
ರಾಜಧಾನಿ ಬೆಂಗಳೂರಿನಲ್ಲಿರುವ ಕೊಳಗೇರಿ ನಿವಾಸಿಗ ಳಿಗೆ ಸಿಹಿ ಸುದ್ದಿ. ಕೊಳಗೇರಿ ನಿವಾಸಿಗಳಿಗೆ ಉಚಿತ ನೀರು ಹಾಗೂ ಅಲ್ಲಿನ ನಿವಾಸಿಗಳ ನೀರಿನ ಬಾಕಿ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ.
ತನ್ಮೂಲಕ ದೆಹಲಿ ಚುನಾವಣೆ ವೇಳೆ ಜನಮನ ಗೆಲ್ಲಲು ಆಮ್ ಆದ್ಮಿ ಪಕ್ಷ ಪ್ರಯೋಗಿಸಿದ ಉಚಿತ ನೀರು ಹಾಗೂ ಉಚಿತ ವಿದ್ಯುತ್ ತಂತ್ರವನ್ನು ರಾಜ್ಯದಲ್ಲೂ ಪ್ರಯೋಗಿಸಲು ಸರ್ಕಾರ ಮುಂದಾಗಿದೆ. ಈ ಬಾರಿಯ ಬಜೆಟ್ ಮಂಡನೆ ವೇಳೆ ಕಂತು ಗಳಲ್ಲಿ ಜನಪ್ರಿಯ ಯೋಜನೆಗಳು ಬರಲಿವೆ ಎಂಬ ಸೂಚನೆಯನ್ನು ನೀಡಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಈ ಉಚಿತ ನೀರು ತಂತ್ರದ ಮೂಲಕ ಮತಬೇಟೆ-2ಗೆ ಮುಂದಾದಂತಾಗಿದೆ.
ಬೆಂಗಳೂರು ನಗರಕ್ಕೆ ಸಂಬಂಧಿಸಿದ ಯೋಜನೆಗಳ ಬಗ್ಗೆ ಚರ್ಚಿಸಲು ಮಂಗಳವಾರ ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಘೋಷಣೆ ಮಾಡಿದರು.
ಅದರಂತೆ, ಕೊಳಗೇರಿ ನಿವಾಸಿಗಳಿಗೆ ಪ್ರತಿ ಮನೆಗೆ ತಿಂಗಳಿಗೆ 10 ಸಾವಿರ ಲೀಟರ್ ನೀರನ್ನು ಉಚಿತವಾಗಿ ಪೂರೈಸಲಾಗುತ್ತದೆ. ಅವರು ಅನೇಕ ವರ್ಷಗಳಿಂದ ಉಳಿಸಿಕೊಂಡಿರುವ ಸುಮಾರು 24 ಕೋಟಿಗೂ ಹೆಚ್ಚಿನ ಬಾಕಿ ಮನ್ನಾ ಆಗಲಿದೆ.
ಸರ್ಕಾರ ಬಜೆಟ್‌ನಲ್ಲಿ ಭರವಸೆ ನೀಡಿದಂತೆ ನಡೆದುಕೊಳ್ಳು ತ್ತಿದೆ. ಸ್ಲಂಗಳಲ್ಲಿ ಜನರ ಕಷ್ಟಕ್ಕೆ ಸ್ಪಂದಿಸಿ ಉಚಿತ ನೀರು ಒದಗಿಸಲಾಗುತ್ತದೆ. ಹಾಗೆಯೇ ಅವರ ಬಿಲ್ ಬಾಕಿ ಮನ್ನಾ ಮಾಡುತ್ತೇನೆ. ಆದರೆ ಇದೆಲ್ಲವೂ ಸಚಿವ ಸಂಪುಟದಲ್ಲಿ ಚರ್ಚೆ ಆಗಬೇಕಿದೆ. ಆನಂತರ ಜಾರಿಗೆ ಬರುತ್ತದೆ ಎಂದರು.
ತಿಂಗಳಿಗೆ 1 ಕೋಟಿ ವೆಚ್ಚ: ಬೆಂಗಳೂರಿನಲ್ಲಿ 362 ಕೊಳಗೇರಿಗಳಿದ್ದು, ಅವುಗಳಲ್ಲಿ ಜಲಮಂಡಳಿಯ 69,000 ನೀರಿನ ಸಂಪರ್ಕಗಳಿವೆ. ಇದರ ಮೂಲಕ ನೀರು ಪಡೆಯುತ್ತಿರುವ ನಿವಾಸಿಗಳು ಕಳೆದ ಹತ್ತು ವರ್ಷಗಳಿಂದ ಬಿಲ್ ಪಾವತಿಸದೆ ಸುಮಾರು 24 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ಇದರ ಬಡ್ಡಿ ಕೂಡ 5 ಕೋಟಿಗಳಷ್ಟಿದೆ. ಇದನ್ನು ವಸೂಲಿ ಮಾಡುವಲ್ಲಿ ಜಲಮಂಡಳಿ ಅಧಿಕಾರಿಗಳು ವಿಫಲವಾಗಿರುವ ಹಿನ್ನೆಲೆಯಲ್ಲಿ ಇದನ್ನು ಮನ್ನಾ ಮಾಡಿದರೆ ಹೇಗೆ ಎನ್ನುವ ಪ್ರಸ್ತಾಪವನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದನ್ನಾಧರಿಸಿ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಬಾಕಿ ಮನ್ನಾ ಮಾಡುವ ಘೋಷಣೆ ಮಾಡಿತ್ತು. ಅದರಂತೆ ಕೊಳಗೇರಿಗಳ ನೀರಿನ ಬಿಲ್ ಬಾಕಿ ಮನ್ನಾಗಿ ನಿರ್ಧರಿಸಲಾಗಿದೆ. ಆದರೆ ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಬೇಕಿದೆ. ಇನ್ನು ಹಿಂದಿನ ಬಾಕಿಯನ್ನೇ ಪಾವತಿಸದವರಿಗೆ ಹೊಸ ದರ ನಿಗದಿ ಮಾಡುವುದು ಕಷ್ಟಎಂದು ಅವರಿಗೆ ಪ್ರತಿ ಕುಟುಂಬಕ್ಕೆ ತಿಂಗಳಿಗೆ 10,000 ಲೀಟರ್ ನೀರು ಒದಗಿಸಲು ನಿರ್ಧರಿಸಲಾಗಿದೆ. ಇದರಿಂದ ಜಲಮಂಡಳಿಗೆ ತಿಂಗಳಿಗೆ 1 ಕೋಟಿ ಹೊರೆಯಾಗಲಿದೆ. ಇದನ್ನು ಸರ್ಕಾರ ಅನುದಾನದ ರೂಪದಲ್ಲಿ ಮರು ಪಾವತಿ ಮಾಡಿಕೊಡಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಆ.15ರಂದು ಇಂದಿರಾ ಕ್ಯಾಂಟೀನ್'ಗೆ ಚಾಲನೆ:
ರಾಜಧಾನಿಯ 198 ವಾರ್ಡ್‌ಗಳಲ್ಲಿ ಏಕಕಾಲಕ್ಕೆ ಬಡವರಿಗೆ ಕಡಿಮೆ ದರದಲ್ಲಿ ಆಹಾರ ಪೂರೈಸುವ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗೆ ಆಗಸ್ಟ್ 15ರಿಂದ ಚಾಲನೆ ದೊರೆಯಲಿದೆ.
ಈ ಕುರಿತ ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯೋಜನೆಗೆ ಪೂರ್ವ ಭಾವಿ ಸಿದ್ಧತೆ ನಡೆಸಲಾಗಿದೆ. 198 ವಾರ್ಡಲ್ಲಿ ಈತನಕ 242 ಜಾಗಳನ್ನು ಗುರುತಿಸಲಾಗಿದೆ. ಇನ್ನು 3 ತಿಂಗಳಲ್ಲಿ ಯೋಜನೆ ಆರಂಭಿಸಲು ಸಿದ್ಧತೆ ನಡೆಸಲಾಗಿದ್ದು, ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ದಿನ ಎಲ್ಲಾ 198 ವಾರ್ಡ್‌ಗಳಲ್ಲಿ ಒಂದೊಂದು ಕ್ಯಾಂಟೀನ್ ಆರಂಭವಾಗಬೇಕು. ಅಂದಿನಿಂದ ನಗರದ ಜನತೆಗೆ ರಿಯಾಯಿತಿ ದರದಲ್ಲಿ ಆಹಾರ ಸಿಗುವಂತೆ ಮಾಡಬೇಕು ಎಂದು ಸೂಚಿಸಲಾಗಿದೆ ಎಂದು ವಿವರಿಸಿದರು.
ಕ್ಯಾಂಟೀನ್ ಕಟ್ಟಡ ವಿನ್ಯಾಸಕ್ಕೆ 177 ಜನರು ಮಾದರಿಗಳನ್ನು ಕಳುಹಿಸಿದ್ದಾರೆ. ಇದೆಲ್ಲವನ್ನೂ ಕ್ರೋಡೀಕರಿಸಿ ಯೋಜನೆ ಅಂತಿಮಗೊಳಿಸಲು ಒಂದು ಸಮಿತಿ ರಚಿಸಲಾಗಿದೆ. ಅದಕ್ಕೆ ಸಚಿವ ಜಾಜ್‌ರ್ ಅಧ್ಯಕ್ಷರಾಗಿರುತ್ತಾರೆ. ಸಚಿವ ಖಾದರ್, ಮೇಯರ್, ಆಯುಕ್ತ, ನಗರಾಭಿವೃದ್ಧಿ ಕಾರ್ಯದರ್ಶಿ ಇರುತ್ತಾರೆ. ಇವರು ತಮಿಳುನಾಡಿನಲ್ಲಿ ಊಟ, ತಿಂಡಿ ವ್ಯವಸ್ಥೆ ಹೇಗಿದೆ ಎಂದು ನೋಡಿಕೊಂಡು ಬಂದು ಇನ್ನೊಂದು ತಿಂಗಳಲ್ಲಿ ಎಲ್ಲಾ ಸಿದ್ಧತೆಗಳನ್ನು ಪೂರೈಸಬೇಕು ಎಂದು ಸೂಚಿಸಲಾಗಿದೆ ಎಂದರು. ಇಂದಿರಾ ಕ್ಯಾಂಟೀನ್ ಆರಂಭಿಸಲು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ ಬೆಂಗಳೂರಿನ 198 ವಾರ್ಡ್‌ಗಳಲ್ಲೂ ಕ್ಯಾಂಟೀನ್ ತೆರೆಯಲಾಗುತ್ತದೆ. ಇಂದಿರಾ ಕ್ಯಾಂಟೀನ್‌ಗಳಲ್ಲಿ 5ಗೆ ಬೆಳಗಿನ ಉಪಾ ಹಾರ, 10ಕ್ಕೆ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡ ಲಾಗುತ್ತದೆ. ಯಾವೆಲ್ಲಾ ತಿಂಡಿಗಳನ್ನು ನೀಡಬೇಕೆಂದು ಮೆನು ಸಿದ್ಧಪಡಿಸಲಾಗುತ್ತಿದೆ. ಆಹಾರ ಗುಣಮಟ್ಟದಲ್ಲಿ ಯಾವುದೇ ರಾಜಿ ಇರುವುದಿಲ್ಲ ಎಂದು ಹೇಳಿದರು. ಬಿಬಿಎಂಪಿ ಈಗಾಗಲೇ ನಗರದಲ್ಲಿ ಪೌರಕಾರ್ಮಿ ಕರಿಗೆ ಬಿಸಿ ಊಟ ಸೌಲಭ್ಯ ಒದಗಿಸುತ್ತಿರುವುದರಿಂದ ಇದನ್ನು ಅವರೇ ನಡೆಸುವಂತಾಗಬೇಕೆಂದು ಹೇಳಲಾ ಗಿದೆ. ಒಟ್ಟಾರೆ ಎಲ್ಲಾ ವಾರ್ಡ್‌ಗಳಲ್ಲೂ ಬಿಬಿಎಂಪಿಯೇ ಕ್ಯಾಂಟೀನ್‌ಗಳನ್ನು ನಡೆಸುವಂತೆ ಮಾಡಲಾಗುವುದು. ಇದಕ್ಕಾಗಿ ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಟೆಂಡರ್‌ನಲ್ಲಿ ಭಾಗವಹಿಸಲು ಎಲ್ಲರಿಗೂ ಅವಕಾಶ ನೀಡಲಾಗುತ್ತಿದೆ. ಏಕೆಂದರೆ ಬರುವ ಸಂಸ್ಥೆಗಳ ನಡುವೆ ಪೈಪೋಟಿ ಇರಬೇಕು. ಆಹಾರ ಗುಣಮಟ್ಟಚೆನ್ನಾಗಿಬೇಕು ಎಂದು ಕ್ರಮ ಕೈಗೊಳ್ಳಲಾಗುತ್ತಿದೆ. ಒಂದೇ ರೀತಿಯ ರುಚಿ, ಆಹಾರಗಳನ್ನು ತಡೆಯಲು ಎಚ್ಚರ ವಹಿಸುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು. ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾಜ್‌ರ್, ಆಹಾರ ಸಚಿವ ಯು.ಟಿ.ಖಾದರ್, ಆಯುಕ್ತ ಮಂಜುನಾಥ ಪ್ರಸಾದ್, ಮೇಯರ್ ಪದ್ಮಾವತಿ, ಉಪ ಮೇಯರ್ ಆನಂದ್ ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.