
ಬೆಂಗಳೂರು(ಜೂ.18): ಇನ್ನೂ ನಿಲ್ದಾಣಕ್ಕೆ ಬಸ್ ಬಂದಿಲ್ಲ. ಎಷ್ಟೊತ್ತಿಗೆ ಈ ಬಸ್ ಹೊರಡುತ್ತದೋ, ಈಗ ಬಸ್ ಯಾವ ಮಾರ್ಗದಲ್ಲಿ ಬರುತ್ತಿದೆಯೋ... ಇದು ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರ ಮನಸಿನಲ್ಲಿ ಸಾಮಾನ್ಯವಾಗಿ ಕಾಡುವ ಪ್ರಶ್ನೆ. ಈ ಎಲ್ಲಾ ಪ್ರಶ್ನೆಗಳಿಗೂ ನಿಲ್ದಾಣದಲ್ಲೇ ಉತ್ತರ ನೀಡುವ ವ್ಯವಸ್ಥೆ ‘ವಿಟಿಎಂಎಸ್-ಪಿಐಎಸ್' (ವೆಹಿಕಲ್ ಟ್ರಾಕಿಂಗ್ ಮಾನಿಟರಿಂಗ್ ಸಿಸ್ಟಂ ಹಾಗೂ ಪ್ಯಾಸೆಂಜರ್ ಇನ್ಫರ್ಮೇಷನ್ ಸಿಸ್ಟಂ) ಇನ್ನು ರಾಜ್ಯಾದ್ಯಂತ ಜಾರಿಗೆ ಬರಲಿದೆ.
ಬೆಂಗಳೂರು ಸೇರಿದಂತೆ ಕೇಂದ್ರೀಯ ವಿಭಾಗದಲ್ಲಿ ಈಗಾಗಲೇ ಜಾರಿಯಲ್ಲಿರುವ ಈ ವ್ಯವಸ್ಥೆಯನ್ನು ಈಶಾನ್ಯ ಮತ್ತು ವಾಯವ್ಯ ನಿಗಮಗಳಿಗೂ ವಿಸ್ತರಿಸಲು ಕೆಎಸ್ಸಾರ್ಟಿಸಿ ಸಿದ್ಧತೆ ನಡೆಸಿದೆ. ಬಸ್ ನಿಲ್ದಾಣಗಳಲ್ಲಿ ಮಾಹಿತಿ ಫಲಕ ಅಳವಡಿಸಿ, ಪ್ರಯಾಣಿಕರಿಗೆ ಬಸ್‌ಗಳು ನಿಲ್ದಾಣ ಪ್ರವೇಶಿಸುವ ಹಾಗೂ ನಿರ್ಗಮಿಸುವ ಮಾಹಿತಿ ನೀಡುವುದು, ತಂತ್ರಜ್ಞಾನ ಆಧಾರ ದಿಂದ ಬಸ್ ಸಂಚರಿಸುತ್ತಿರುವ ಮಾರ್ಗದ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಬಸ್ ಮೇಲೆ ನಿಗಾವಹಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಯೋಜನೆ ಆರಂಭದ ಮೊದಲ ಹಂತವಾಗಿ ಕೆಎಸ್‌ಆರ್‌ಟಿಸಿಯು ಕೇಂದ್ರೀಯ ವಿಭಾಗದ 2 ಸಾವಿರ ಬಸ್‌ಗಳು ಹಾಗೂ 35 ಪ್ರಮುಖ ಬಸ್ ನಿಲ್ದಾಣಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿತ್ತು. ಯೋಜನೆಯ ಯಶಸ್ಸಿನ ಹಿನ್ನೆಲೆಯಲ್ಲಿ ಈಶಾನ್ಯ ಮತ್ತು ವಾಯವ್ಯ ನಿಗಮಕ್ಕೂ ವಿಸ್ತರಿಸಲು ನಿರ್ಧರಿಸಿದ್ದು, ಟೆಂಡರ್ ಪ್ರಕ್ರಿಯೆ ನಡೆಸಲು ಸಿದ್ಧತೆ ಆರಂಭಿಸಿದೆ.
ಈ ವ್ಯವಸ್ಥೆಯನ್ನು ಕೇಂದ್ರೀಯ ವಿಭಾಗದ ವ್ಯಾಪ್ತಿಗೆ ಒಳಪಡುವ ರಾಮನಗರ, ಮೈಸೂರು ಗ್ರಾಮಾಂತರ, ಮಂಗಳೂರು ಹಾಗೂ ಪುತ್ತೂರು ವಿಭಾಗದ ಬಸ್ ಘಟಕಗಳ ವೇಗದೂತ ಹಾಗೂ ಮೇಲ್ಪಟ್ಟವರ್ಗದ 2 ಸಾವಿರ ಬಸ್‌ಗಳು ಹಾಗೂ 35 ಪ್ರಮುಖ ಬಸ್ ನಿಲ್ದಾಣಗಳಲ್ಲಿ ಯೋಜನೆ ಅನುಷ್ಠಾನ ಗೊಳಿಸಲಾಗಿತ್ತು. ವಿಕಾಸಸೌಧದಲ್ಲಿ ಯೋಜನೆಯ ಕೇಂದ್ರೀಕೃತ ಡಾಟಾ ಸೆಂಟರ್ (ಎಸ್‌ಡಿಸಿ) ಹಾಗೂ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಕೇಂದ್ರ ನಿಯಂತ್ರಣಾ ಕೊಠಡಿ (ಸಿಸಿಎಸ್) ಸ್ಥಾಪಿಸಲಾಗಿತ್ತು.
ಇದೀಗ ಕೆಎಸ್‌ಆರ್‌ಟಿಸಿಯ ಉಳಿದ ಬಸ್‌ಗಳು ಸೇರಿದಂತೆ ಈಶಾನ್ಯ ಮತ್ತು ವಾಯವ್ಯ ನಿಗಮಗಳ ಸುಮಾರು 17 ಸಾವಿರ ಬಸ್‌ಗಳು ಹಾಗೂ ಮೂರು ನಿಗಮಗಳ ಪ್ರಮುಖ ಬಸ್ ನಿಲ್ದಾಣಗಳಿಗೆ ಯೋಜನೆ ವಿಸ್ತರಣೆಯಾಗ ಲಿದೆ. ಈ ಸಂಬಂಧ 3 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಚರ್ಚಿಸಿದ್ದು, ಟೆಂಡರ್ ಆಹ್ವಾನದ ಅಂತಿಮ ತಯಾರಿಯಲ್ಲಿದ್ದಾರೆ.
ಪ್ರಮುಖ ಪ್ರಯೋಜನ: ಪ್ರಯಾಣಿ ಕರಿಗೆ ಎಸ್‌ಎಂಎಸ್ ಹಾಗೂ ಮಾಹಿತಿ ಫಲಕಗಳ ಮೂಲಕ ಬಸ್‌ಗಳು ನಿಲ್ದಾಣ ಪ್ರವೇಶಿಸುವ ಮತ್ತು ನಿರ್ಗಮಿಸುವ ವೇಳೆ ಮತ್ತು ವಾಹನಗಳಲ್ಲಿ ಲಭ್ಯವಿರುವ ಆಸನಗಳ ಬಗ್ಗೆ ಅವರ ಮೊಬೈಲ್ ಹಾಗೂ ಇಂಟರ್ನೆಟ್‌ನಲ್ಲಿ ಮಾಹಿತಿ ಸಿಗಲಿದೆ.
-ಮೋಹನ್ ಹಂಡ್ರಂಗಿ, ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.