
ಬೆಂಗಳೂರು(ಏ.26):‘ಉಜ್ವಲ' ಯೋಜನೆಯಡಿ ಕೇಂದ್ರ ಸರ್ಕಾರ ಈಗಾಗಲೇ ಬಡ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡುತ್ತಿದೆ. ಆದರೆ ಕೇಂದ್ರ ಸರ್ಕಾರ ಗುರುತಿಸಿರುವ ಫಲಾನುಭವಿ ಗಳ ವ್ಯಾಪ್ತಿಗೆ ರಾಜ್ಯದ ಶೇ.60ರಷ್ಟು ಕುಟುಂಬಗಳು ಬರುತ್ತಿರಲಿಲ್ಲ. ರಾಜ್ಯದ ‘ಅನಿಲ ಭಾಗ್ಯ' ಯೋಜನೆಯಡಿ ಅವರೆಲ್ಲರಿಗೂ ಅಡುಗೆ ಅನಿಲ ಸಿಲಿಂಡರ್ ಸಿಗಲಿದೆ. ಜತೆಗೆ ಕೇಂದ್ರ, ರಾಜ್ಯದ ಇಬ್ಬರೂ ಫಲಾನುಭವಿಗಳಿಗೆ ರಾಜ್ಯದ ವತಿಯಿಂದ 1000 ರು. ಬೆಲೆಯ ಸ್ಟವ್ ಉಚಿತವಾಗಿ ಲಭ್ಯವಾಗಲಿದೆ.
ರಾಜ್ಯದಲ್ಲಿನ ಅಡುಗೆ ಅನಿಲರಹಿತ ಬಡ ಕುಟುಂಬಗಳಿಗೆ ಉಚಿತ ಅನಿಲ ಸಂಪರ್ಕವನ್ನು ನೀಡುವ ‘ಅನಿಲ ಭಾಗ್ಯ' ಯೋಜನೆ ಜಾರಿ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಜತೆಗೆ ಅಡುಗೆ ಅನಿಲ ಸಂಪರ್ಕವಿದ್ದರೂ ಒಂದು ಲೀಟರ್ ಸೀಮೆಎಣ್ಣೆ ಪಡೆಯುತ್ತಿದ್ದ ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿನ) ಕುಟುಂಬಗಳು ಒಂದೊಮ್ಮೆ ಸೀಮೆಎಣ್ಣೆ ಬೇಡವೆಂದಲ್ಲಿ ಆ ಕುಟುಂಬಗಳಿಗೆ ರೀಚಾರ್ಜ್ ಮಾಡಬಲ್ಲ ರೂ.150 ಬೆಲೆ ಬಾಳುವ ಎರಡು ಎಲ್‌ಇಡಿ ಬಲ್ಪ ವಿತರಣೆ ಮಾಡುವ ‘ಪುನರ್‌ಬೆಳಕು' ಯೋಜನೆಯನ್ನೂ ಜಾರಿ ತರಲಾಗುತ್ತಿದೆ.
ಕೇಂದ್ರ ಸರ್ಕಾರದ 2011ರ ಸಾಮಾಜಿಕ ಆರ್ಥಿಕ ಜಾತಿ ಗಣತಿ ಪಟ್ಟಿಯಲ್ಲಿ ಗುರುತಿಸಿರುವ ಫಲಾನು ಭವಿಗಳಿಗೆ ಉಜ್ವಲ ಯೋಜನೆಯಡಿಯಲ್ಲಿ ಉಚಿತವಾಗಿ ಅನಿಲ ಸಂಪರ್ಕವನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಆದರೆ ಈ ಪಟ್ಟಿಯಲ್ಲಿ ರಾಜ್ಯದ ಶೇ. 60ಕ್ಕೂ ಹೆಚ್ಚು ಕುಟುಂಬಗಳ ಹೆಸರು ಬಿಟ್ಟಿದ್ದರಿಂದ ರಾಜ್ಯ ಸರ್ಕಾರವು ಈ ಕುಟುಂಬಗಳಿಗಾಗಿ ಅನಿಲಭಾಗ್ಯ ಯೋಜನೆ ಘೋಷಿಸಿತ್ತು. ಅನಿಲಭಾಗ್ಯ ಯೋಜನೆ ಯಡಿ ಫಲಾನುಭವಿಗಳು ಅನಿಲ ಸಂಪರ್ಕ ಪಡೆಯಲು .1920 ಸಹಾಯಧನ ಪಡೆಯಲಿದ್ದು, ಫಲಾನುಭವಿ ಮೊದಲು ಹಣ ಪಾವತಿಸಿ ಅನಿಲ ಸಂಪರ್ಕ ಪಡೆದ ಬಳಿಕ ಈ ಸಹಾಯಧನವನ್ನು ಫಲಾನುಭವಿ ಖಾತೆಗೆ ನೇರ ವರ್ಗಾವಣೆ ಮಾಡಲಾಗುವುದು.
ಒಂದೊಮ್ಮೆ ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಅನಿಲ ಸಂಪರ್ಕ ಪಡೆದಿದ್ದಲ್ಲಿ ಅಂತಹ ಕುಟುಂಬಗಳಿಗೆ ಇದೇ ಯೋಜನೆಯಡಿ ಎರಡು ಬರ್ನರ್(ಒಲೆ) ಇರುವ ಸ್ಟವ್ ನೀಡುವುದಾಗಿ ಸರ್ಕಾರ ಬಜೆಟ್‌ಗೂ ಮುನ್ನವೇ ಆದೇಶ ಮಾಡಿತ್ತು. ಉಜ್ವಲ ಯೋಜನೆಯಡಿಯಲ್ಲಿ ಗುರುತಿಸಿದ ಎಲ್ಲಾ ಫಲಾನುಭವಿಗಳಿಗೂ ರೂ. 1000 ಮೌಲ್ಯದ ಸ್ಟವ್ ನೀಡಲು ಇದೀಗ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ. ಸ್ಟವ್ ವಿತರಣೆಯನ್ನೂ ಅನಿಲ ಭಾಗ್ಯ ಯೋ ಜನೆಯ ಭಾಗವೆಂದು ಪರಿಗಣಿಸುವಂತೆ ಸೂಚಿಸಿದೆ. ಈ ಸ್ಟವ್‌ಗಳನ್ನು ಅನಿಲ ವಿತರಕರಿಂದಲೇ ಕಡ್ಡಾಯವಾಗಿ ಪಡೆಯುವಂತೆ ಕಳೆದ 2016 ಡಿಸೆಂಬರ್‌ನಲ್ಲಿ ಮಾಡಿದ್ದ ಆದೇಶವನ್ನು ಇದೀಗ ಹೊರಡಿಸಲಾಗಿರುವ ಆದೇಶದಲ್ಲಿ ಮಾರ್ಪಾಟು ಮಾಡಿ ಗ್ಯಾಸ್ ಸ್ಟವ್‌ಗಳನ್ನು ಗ್ರಾಮ ಪಂಚಾಯಿತಿ ಅಥವಾ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ ಆಧಾರ್ ದೃಢೀಕರಣದ ಮೇಲೆ ವಿತರಿಸಲಾಗುವುದು ಎಂದು ತಿಳಿಸಿದೆ.
ಅರ್ಜಿ ಸಲ್ಲಿಕೆ ಎಲ್ಲಿ?
ಅನಿಲ ಭಾಗ್ಯ ಯೋ ಜನೆಯಡಿಯಲ್ಲಿ ಅನಿಲ ಸಂಪರ್ಕಕ್ಕಾಗಿ ಆಹಾರ ಇಲಾಖೆ ಸಿದ್ಧಪಡಿಸಿರುವ ತಂತ್ರಾಂಶದಲ್ಲೇ ಅರ್ಜಿ ಸಲ್ಲಿಸಬೇಕು. ಇಲಾಖೆಯ ಸೇವಾ ಕೇಂದ್ರಗಳಾದ ಗ್ರಾಮ ಪಂಚಾಯಿತಿ, ಖಾಸಗಿ ಫ್ರಾಂಚೈಸಿ, ಬೆಂಗಳೂರು ಒನ್, ಕರ್ನಾಟಕ ಒನ್, ಜನಸ್ನೇಹಿ ಕೇಂದ್ರ ಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ಒಂದೊಮ್ಮೆ ಅರ್ಜಿ ಸಲ್ಲಿಸಿದ ಕುಟುಂಬಗಳ ಹೆಸರು ಕೇಂದ್ರ ಸರ್ಕಾರದ ಕೇಂದ್ರ ಸರ್ಕಾರದ ಸಾಮಾಜಿಕ, ಆರ್ಥಿಕ ಜಾತಿ ಗಣತಿ ಪಟ್ಟಿಯಲ್ಲಿ ಗುರುತಿಸಿರುವ ಫಲಾನುಭವಿಗಳ ಪಟ್ಟಿಯಲ್ಲಿ ಇದ್ದಲ್ಲಿ ಉಜ್ವಲ ಯೋಜನೆಯಡಿಯಲ್ಲಿ ಉಚಿತವಾಗಿ ಅನಿಲ ಸಂಪರ್ಕ ಒದಗಿಸಲು ಅನುವು ಮಾಡಿಕೊಡಲಾಗುವುದು. ಉಳಿದ ಕುಟುಂಬಗಳಿಗೆ ರಾಜ್ಯ ಸರ್ಕಾರದ ಅನಿಲಭಾಗ್ಯ ಯೋಜನೆಯಡಿ ಸಂಪರ್ಕ ಒದಗಿಸಲಾಗುವುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.