
ಉಧಂಪುರ: ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಮಿಶನ್‌ಗೆ ಸಾಕಷ್ಟು ಸೆಲೆಬ್ರಿಟಿಗಳು ಬೆಂಬಲಿಸಿ ಪ್ರಚಾರ ಪಡೆದಿದ್ದರು. ಆದರೆ, ಇಲ್ಲೊಬ್ಬಳು 14 ವರ್ಷದ ಹುಡುಗಿ ಮಿಶನ್‌ಗೆ ಪೂರಕವಾಗಿ, ತನ್ನ ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಒತ್ತಾಯಿಸಿ ಉಪವಾಸ ಪ್ರತಿಭಟನೆ ಮಾಡಿ, ಕಾರ್ಯ ಸಾಧಿಸಿಕೊಂಡಿದ್ದಾಳೆ. ಅದಕ್ಕಾಗಿ ಇದೀಗ ಸ್ವತಃ ಕೇಂದ್ರ ಸಚಿವರೇ ಆಕೆಯಲ್ಲಿಗೆ ತೆರಳಿ ಆಕೆಯನ್ನು ಅಭಿನಂದಿಸಿದ್ದಾರೆ. ಸಚಿವ ಜಿತೇಂದ್ರ ಸಿಂಗ್ ಆಕೆಯನ್ನು ‘ಮಕ್ಕಳ ಐಕಾನ್’ ಎಂದು ಬಣ್ಣಿಸಿದ್ದಾರೆ.
ಜಮ್ಮು-ಕಾಶ್ಮೀರದ ಉಧಂಪುರ ಜಿಲ್ಲೆ ಯ ಕುದ್‌ಬಸ್ತಿಯ 10ನೇ ತರಗತಿ ವಿದ್ಯಾರ್ಥಿನಿ ನಿಶಾ ಕುಮಾರಿ, ತನ್ನ ಮನೆಯಲ್ಲಿ ಶೌಚಾಲಯ ಕಟ್ಟುವಂತೆ ಕುಟುಂಬಿಕರು ಮತ್ತು ಆಡಳಿತವನ್ನು ಒತ್ತಾಯಿಸಿ ಮಾ.14 ರಂದು ಉಪವಾಸ ಪ್ರತಿಭಟನೆ ನಡೆಸಿದ್ದಳು.
ಬಯಲು ಶೌಚಮುಕ್ತ ಪ್ರದೇಶ ಮತ್ತು ಶೌಚಾಲಯಗಳ ಬಳಕೆ ಕುರಿತು ತನ್ನ ಶಾಲೆಯ ಚರ್ಚೆಯೊಂದರಲ್ಲಿ ತಿಳಿದು ಕೊಂಡ ಬಳಿಕ ನಿಶಾ ಪ್ರತಿಭಟನೆ ನಡೆಸಿದ್ದಳು. ಆಕೆಯ ಪ್ರತಿಭಟನೆಯಿಂದ ಪ್ರೇರಿತರಾಗಿ ಕುದ್ ಪ್ರೌಢಶಾಲೆಯ ಇತರ 35 ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲೂ ಇಂತ ಹುದೇ ಪ್ರತಿಭಟನೆ ನಡೆಸಿದ್ದರು.
ನಿಶಾ ಎರಡು ದಿನ ಊಟ ಮಾಡಿರಲಿಲ್ಲ. ಅಷ್ಟರಲ್ಲಿ, ಸರ್ಕಾರದ ಕಡೆಯಿಂದ ಬ್ಲಾಕ್ ವೈದ್ಯಕೀಯ ಅಧಿಕಾರಿಯನ್ನು ನೇಮಿಸಿ, ಸ್ವಚ್ಛ ಭಾರತ ಮಿಶನ್ ಯೋಜನೆಯಡಿ ಶೌಚಾಲಯ ನಿರ್ಮಾಣದ ಉಸ್ತುವಾರಿ ವಹಿಸಲಾಗಿತ್ತು. ಒಂದೇ ವಾರದಲ್ಲಿ ನಿಶಾ ಮಾತ್ರವಲ್ಲ, ಆಕೆಯ ರೀತಿ ಪ್ರತಿಭಟನೆ ನಡೆ ಸಿದ ಎಲ್ಲ ಮಕ್ಕಳ ಮನೆಗಳು ಸೇರಿದಂತೆ 558 ಮನೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ಆರಂಭವಾಯಿತು. ನಿಶಾ ಹೋರಾಟವನ್ನು ಮೆಚ್ಚಿ ಸಚಿವ ಸಿಂಗ್ ಉಧಂಪುರ ಜಿಲ್ಲಾ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅಭಿನಂದಿಸಿದರು. ಸ್ಮರಣಿಕೆ ಮತ್ತು ಪಠ್ಯ ಪುಸ್ತಕಗಳ ಬ್ಯಾಗ್ ನೀಡಿ ಗೌರವಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.