ಮಕ್ಕಳಾಗುವುದನ್ನು ಮುಂದೂಡಲು ಉಚಿತ ಇಂಜೆಕ್ಷನ್‌

By ಆನಂದ ಅಂಗಡಿFirst Published May 23, 2017, 12:04 PM IST
Highlights

ಕಾಂಡೋಮ್‌ ಬಳಕೆ, ಶಸ್ತ್ರ ಚಿಕಿತ್ಸೆ, ಕಾಪರ್‌-ಟಿ ಅಳವಡಿಸಿಕೊಳ್ಳುವ ಹಾಗೂ ಮಾತ್ರೆಗಳ ಸೇವನೆ ಬೇಡವೆಂದು ಬಯಸುವ ಅರ್ಹ ದಂಪತಿ ಗರ್ಭ ನಿರೋಧಕ ಚುಚ್ಚುಮದ್ದು ತೆಗೆದುಕೊಳ್ಳಬಹುದು. ಒಂದು ಬಾರಿ ‘ಅಂತರ' ಚುಚ್ಚುಮದ್ದು ಮಾಡಿಸಿಕೊಂಡರೆ ಮುಂದಿನ ಮೂರ್ನಾಲ್ಕು ತಿಂಗಳು ಅಥವಾ 12ರಿಂದ 14 ವಾರದವರೆಗೆ ಮಹಿಳೆಯರು ಗರ್ಭ ಧರಿಸುವ ಸಾಧ್ಯತೆ ಇರುವುದಿಲ್ಲ. ಈ ಅವಧಿ ಪೂರ್ಣ​ಗೊಂಡ ಆನಂತರ ಮತ್ತೆ ಆಸ್ಪತ್ರೆಗೆ ತೆರಳಿ, ಮತ್ತೊಂದು ಚುಚ್ಚುಮದ್ದು ಹಾಕಿಸಿಕೊಳ್ಳಬ​ಹುದು. ಮಕ್ಕಳು ಬೇಕೆನಿಸಿದಾಗ ಚುಚ್ಚುಮದ್ದು ತೆಗೆದುಕೊಳ್ಳುವುದನ್ನು ನಿಲ್ಲಿಸಬಹುದಾಗಿದೆ.

ಹುಬ್ಬಳ್ಳಿ (ಮೇ.23): ಮಕ್ಕಳಾಗುವುದನ್ನು ಮುಂದೂಡಲು ಅಥವಾ ಮತ್ತೊಂದು ಮಗುವಿನ ಜನನದ ಮಧ್ಯೆ ಅಂತರ ಕಾಯ್ದುಕೊಳ್ಳುವುದಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ‘ಅಂತರ' ಎಂಬ ಗರ್ಭನಿರೋಧಕ ಚುಚ್ಚುಮದ್ದನ್ನು ಜೂನ್‌ ಕೊನೆಯ ಅಥವಾ ಜುಲೈನಿಂದ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಪರಿಚಯಿಸುತ್ತಿದೆ.

2000ನೇ ಇಸವಿಯಿಂದ ಗರ್ಭ ನಿರೋಧಕ ಚುಚ್ಚುಮದ್ದು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಆದರೆ ಪ್ರತಿ ಚುಚ್ಚುಮದ್ದಿಗೆ ಕನಿಷ್ಠ .400 ನೀಡಬೇಕಿತ್ತು. ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಈ ಚುಚ್ಚುಮದ್ದು ನೀಡುವ ಯೋಜನೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಾಲನೆ ನೀಡಲು ಹೊರಟಿದೆ. ಈಗಾಗಲೇ ಜಿಲ್ಲಾ ಕೇಂದ್ರಗಳಲ್ಲಿ ತನ್ನ ಸಿಬ್ಬಂದಿಗೆ ಚುಚ್ಚುಮದ್ದು ನೀಡುವ ಕುರಿತು ತರಬೇತಿ ನೀಡುತ್ತಿರುವ ಆರೋಗ್ಯ ಇಲಾಖೆ, ಮುಂದಿನ ವರ್ಷದಿಂದ ತಾಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಗರ್ಭನಿರೋಧಕ ಚುಚ್ಚುಮದ್ದು ಪರಿಚಯಿಸಲು ತೀರ್ಮಾನಿಸಿದೆ.

ಕಾಂಡೋಮ್‌ ಬಳಕೆ, ಶಸ್ತ್ರ ಚಿಕಿತ್ಸೆ, ಕಾಪರ್‌-ಟಿ ಅಳವಡಿಸಿಕೊಳ್ಳುವ ಹಾಗೂ ಮಾತ್ರೆಗಳ ಸೇವನೆ ಬೇಡವೆಂದು ಬಯಸುವ ಅರ್ಹ ದಂಪತಿ ಗರ್ಭ ನಿರೋಧಕ ಚುಚ್ಚುಮದ್ದು ತೆಗೆದುಕೊಳ್ಳಬಹುದು. ಒಂದು ಬಾರಿ ‘ಅಂತರ' ಚುಚ್ಚುಮದ್ದು ಮಾಡಿಸಿಕೊಂಡರೆ ಮುಂದಿನ ಮೂರ್ನಾಲ್ಕು ತಿಂಗಳು ಅಥವಾ 12ರಿಂದ 14 ವಾರದವರೆಗೆ ಮಹಿಳೆಯರು ಗರ್ಭ ಧರಿಸುವ ಸಾಧ್ಯತೆ ಇರುವುದಿಲ್ಲ. ಈ ಅವಧಿ ಪೂರ್ಣ​ಗೊಂಡ ಆನಂತರ ಮತ್ತೆ ಆಸ್ಪತ್ರೆಗೆ ತೆರಳಿ, ಮತ್ತೊಂದು ಚುಚ್ಚುಮದ್ದು ಹಾಕಿಸಿಕೊಳ್ಳಬ​ಹುದು. ಮಕ್ಕಳು ಬೇಕೆನಿಸಿದಾಗ ಚುಚ್ಚುಮದ್ದು ತೆಗೆದುಕೊಳ್ಳುವುದನ್ನು ನಿಲ್ಲಿಸಬಹುದಾಗಿದೆ.

ಚುಚ್ಚುಮದ್ದು ಮಾಡಿಸಿಕೊಳ್ಳುವುದನ್ನು ಬಿಟ್ಟನಂತರ ಹುಟ್ಟುವ ಮಕ್ಕಳ ಮೇಲಾಗಲಿ, ಗರ್ಭಿಣಿ ಅಥವಾ ಬಾಣಂತಿ ಮೇಲಾಗಲಿ ಅಡ್ಡ ಪರಿಣಾಮ ಆಗುವುದಿಲ್ಲ ಎಂದು ‘ಕನ್ನಡಪ್ರಭ'ಕ್ಕೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಗಳು ತಿಳಿಸಿವೆ. ಕರ್ನಾಟಕದ ಜತೆಗೆ ಇತರ ರಾಜ್ಯಗಳಲ್ಲಿಯೂ ಕೇಂದ್ರ ಸರ್ಕಾರ ಗರ್ಭನಿರೋಧಕ ಚುಚ್ಚುಮದ್ದನ್ನು ಜಾರಿಗೆ ತರಲು ಮುಂದಾಗಿದೆ.

ಮೂಲಗಳ ಪ್ರಕಾರ ರಾಜ್ಯದಲ್ಲಿ ನಿಗದಿತ ಅವಧಿಯಲ್ಲಿ ಮಕ್ಕಳನ್ನು ಪಡೆಯಲು ಅರ್ಹತೆ​ಯುಳ್ಳ ಸುಮಾರು 90 ಲಕ್ಷ ಮಹಿಳೆಯರು ಇದ್ದಾರೆ. ಇವರಲ್ಲಿ ಈಗಾಗಲೇ ಸುಮಾರು 40 ಲಕ್ಷ ಮಹಿಳೆಯರು ಶಸ್ತ್ರಚಿಕಿತ್ಸೆ ಮಾಡಿಸಿ​ಕೊಂಡಿದ್ದಾರೆ. ಪ್ರತಿ ವರ್ಷ ಸುಮಾರು 3.50 ಲಕ್ಷ ಮಹಿಳೆಯರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿ​ದ್ದಾರೆ. 40 ಲಕ್ಷ ಜನರಲ್ಲಿ ಕೆಲವರು ಕಾಪರ್‌-ಟಿ, ಮಾತ್ರೆ ಹಾಗೂ ಕಾಂಡೋಮ್‌ ಬಳಸುತ್ತಿದ್ದಾರೆ. ಇವರನ್ನೆಲ್ಲ ಗಣನೆಗೆ ತೆಗೆದುಕೊಂಡು ಕೇವಲ ಶೇ.1 ಮಹಿಳೆಯರಿಗೆ ಮಾತ್ರ ಈ ಗರ್ಭನಿರೋಧಕ ‘ಅಂತರ' ಚುಚ್ಚುಮದ್ದು ಮಾಡಲು ಆರೋಗ್ಯ ಇಲಾಖೆ ಲೆಕ್ಕ ಹಾಕಿದೆ.

ಶೇ.1 ಮಹಿಳೆಯರಿಗೆ ಚುಚ್ಚುಮದ್ದು ಮಾಡುವುದನ್ನು ಗಣನೆಗೆ ತೆಗೆದುಕೊಂಡರೂ ರಾಜ್ಯದ ಫಲಾನುಭವಿಗಳಿಗೆ ಒಂದು ವರ್ಷಕ್ಕೆ ಕನಿಷ್ಠ 50 ಸಾವಿರ ಚುಚ್ಚುಮದ್ದಿನ ಅವಶ್ಯಕತೆ ಇದೆ. ಈಗಾಗಲೇ ಮೊದಲ ವರ್ಷ 50 ಸಾವಿರ ಗರ್ಭನಿರೋಧಕ ಚುಚ್ಚುಮದ್ದುಗಳನ್ನು ಪೂರೈ​ಸು​ವಂತೆ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿ​ಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಮುಂದಿನ ವರ್ಷದಿಂದ ತಾಲೂಕು ಆಸ್ಪತ್ರೆ ಹಾಗೂ ಪ್ರಾಥ​ಮಿಕ ಆರೋಗ್ಯ ಕೇಂದ್ರಗಳಲ್ಲಿನ ಅರ್ಹರನ್ನು ಪರಿಗಣಿಸಿ, ಹೆಚ್ಚಿನ ಚುಚ್ಚುಮದ್ದು ಪಡೆದುಕೊಳ್ಳಲು ಇಲಾಖೆ ನಿರ್ಧರಿಸಿದೆ. ಆರೋ​ಗ್ಯ ಇಲಾಖೆಯ ಈ ಯೋಜನೆ​ಯಿಂದಾಗಿ ದಂಪತಿ ಉಚಿತ ಚುಚ್ಚು​ಮದ್ದಿನ ಮೂಲಕ ಮಕ್ಕಳಾಗುವುದನ್ನು ಮುಂದೂ​ಡುವ ಸೌಲಭ್ಯ ಪಡೆಯಬಹುದಾಗಿದೆ.

click me!