ಪೇಜಾವರ ಶ್ರೀ ಸವಾಲು ಸ್ವೀಕರಿಸುತ್ತೇವೆ: ಎಂಬಿಪಾ

By Web DeskFirst Published Aug 4, 2019, 9:09 AM IST
Highlights

ಸ್ವತಂತ್ರ ಲಿಂಗಾಯತ ಧರ್ಮ ವಿಚಾರವಾಗಿ ಶಾಸಕ ಎಂ.ಬಿ. ಪಾಟೀಲ್ ಮತ್ತು ಪೇಜಾವರ ಶ್ರೀ ನಡುವೆ ವಾಕ್ಸಮರ ಮುಂದುವರಿದಿದೆ. ಪೇಜಾವರ ಶ್ರೀಗಳ ಸವಾಲನ್ನು ನಾವು ಸ್ವೀಕರಿಸಲಿದ್ದೇವೆ ಎಂದು ಪಾಟೀಲರು ಹೇಳಿದ್ದಾರೆ. 

ವಿಜಯಪುರ (ಆ. 04): ಲಿಂಗಾಯತರು ಹಿಂದೂ ಧರ್ಮದವರು, ಅವರು ಪ್ರತ್ಯೇಕ ಧರ್ಮದವರಲ್ಲ. ಈ ಬಗ್ಗೆ ನಾನು ಚರ್ಚೆಗೆ ಸಿದ್ಧ ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿಕೆಗೆ ಸಂಬಂಧಿಸಿದಂತೆ ತಾವು ಸ್ವಾಮೀಜಿ ಸವಾಲನ್ನು ಬದ್ಧತೆಯಿಂದ ಸ್ವೀಕರಿಸುತ್ತೇವೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

ನೀವೂ ಹಿಂದುಗಳೇ‘ ಎಂ.ಬಿ. ಪಾಟೀಲ್‌ಗೆ ಪೇಜಾವರ ಶ್ರೀ ತಿರುಗೇಟು

ಪೇಜಾವರ ಶ್ರೀಗಳು ಧೈರ್ಯದ ಬಗ್ಗೆ ಮಾತನಾಡಿದ್ದಾರೆ. ಆ ರೀತಿ ಮಾತನಾಡಬಾರದು. ಪೇಜಾವರ ಶ್ರೀಗಳನ್ನೇ ಬಸವಧರ್ಮದ ಕಡೆಗೆ ಸೆಳೆದುಕೊಳ್ಳುತ್ತೇವೆ. ಈ ಬಸವಧರ್ಮವನ್ನು ಪೇಜಾವರ ಶ್ರೀಗಳು ಒಪ್ಪಿಕೊಳ್ಳುವ ವಿಶ್ವಾಸವಿದೆ. ಬಸವಧರ್ಮದಲ್ಲಿ ಹುಳುಕು ಇಲ್ಲ. ಬಸವಧರ್ಮ ಜಾತಿರಹಿತ ಧರ್ಮ ಎಂದು ಹೇಳಿದರು.

ಹಿಂದೂ ಒಂದು ಧರ್ಮವಲ್ಲ, ಅದೊಂದು ಸನ್ಮಾರ್ಗ. ಈ ವಿಷಯವನ್ನು ಪೇಜಾವರ ಶ್ರೀಗಳು ಅರಿತುಕೊಳ್ಳಬೇಕು. ಅದನ್ನು ಬಿಟ್ಟು ತಾವೇ ಪ್ರಧಾನಿಯಂತೆ ವರ್ತನೆ ಮಾಡಬಾರದು. ಹಿಂದೂ ಒಂದು ಜೀವನ ಪದ್ಧತಿ, ಅದೊಂದು ಸನ್ಮಾರ್ಗ, ಆ ಅರ್ಥದಲ್ಲಿ ನಾವೆಲ್ಲರೂ ಹಿಂದೂಗಳೇ.

ಪ್ರಧಾನಿ ಅವರು ಸಹ ಈ ವಿಷಯವನ್ನು ಹೇಳಿದ್ದಾರೆ. ಈ ವಿಷಯವನ್ನು ಪೇಜಾವರ ಶ್ರೀಗಳು ಅರಿತುಕೊಳ್ಳಬೇಕು ಎಂದು ಹೇಳಿದರು. ಬಸವ ಧರ್ಮ, ಜೈನ, ಬೌದ್ಧ ಧರ್ಮದಂತೆ ಲಿಂಗಾಯತ ಒಂದು ಧರ್ಮವಾಗಬೇಕು. ಬಸವ ಧರ್ಮ ಜಾಗತಿಕ ಧರ್ಮವಾಗಬೇಕು, ಬಸವ ಸಂಸ್ಕೃತಿ ಜಾಗತಿಕ ಸಂಸ್ಕೃತಿಯಾಗಬೇಕು ಎಂಬುದು ನಮ್ಮ ಆಶಯ ಎಂದರು.

ಪಂಥಾಹ್ವಾನ ನೀಡಿಲ್ಲ, ಬನ್ನಿ ಚರ್ಚಿಸೋಣ ಎಂದಿದ್ದೆ: ಪೇಜಾವರಶ್ರೀ

ಲಿಂಗಾಯತ ಧರ್ಮದ ವಿಚಾರವಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ ಉದ್ವೇಗಕ್ಕೊಳಗಾಗುವುದು, ಆಕ್ರೋಶ ವ್ಯಕ್ತಪಡಿಸುವುದು ಸರಿಯಲ್ಲ. ನಾನು ಲಿಂಗಾಯತ ಮತವನ್ನು ಸರಿಪಡಿಸಲು ಹೋಗುತ್ತಿಲ್ಲ, ಸ್ನೇಹದಿಂದ ಮತ್ತು ಸಹೋದರತ್ವದಿಂದ ನಮ್ಮಲ್ಲೇ ಇರಿ ಎಂದು ಹೇಳುತ್ತಿದ್ದೇನೆ ಅಷ್ಟೆಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀ ಸ್ಪಷ್ಟನೆ ನೀಡಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಲಿಂಗಾಯತ, ವೀರಶೈವ ಧರ್ಮದ ವಿಚಾರದಲ್ಲಿ ನಾನು ಪಂಥಾಹ್ವಾನ ಅನ್ನುವ ಶಬ್ದವನ್ನೇ ಬಳಸಿಲ್ಲ. ಚರ್ಚೆಗೆ ಬನ್ನಿ ಅಂತ ಕರೆದಿದ್ದೇನೆ ಅಷ್ಟೆ. ಜತೆಗೆ, ನಾನು ಲಿಂಗಾಯತರಲ್ಲಿ ಹುಳುಕಿದೆ ಎಂದು ಹೇಳಿಲ್ಲ, ದೋಷಾರೋಪ ಮಾಡಿಲ್ಲ.

ನೀವೂ ಹಿಂದುಗಳೆ, ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಹೇಳಿದ್ದೇನೆ. ನಾನು ಸೌಜನ್ಯದಿಂದ ಕೇಳಿದ್ದಕ್ಕೆ ಅವರು ಅಷ್ಟೊಂದು ಆಕ್ರೊಶಭರಿತವಾಗಿ ಹೇಳಲು ಕಾರಣವೇನು? ಬಸವಣ್ಣನವರ ಬಗ್ಗೆ ಬಹಳ ಗೌರವ ಇದೆ. ಅವರ ಬಗ್ಗೆ ಯಾವುದೇ ಆರೋಪ ಮಾಡಿಲ್ಲ. ಧರ್ಮದ ಬಗ್ಗೆ ಯಾವುದೇ ದೋಷಾರೋಪ ಮಾಡಿಲ್ಲ ಎಂದರು.

ಹಿಂದೂ ಧರ್ಮ ಎಂದರೆ ಹಿಂದೂ ದೇಶದ ಧರ್ಮ. ಬಸವಣ್ಣ, ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜರು, ಮಹಾವೀರ, ಬುದ್ಧ ಎಲ್ಲರೂ ಈ ದೇಶದಲ್ಲಿ ಅವತರಿಸಿ ಧರ್ಮ ಪ್ರಚಾರ ಮಾಡಿದ್ದಾರೆ. ಇದರಲ್ಲಿ ವಿವಾದವೇ ಇಲ್ಲ. ಹಿಂದೂ ಧರ್ಮದ ಅನುಯಾಯಿಗಳೆಲ್ಲರೂ ಹಿಂದೂಗಳೆ. ನಾನು ಯಾವುದೇ ಸಿದ್ಧಾಂತಗಳ ಬಗ್ಗೆ ಖಂಡನೆ ಮಾಡಲು ಹೋಗಿಲ್ಲ ಎಂದರು.

click me!