ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ

By Suvarna Web DeskFirst Published Feb 1, 2018, 7:20 AM IST
Highlights

ಬಹುದಿನಗಳ ನಿರೀಕ್ಷೆಯಂತೆ ಆರನೇ ರಾಜ್ಯ ವೇತನ ಆಯೋಗ ಬುಧವಾರ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಯಲ್ಲಿ ಸರ್ಕಾರಿ ನೌಕರರ ವೇತನ ಹಾಗೂ ಪಿಂಚಣಿಯಲ್ಲಿ ಶೇ.30ರಷ್ಟು ಹೆಚ್ಚಳಕ್ಕೆ ಶಿಫಾರಸು ಮಾಡಿದೆ.

ಬೆಂಗಳೂರು : ಬಹುದಿನಗಳ ನಿರೀಕ್ಷೆಯಂತೆ ಆರನೇ ರಾಜ್ಯ ವೇತನ ಆಯೋಗ ಬುಧವಾರ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಯಲ್ಲಿ ಸರ್ಕಾರಿ ನೌಕರರ ವೇತನ ಹಾಗೂ ಪಿಂಚಣಿಯಲ್ಲಿ ಶೇ.30ರಷ್ಟು ಹೆಚ್ಚಳಕ್ಕೆ ಶಿಫಾರಸು ಮಾಡಿದೆ.

 ಜತೆಗೆ ಕನಿಷ್ಠ ವೇತನ 17 ಸಾವಿರ ರು. ನಿಗದಿ ಮಾಡಬೇಕು, ಮನೆ ಬಾಡಿಗೆ ಭತ್ಯೆ ಸೇರಿದಂತೆ ವಿವಿಧ ಭತ್ಯೆ ಯನ್ನು ಹೆಚ್ಚಿಸಬೇಕು, ಕನಿಷ್ಠ ಪಿಂಚಣಿ ಪ್ರತಿ ತಿಂಗಳು 8500 ರು. ಮತ್ತು ತುಟ್ಟಿ ಭತ್ಯೆ ಹಾಗೂ ಗರಿಷ್ಠ ಪಿಂಚಣಿ 75,300ರು. ನೀಡಬೇಕು, ಕುಟುಂಬ ಪಿಂಚಣಿಯ ಗರಿಷ್ಠ ಮಿತಿ ಪ್ರತಿ ತಿಂಗಳು 45,100 ರು. ಇರಬೇಕು ಎಂದು ಶಿಫಾರಸು ಮಾಡಿದೆ.

ಆಯೋಗದ ಶಿಫಾರಸಿನ ಅನ್ವಯ ವೇತನ ಮತ್ತು ಪಿಂಚಣಿಗಳಲ್ಲಿನ ಪರಿಷ್ಕರಣೆಯು ಕಳೆದ ವರ್ಷದ ಜುಲೈ 1, 2017 ರಿಂದ ಪೂರ್ವಾನ್ವಯವಾಗಿ ಜಾರಿಯಾಗಬೇಕು, ಪರಿಷ್ಕೃತ ದರಗಳಂತೆ ಆರ್ಥಿಕ ಸೌಲಭ್ಯವನ್ನು ಈ ವರ್ಷದ ಏಪ್ರಿಲ್ ಒಂದರಿಂದ ಪಾವತಿಸಬೇಕು ಎಂದು ಆಯೋಗ ಹೇಳಿದೆ.

ವೇತನದಲ್ಲಿನ ಹೆಚ್ಚಳವು 5.2 ಲಕ್ಷ ಸರ್ಕಾರಿ ನೌಕರರು ಸೇರಿದಂತೆ ರಾಜ್ಯದಲ್ಲಿನ ಅನುದಾನಿತ ಶಿಕ್ಷಣ ಸಂಸ್ಥೆಗಳ, ಸ್ಥಳೀಯ ಸಂಸ್ಥೆಗಳ ಮತ್ತು ಪದವಿ ಶಿಕ್ಷಣ ವಿದ್ಯಾಲಯ ಮತ್ತು ವಿ.ವಿ.ಗಳಲ್ಲಿನ ಸುಮಾರು 73 ಸಾವಿರ ಬೋಧಕೇತರ ಸಿಬ್ಬಂದಿಗೂ ಅನ್ವಯವಾಗುತ್ತದೆ. ಪಿಂಚಣಿ ಹೆಚ್ಚಳದಿಂದ 5.73 ಲಕ್ಷ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ವೇತನ, ಪಿಂಚಣಿ, ಭತ್ಯೆ ಇತ್ಯಾದಿ ಪರಿಷ್ಕರಣೆಯಿಂದ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ 10,508 ಕೋಟಿ ರು. ಹೆಚ್ಚುವರಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದೆ.

ಆಯೋಗದ ಅಧ್ಯಕ್ಷ ಡಾ|ಎಂ.ಆರ್.ಶ್ರೀನಿವಾಸ ಮೂರ್ತಿ ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಯೋಗದ ವರದಿಯ ಮೊದಲ ಸಂಪುಟವನ್ನು ಸಲ್ಲಿಸಿದರು. ವರದಿ ಸ್ವೀಕರಿಸಿದ ಸಿದ್ದರಾಮಯ್ಯ, ಮುಂದಿನ ಸಚಿವ ಸಂಪುಟದಲ್ಲಿ ವರದಿಯ ಶಿಫಾರಸಿನ ಬಗ್ಗೆ ಚರ್ಚಿಸಿ ಅನುಷ್ಠಾನಕ್ಕೆ ತರುವುದಾಗಿ ಹೇಳಿದರು.

ಇದೇ ವೇಳೆ, ಆಯೋಗದ ವರದಿಯ ಎರಡನೇ ಸಂಪುಟದಲ್ಲಿ ವಿವಿಧ ಇಲಾಖೆಗಳು ಮತ್ತು ಸೇವಾ ಸಂಘಗಳು, ವೈಯಕ್ತಿಕ ನೌಕರರ ವೇತನ ಶೇಣಿಗಳಲ್ಲಿನ ತಾರತಮ್ಯಗಳ ಮತ್ತು ನಿರ್ದಿಷ್ಟ ಕುಂದು ಕೊರತೆಗಳ ಬಗ್ಗೆ ಮಾಡಿರುವ ಮನವಿಯನ್ನು ಪರಿಶೀಲಿಸಲಾಗುವುದು ಎಂದು ಶ್ರೀನಿವಾಸಮೂರ್ತಿ ತಿಳಿಸಿದರು.

ವೇತನ ಪರಿಷ್ಕರಣೆ ಹೇಗೆ?: ಆಯೋಗ ಪ್ರಸ್ತಾಪಿಸಿದ ವಿಧಾನದಂತೆ 1-7-2017ರಲ್ಲಿದ್ದಂತೆ ಪ್ರತಿ ನೌಕರನ ಮೂಲ ವೇತನದಲ್ಲಿ ಶೇ.30 ರಷ್ಟು ಹೆಚ್ಚಳ ನೀಡಿ, ಆ ದಿನಾಂಕದಿಂದ ಪಾವತಿಸಲಾಗುವ ಶೇ.45.25ರ ತುಟ್ಟಿಭತ್ಯೆಯನ್ನು ವಿಲೀನಗೊಳಿಸಿ ನೌಕರರ ವೇತನ ಪರಿಷ್ಕರಣೆ ಮಾಡಲಾಗುವುದು.

click me!