
ಲಖನೌ(ಏ.25): ಈ ಹಿಂದಿನ ಸರ್ಕಾರಗಳು ರಾಜಕೀಯ ಲಾಭಕ್ಕೋಸ್ಕರ, ಗಣ್ಯವ್ಯಕ್ತಿಗಳ ಜನ್ಮದಿನ ಮತ್ತು ಪುಣ್ಯತಿಥಿಗೆ ಘೋಷಿಸಿದ್ದ 15 ಸರ್ಕಾರಿ ರಜೆಯನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಅಂದು ರಜಾದಿನವನ್ನು ಆಚರಿಸುವ ಬದಲು ಶಾಲೆ ಮತ್ತು ಕಾಲೇಜುಗಳಲ್ಲಿ ಗಣ್ಯವ್ಯಕ್ತಿಗಳ ಜೀವನ ಮತ್ತು ಸಾಧನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡಲಾಗುತ್ತದೆ.
ಸಿಎಂ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಹಿಂದಿನ ಸರ್ಕಾರಗಳು ಘೋಷಿಸಿದ್ದ ಸರ್ಕಾರಿ ರಜಾ ದಿನಗಳನ್ನು ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಈ ನಿಯಮ ಸರ್ಕಾರಿ ಕಚೇರಿಗಳಿಗೆ ಅನ್ವಯವಾಗುತ್ತದೆಯೇ? ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.
ಅಂಬೇಡ್ಕರ್ ಅವರ 126ನೇ ಜಯಂತಿಯಂದು ಮಾತನಾಡಿದ್ದ ಯೋಗಿ ಆದಿತ್ಯನಾಥ್, ಹೆಚ್ಚುತ್ತಿರುವ ಸರ್ಕಾರಿ ರಜಾ ದಿನಗಳಿಂದ ಶೈಕ್ಷಣಕ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಸರ್ಕಾರಿ ರಜೆ ಘೋಷಣೆಯಿಂದ 220 ದಿನಗಳ ಶೈಕ್ಷಣಿಕ ಅವ 120 ದಿನಗಳಿಗೆ ಇಳಿದಿದೆ. ಇದು ಹೀಗೆ ಮುಂದುವರಿದರೆ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡಲು ದಿನಗಳೇ ಉಳಿಯುವುದಿಲ್ಲ ಎಂದು ಹೇಳಿದ್ದರು. ಉತ್ತರ ಪ್ರದೇಶದಲ್ಲಿ 42 ಸಾರ್ವಜನಿಕ ರಜಾದಿನಗಳಿದ್ದು, ಅವುಗಳಲ್ಲಿ 17 ದಿನ ಗಣ್ಯವ್ಯಕ್ತಿಗಳ ಜಯಂತಿ, ಪುಣ್ಯತಿಥಿಗೆ ಸೇರಿದ್ದಾಗಿದೆ.
ಭೂ ಮಾಫಿಯಾ ನಿಗ್ರಹ ಕಾರ್ಯಪಡೆ:
ಇದೇ ವೇಳೆ ಚುನಾವಣಾ ಭರವಸೆ ಈಡೇರಿಸಿರುವ ಉತ್ತರ ಪ್ರದೇಶ ಸರ್ಕಾರ ರಾಜ್ಯದಲ್ಲಿ ಭೂ ಕಬಳಿಕೆ ಹಾವಳಿ ತಡೆಗಟ್ಟಲು ಭೂ ಮಾಫಿಯಾ ನಿಗ್ರಹ ಕಾರ್ಯಪಡೆ ರಚನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಎರಡು ತಿಂಗಳಿನಲ್ಲಿ ಭೂ ಕಬಳಿಕೆ ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ.
ಜತೆಗೆ ಮೇ 15ರಂದು ಮೊದಲ ವಿಧಾನಸಭೆ ಅವೇಶನ ನಡೆಸುವ ಕುರಿತು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಯೋಗಿ ಸರ್ಕಾರ ಅಕಾರಕ್ಕೆ ಬಂದ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭೆ ಅವೇಶನ ಇದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.