
ನವದೆಹಲಿ(ಸೆ. 26): 3ಜಿ ಆಯ್ತು, ಈಗ 4ಜಿ ಕಾಲ... ಬಹುತೇಕ ಪ್ರಮುಖ ರಾಷ್ಟ್ರಗಳು 4ಜಿ ನೆಟ್ವರ್ಕ್'ನಲ್ಲಿ ಜಾಲಾಡುತ್ತಿದ್ದ ಸಮಯದಲ್ಲಿ ಭಾರತದಲ್ಲಿ ಇನ್ನೂ ಕೂಡ 2ಜಿ ಮತ್ತು 3ಜಿ ತಂತ್ರಜ್ಞಾನ ಜಾರಿಯಲ್ಲಿತ್ತು. 4ಜಿ ಬರಲು ಸಾಕಷ್ಟು ವರ್ಷವೇ ಹಿಡಿಯಿತು. ಕೇಂದ್ರ ಸರಕಾರ ಈಗಾಗಲೇ 5ಜಿಗೆ ಸ್ಕೆಚ್ ಹಾಕಿದೆ. 2020ರಷ್ಟರಲ್ಲಿ ದೇಶದಲ್ಲಿ 5ಜಿ ತಂತ್ರಜ್ಞಾನ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ 5ಜಿ ಕಮಿಟಿ ರಚಿಸಿದೆ. 5ಜಿ ತಂತ್ರಜ್ಞಾನ ಜಾರಿ ಮಾಡಿದ ಮೊದಲ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನೂ ನಿಲ್ಲಿಸಲು ಸರಕಾರ ಪ್ಲಾನ್ ಮಾಡಿದೆ. ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಇಂದು ಮಂಗಳವಾರ ಉನ್ನತ ಮಟ್ಟದ 5ಜಿ ಸಮಿತಿ ರಚಿಸಿರುವ ವಿಚಾರವನ್ನು ಬಹಿರಂಗಗೊಳಿಸಿದ್ದಾರೆ. ಟೆಲಿಕಾಂ ಇಲಾಖೆ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ, ವಿಜ್ಞಾನ ಮತ್ತು ತಂತ್ರಜ್ಞಾ ಇಲಾಖೆಯ ಕಾರ್ಯದರ್ಶಿಗಳು 5ಜಿ ಕಮಿಟಿಯಲ್ಲಿರಲಿದ್ದಾರೆ. 5ಜಿ ನೆಟ್ವರ್ಕ್ ರೂಪಿಸಲು ಸಂಶೋಧನೆ ಮತ್ತಿತರ ಕಾರ್ಯಗಳಿಗೆ ಸರಕಾರ ಅದಾಗಲೇ 500 ಕೋಟಿ ರೂ ಎತ್ತಿಟ್ಟಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
2020ರಲ್ಲಿ 5ಜಿ ತಂತ್ರಜ್ಞಾನ ಜಾರಿಗೆ ಬಂದಲ್ಲಿ ಇಂಟರ್ನೆಟ್ ವೇಗವು ಈಗಿರುವುದಕ್ಕಿಂತ ಹಲವು ಪಟ್ಟು ಹೆಚ್ಚಾಗಲಿದೆ. ನಗರ ಪ್ರದೇಶಗಳಲ್ಲಿ ಸೆಕೆಂಡ್'ಗೆ 10 ಸಾವಿರ ಎಂಬಿಪಿಎಸ್ (10 ಜಿಪಿಬಿಎಸ್) ವೇಗದ ಇಂಟರ್ನೆಟ್; ಹಾಗೂ ಗ್ರಾಮೀಣ ಪ್ರದೇಶದಲ್ಲಿ 1 ಸಾವಿರ ಎಂಬಿಪಿಎಸ್ (1 ಜಿಬಿಪಿಎಸ್) ವೇಗದ ಇಂಟರ್ನೆಟ್ ಕೊಡುವುದು ಕೇಂದ್ರ ಸರಕಾರದ ಗುರಿಯಾಗಿದೆ.
ಈಗಿರುವ 4ಜಿ ನೆಟ್ವರ್ಕ್'ನಲ್ಲಿ 1-10 ಎಂಬಿಪಿಎಸ್ ಇಂಟರ್ನೆಟ್ ವೇಗ ಮಾತ್ರ ಸಾಧ್ಯ. ಅಂದರೆ, 4ಜಿ ಗಿಂತ 5ಜಿ ನೆಟ್ವರ್ಕ್'ನಲ್ಲಿ ಇಂಟರ್ನೆಟ್ ವೇಗ ಸಾವಿರ ಪಟ್ಟು ಹೆಚ್ಚು ಇರಲಿದೆ. ಎರಡೂವರೆ ಗಂಟೆಯ ಒಂದು ಸಿನಿಮಾವನ್ನು ಕೆಲವೇ ಸೆಕೆಂಡ್'ಗಳಲ್ಲಿ ಡೌನ್'ಲೋಡ್ ಮಾಡಲು ಸಾಧ್ಯವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.