ಮೋದಿ ದಮ್ಮಿದ್ದರೆ ನನ್ನ ಜತೆ 20 ನಿಮಿಷ ಚರ್ಚೆ ಮಾಡಲಿ: ರಾಹುಲ್ ಗಾಂಧಿ

By Web DeskFirst Published Jan 3, 2019, 8:22 AM IST
Highlights

ಮೋದಿ ದಮ್ಮಿದ್ದರೆ ನನ್ನ ಜತೆ 20 ನಿಮಿಷ ಚರ್ಚೆ ಮಾಡಲಿ: ರಾಹುಲ್‌ ಗಾಂಧಿ ಸವಾಲು |  ಪರ್ರಿಕರ್‌ರಿಂದ ಮೋದಿ ಬ್ಲ್ಯಾಕ್‌ಮೇಲ್‌ |  ಇನ್ನೂ ಅನೇಕ ಟೇಪ್‌ಗಳು ಇವೆ
 

ನವದೆಹಲಿ (ಜ. 03):  ಪ್ರಧಾನಿ ನರೇಂದ್ರ ಮೋದಿ ಅವರು ದಮ್ಮಿದ್ದರೆ ರಫೇಲ್‌ ಯುದ್ಧವಿಮಾನದ ಬಗ್ಗೆ 20 ನಿಮಿಷ ಚರ್ಚೆ ಮಾಡಲಿ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸವಾಲು ಹಾಕಿದರು.

ಲೋಕಸಭೆಯಲ್ಲಿ ನಡೆದ ಚರ್ಚೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ಅವರು ಮಾಜಿ ರಕ್ಷಣಾ ಮಂತ್ರಿ ಮನೋಹರ ಪರ್ರಿಕರ್‌ ಅವರ ಮನೆಯ ಬೆಡ್‌ರೂಂನಲ್ಲಿ ಇದೆ ಎನ್ನಲಾದ ರಫೇಲ್‌ ಕಡತದ ಬಗ್ಗೆ ಮೌನ ಮುರಿಯಬೇಕು. ಪರ್ರಿಕರ್‌ ಅವರ ಮನೆಯಲ್ಲಿ ಕಡತ ಇದೆ ಎಂದು ಹೇಳಿಕೆ ನೀಡಿರುವ ಗೋವಾ ಮಂತ್ರಿ ವಿಶ್ವಜಿತ್‌ ರಾಣೆ ಅವರ ಧ್ವನಿಯುಳ್ಳ ಆಡಿಯೋ ಟೇಪ್‌ ನಿಜ. ಇಂಥ ಇನ್ನಷ್ಟುಆಡಿಯೋ ಟೇಪ್‌ಗಳು ಇರಬಹುದು’ ಎಂದು ರಾಹುಲ್‌ ಬಾಂಬ್‌ ಸಿಡಿಸಿದರು.

‘ಪರ್ರಿಕರ್‌ ಅವರು ತಮ್ಮ ಮನೆಯಲ್ಲಿ ರಫೇಲ್‌ ಕಡತ ಇಟ್ಟುಕೊಂಡು ಪ್ರಧಾನಿಯನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ’ ಎಂದೂ ರಾಹುಲ್‌ ಆರೋಪಿಸಿದರು.

‘ಜೇಟ್ಲಿ ಅವರು ಸುಳ್ಳು ಹೇಳುವಲ್ಲಿ ನಿಸ್ಸೀಮ. ಅವರು ರಫೇಲ್‌ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎಂದಿದ್ದಾರೆ. ಆದರೆ 526 ಕೋಟಿ ರು.ಗೆ ಇದ್ದ 1 ರಫೇಲ್‌ ಮೌಲ್ಯ 1600 ಕೋಟಿ ಆಗಿದೆ ಅವರೇ ಒಪ್ಪಿಕೊಂಡಿದ್ದಾರೆ. ಈ ಮೂಲಕ ದರ ಹೆಚ್ಚಳವನ್ನು ಜೇಟ್ಲಿ ಒಪ್ಪಿದಂತಾಗಿದೆ’ ಎಂದೂ ರಾಹುಲ್‌ ವಾದಿಸಿದರು.

‘ಸರ್ಕಾರ ಜೆಪಿಸಿ ತನಿಖೆಗೆ ಮುಂದಾಗದಿದ್ದರೆ ಏನಾಯಿತು? ಇಡೀ ದೇಶವೇ ಮೋದಿ ಅವರಿಂದ ಈ ಬಗ್ಗೆ ಉತ್ತರ ಬಯಸಲಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಫೇಲ್‌ ವ್ಯವಹಾರದ ತನಿಖೆ ನಡೆಸುತ್ತೇವೆ’ ಎಂದು ಅವರು ಹೇಳಿದರು.
 

click me!