ಕೇಂದ್ರ-ರಾಜ್ಯ ತಿಕ್ಕಾಟ; ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗಕ್ಕೆ ಸಂಕಟ; ಪುಕ್ಕಟೆ ಭೂಮಿ ಸಿಕ್ಕರೂ ರೈಲ್ವೆಗೆ ಬೇಕಂತೆ 1,850 ಕೋಟಿ

By Suvarna Web DeskFirst Published Apr 25, 2017, 10:10 PM IST
Highlights

ಉತ್ತರ ಕರ್ನಾಟಕವನ್ನು ಕರಾವಳಿ ಕರ್ನಾಟಕದೊಂದಿಗೆ ಸಂಪರ್ಕ ಕಲ್ಪಿಸುವ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಬಹು ದಿನದ ಕನಸಾಗಿತ್ತು. ಬಳ್ಳಾರಿ-ಹೊಸಪೇಟೆಯಿಂದ ಕಬ್ಬಿಣದ ಅದಿರು ಸಾಗಿಸುವ ಉದ್ದೇಶದಿಂದ 965 ಹೆಕ್ಟರ್‌ ಅರಣ್ಯ ಪ್ರದೇಶದಲ್ಲಿ 168 ಕಿ.ಮೀ ಉದ್ದದ ಸಂಪರ್ಕ ಮಾರ್ಗ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಮತ್ತು ರೈಲು ಇಲಾಖೆ ಜಂಟಿಯಾಗಿ ರೂಪಿಸಿದ್ದ ಯೋಜನೆಗೆ  2000ರಲ್ಲಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ  ಅಡಿಗಲ್ಲು ಹಾಕಿದ್ದರು.

ಬೆಂಗಳೂರು(ಏ. 26): ಆದ್ಯತೆಯ ಯೋಜನೆಗಳಲ್ಲಿ ಒಂದಾದ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಯೋಜನೆ ಅನುಷ್ಠಾನಕ್ಕೆ ಮತ್ತಷ್ಟು ತೊಡಕುಗಳು ಎದುರಾಗಿವೆ. ರಾಜ್ಯ ಸರ್ಕಾರ ಈ ಯೋಜನೆಗೆ ಅರಣ್ಯ ಪ್ರದೇಶ ಮತ್ತು ಖಾಸಗಿ ಭೂಮಿಯನ್ನು ಪುಕ್ಕಟೆಯಾಗಿ ನೀಡಿದ್ದರೂ ಯೋಜನೆಯ ಒಟ್ಟು ಮೊತ್ತದಲ್ಲಿ ಅರ್ಧದಷ್ಟು ಮೊತ್ತವನ್ನು ಭರಿಸಬೇಕು ಎಂದು ಕೇಂದ್ರ ರೈಲ್ವೆ ಸಚಿವಾಲಯ ಇರಿಸಿರುವ ಬೇಡಿಕೆ, ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಿಮಿಸಿದೆ.

ಈ ರೈಲು ಮಾರ್ಗಕ್ಕೆ ಸಂಬಂಧಿಸಿದ ಒಟ್ಟು ವೆಚ್ಚ ಪರಿಷ್ಕೃತಗೊಂಡಿದ್ದು, 483 ಕೋಟಿ ರೂ.ಗಳಿಂದ 3,700 ಕೋಟಿ ರೂ.ಗಳಿಗೇರಿತ್ತು. ಕೇಂದ್ರ ರೈಲ್ವೆ ಸಚಿವಾಲಯ ಈಗ ಇರಿಸಿರುವ ಬೇಡಿಕೆ ಪ್ರಕಾರ ಒಟ್ಟು 1,850 ಕೋಟಿ ರೂಪಾಯಿಯನ್ನು ಭರಿಸಬೇಕಿದೆ. ಕೇಂದ್ರ ರೈಲ್ವೆ ಸಚಿವಾಲಯ ಇರಿಸಿರುವ ಬೇಡಿಕೆ ಈಡೇರಿಸಲು ಹೊರಟಲ್ಲಿ ಮತ್ತಷ್ಟು ಆರ್ಥಿಕ ಹೊರೆಯಾಗಲಿದೆ. ಈಗಾಗಲೇ ಬರ ಪರಿಹಾರ ಕಾಮಗಾರಿಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿರುವ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೀಡಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಯೋಜನೆಗೆ ಒಟ್ಟು 996 ಹೆಕ್ಟೇರ್​ ಪ್ರದೇಶ ಗುರುತಿಸಿದ್ದು, ಇದರಲ್ಲಿ 258 ಹೆಕ್ಟೇರ್​ ವಿಸ್ತೀರ್ಣದ ಪ್ರದೇಶ ಲಭ್ಯವಾಗಿದೆ. ಬಾಕಿ 738 ಹೆಕ್ಟೇರ್​ ಪೈಕಿ  587 ಹೆಕ್ಟೇರ್​​ ವಿಸ್ತಿರ್ಣದ ಅರಣ್ಯ, 142 ಹೆಕ್ಟೇರ್​​ ವಿಸ್ತೀರ್ಣದ  ಖಾಸಗಿ ಪ್ರದೇಶವಿದೆ. ಯೋಜನೆಗೆ ಗುರುತಿಸಲಾಗಿರುವ ಭೂಮಿಯನ್ನು ರಾಜ್ಯ ಸರ್ಕಾರ ಪುಕ್ಕಟೆಯಾಗಿ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ನೀಡಿದೆ.

ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ಅತ್ಯಂತ ಮಹತ್ವದಿಂದ ಕೂಡಿದೆ. ಕಲ್ಲಿದ್ದಲು ಸಾಗಣೆ ಸೇರಿದಂತೆ ಇನ್ನಿತರೆ ಕಾರಣಗಳಿಗಾಗಿ ಈ ಯೋಜನೆ ಅತೀ ಅವಶ್ಯಕ. ಕೈಗಾ ನ್ಯೂಕ್ಲಿಯರ್​ ಪ್ರಾಜೆಕ್ಟ್​, ನ್ಯಾಷನಲ್​ ಥರ್ಮಲ್​ ಪವರ್​ ಪ್ಲಾಂಟ್​, ಬಂದರುಗಳು, ಕೈಗಾರಿಕೆಗಳ ಉನ್ನತೀಕರಣಕ್ಕಾಗಿ ಈ ರೈಲು ಮಾರ್ಗ ಪೂರ್ಣಗೊಳ್ಳಬೇಕಿತ್ತು. 

ಅಷ್ಟೇ ಅಲ್ಲ, ಧಾರವಾಡ, ಬೆಳಗಾವಿ, ಹಾವೇರಿ, ಬಳ್ಳಾರಿ, ಕಲ್ಬುರ್ಗಿ, ಗದಗ್​, ಕೊಪ್ಪಳ, ಬಾಗಲಕೋಟೆ, ಕಾರವಾರ, ಬೇಲೇಕೇರಿ, ಹೊನ್ನಾವರ ಬಂದರಿಗೆ ಅನಕೂಲ ಆಗುತ್ತೆ. ಇನ್ನು, ಮರ್ಮಾಗೋವಾಕ್ಕೆ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಸಂಪರ್ಕ ಕೊಂಡಿಯೂ ಹೌದು.

ಉತ್ತರ ಕರ್ನಾಟಕವನ್ನು ಕರಾವಳಿ ಕರ್ನಾಟಕದೊಂದಿಗೆ ಸಂಪರ್ಕ ಕಲ್ಪಿಸುವ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗ ಬಹು ದಿನದ ಕನಸಾಗಿತ್ತು. ಬಳ್ಳಾರಿ-ಹೊಸಪೇಟೆಯಿಂದ ಕಬ್ಬಿಣದ ಅದಿರು ಸಾಗಿಸುವ ಉದ್ದೇಶದಿಂದ 965 ಹೆಕ್ಟರ್‌ ಅರಣ್ಯ ಪ್ರದೇಶದಲ್ಲಿ 168 ಕಿ.ಮೀ ಉದ್ದದ ಸಂಪರ್ಕ ಮಾರ್ಗ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಮತ್ತು ರೈಲು ಇಲಾಖೆ ಜಂಟಿಯಾಗಿ ರೂಪಿಸಿದ್ದ ಯೋಜನೆಗೆ  2000ರಲ್ಲಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ  ಅಡಿಗಲ್ಲು ಹಾಕಿದ್ದರು.

ಯೋಜನೆಯ ಟೈಮ್'ಲೈನ್:

1995-96: ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ನಿರ್ಮಾಣ ಯೋಜನೆ ಸಿದ್ಧ

2002: ಯೋಜನೆಗೆ ಕರ್ನಾಟಕ ಅರಣ್ಯ ಇಲಾಖೆ ವಿರೋಧ

2003: ಪಶ್ಚಿಮ ಘಟ್ಟದ ಅರಣ್ಯ ಮತ್ತು ಭೂಪ್ರದೇಶ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಪೂರಕವಾಗಿಲ್ಲ ಎಂದು ಅರಣ್ಯ ಇಲಾಖೆ ತಕರಾರು

2004: ಪಶ್ಚಿಮ ಘಟ್ಟಗಳಲ್ಲಿ ರೈಲು ಮಾರ್ಗ ನಿರ್ಮಾಣ ಯೋಜನೆ ‘ಒಂದು ದುರಂತ’ ಎಂದಿದ್ದ ಕೇಂದ್ರ ಪರಿಸರ ಸಚಿವಾಲಯ

2005: ಯೋಜನೆಯಲ್ಲಿ ಮಾರ್ಪಾಡು. ಯೋಜನೆಗೆ ಬೇಕಾದ ಪ್ರದೇಶವನ್ನು 965 ಹೆಕ್ಟರ್‌ನಿಂದ 720 ಹೆಕ್ಟರ್‌ಗೆ ಇಳಿಕೆ ರೈಲ್ವೆ

2006: ಅರಣ್ಯೇತರ ಪ್ರದೇಶದಲ್ಲಿ ಮುಂದುವರೆದ 40 ಕಿ.ಮೀ ರೈಲು ಹಳಿ ನಿರ್ಮಾಣ ಕಾಮಗಾರಿ

2012: ರೈಲುಮಾರ್ಗ ಪಶ್ಚಿಮ ಘಟ್ಟದ ಆನೆ, ಹುಲಿ ಕಾರಿಡಾರ್ ಮೂಲಕ ಹಾಯ್ದು ಹೋಗಲಿದೆ ಎಂದು ವರದಿ ಐಐಎಸ್‌ಸಿಯಿಂದ ವರದಿ

2006-2013: ಹಂತ, ಹಂತವಾಗಿ ಯೋಜನೆ ಅನುಷ್ಠಾನ ಮಾಡುವುದಾಗಿ ಪ್ರಕಟ

2015: ಪಶ್ಚಿಮ ಘಟ್ಟದ ಮೂಲಕ ರೈಲು ಮಾರ್ಗ ನಿರ್ಮಾಣ ಯೋಜನೆಗೆ ಸುಪ್ರೀಂ ಕೋರ್ಟ್‌ ಸಮಿತಿ ತಡೆ

- ಜಿ. ಮಹಾಂತೇಶ್​, ಸುವರ್ಣನ್ಯೂಸ್​

click me!