್ತಿಗಳ ಬಗ್ಗೆ ಮಾಹಿತಿ ನೀಡಬಹುದು. ಮಾಹಿತಿದಾರರ ಗುರುತನ್ನು ಅತ್ಯಂತ ರಹಸ್ಯವಾಗಿ ಇರಿಸಲಾಗುತ್ತದೆ ಎಂದು ಹಣಕಾಸು ಇಲಾಖೆಯ ಪ್ರಕಟಣೆ ತಿಳಿಸಿದೆ.
ಬಹುಮಾನದ ಕುರಿತ ಹೆಚ್ಚಿನ ವಿವರಗಳು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಬೇರೆಯವರ ಹೆಸರಿನಲ್ಲಿ ಆಸ್ತಿ ಖರೀದಿಸಿ, ಅದರ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡದೆ ಬಚ್ಚಿಟ್ಟಿದ್ದರೆ ಅದು ಬೇನಾಮಿ ಆಸ್ತಿ ಎಂದು ಕರೆಸಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯು ತನ್ನ ಆದಾಯದಲ್ಲಿ ತನ್ನ ಪತಿ/ಪತ್ನಿ ಅಥವಾ ಮಕ್ಕಳ ಹೆಸರಿನಲ್ಲಿ ಆಸ್ತಿ ಖರೀದಿಸಿ ರಹಸ್ಯವಾಗಿಟ್ಟಿದ್ದರೂ ಅದು ಬೇನಾಮಿ ಆಸ್ತಿಯಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.