
ಬೆಂಗಳೂರು(ಮಾ. 11): ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಮಹತ್ವದ ಉತ್ತರಪ್ರದೇಶದಲ್ಲಿ ಎಸ್'ಪಿ, ಬಿಎಸ್ಪಿ ಕನಸನ್ನು ನುಚ್ಚು ನೂರು ಮಾಡಿರುವ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಉತ್ತರಾಖಂಡ್'ನಲ್ಲಿ ಕಾಂಗ್ರೆಸ್ ಹಸ್ತಕ್ಕೆ ಕೈಕೊಟ್ಟಿರುವ ಮತದಾರ ಕೇಸರಿ ಪಕ್ಷಕ್ಕೆ ಬಹುಮತ ನೀಡಿದ್ದಾನೆ. ಪಂಚ ನದಿಗಳ ನಾಡು ಪಂಜಾಬ್'ನಲ್ಲಿ ಅಕಾಲಿದಳ ಮಕಾಡೆ ಮಲಗಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ. ಪುಟ್ಟ ರಾಜ್ಯಗಳಾದ ಗೋವಾ ಹಾಗೂ ಮಣಿಪುರದಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷಗಳಾಗಿ ಹೊರಹೊಮ್ಮಿದ್ದು, ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಿದೆ.
ಸತತ 15 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತೆ ಸ್ವಂತ ಬಲದಿಂದ ಅಧಿಕಾರದ ಗದ್ದುಗೆ ಏರುತ್ತಿದೆ. ಆಡಳಿತ ವಿರೋಧಿ ಅಲೆಯನ್ನು ಬಿಜೆಪಿ ಪರಿಣಾಮಕಾರಿಯಾಗಿ ಬಳಿಸಿಕೊಂಡು ಅಭೂತಪೂರ್ವ ಯಶಸ್ಸು ಸಾಧಿಸಿದೆ. ಈ ಮೂಲಕ ಬಿಜೆಪಿ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆ ಮಾಡುವುದು ಸ್ಪಷ್ಟವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಹಾಗೂ ಉತ್ತರ ಪ್ರದೇಶ ಬಿಜೆಪಿ ನಾಯಕರ ಸಾಮೂಹಿಕ ನಾಯಕತ್ವಕ್ಕೆ ಜಯ ಸಂದಂತಾಗಿದೆ. ಈ ಹಿಂದೆ 1996ರಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಏರಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ಕ್ರಮವನ್ನು ಟೀಕಿಸುತ್ತಿದ್ದ ಪ್ರತಿಪಕ್ಷಗಳ ದಾಳಿಗೂ ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ಉತ್ತರ ನೀಡಿದ್ದು, ಕಾಂಗ್ರೆಸ್ ಭದ್ರಕೋಟೆಯಾಗಿದ್ದ ರಾಯ್ ಬರೇಲಿ ಮತ್ತು ಅಮೇಠಿಯಲ್ಲೇ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಭಾರಿಸಿದ್ದಾರೆ.
ಇನ್ನು ಈ ಬಾರಿ ಶತಾಯಗತಾಯ ಅಧಿಕಾರದ ಗದ್ದುಗೆ ಏರಲೇಬೇಕು ಎನ್ನುವ ಯೋಜನೆ ರೂಪಿಸಿದ್ದ ಎಸ್ ಪಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಆದರೆ ಮಹಾಮೈತ್ರಿಗೂ ಸೆಡ್ಡು ಹೊಡೆದು ಬಿಜೆಪಿ ಭಾರಿ ಮುನ್ನಡೆ ಸಾಧಿಸಿದೆ. ಅನಿವಾರ್ಯವಾದರೆ ಬಿಎಸ್ ಪಿಯೊಂದಿಗೂ ಮೈತ್ರಿ ಮಾಡಿಕೊಳ್ಳುವುದಾಗಿ ಸಿಎಂ ಅಖಿಲೇಶ್ ಯಾದವ್ ಹೇಳಿದ್ದರಾದರೂ, ಎಸ್ ಪಿ, ಕಾಂಗ್ರೆಸ್ ಮತ್ತು ಬಿಎಸ್ ಪಿ ಪಕ್ಷಗಳ ಸ್ಥಾನವನ್ನು ಒಟ್ಟು ಕೂಡಿದರೂ ಮ್ಯಾಜಿಕ್ ಸಂಖ್ಯೆ ಬರುವುದಿಲ್ಲ.
ಉತ್ತರಖಂಡ
ಐದು ವರ್ಷಗಳ ಹಿಂದೆ ಕಾಂಗ್ರೆಸ್ಸಿಗಿಂತ ಕೇವಲ 1 ಸ್ಥಾನ ಕಡಿಮೆ ಗಳಿಸಿ ಅಕಾರದ ರೇಸ್‌ನಲ್ಲಿ ಹಿಂದೆ ಬಿದ್ದಿದ್ದ ಬಿಜೆಪಿ ಇದೀಗ ಉತ್ತರಾಖಂಡದ ಇತಿಹಾಸದಲ್ಲೇ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಉತ್ತರಾಖಂಡ್ನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ.ಆದರೆ, ಎಲ್ಲರನ್ನೂ ಗೆಲ್ಲಿಸಿದ ಉತ್ತರಾಖಂಡ್ ಬಿಜೆಪಿ ರಾಜ್ಯಾಧ್ಯಕ್ಷ ಅಜಯ್ ಭಟ್ ಸೋತಿದ್ದಾರೆ.
70 ಸದಸ್ಯ ಬಲದ ವಿಧಾನಸಭೆಯಲ್ಲಿ 2012ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. 32ರಲ್ಲಿ ಕಾಂಗ್ರೆಸ್ ಹಾಗೂ 31ರಲ್ಲಿ ಬಿಜೆಪಿ ಗೆದ್ದಿತ್ತು. ಪಕ್ಷೇತರರ ಬೆಂಬಲ ಪಡೆದು ಕಾಂಗ್ರೆಸ್ ಗದ್ದುಗೆ ಹಿಡಿದಿತ್ತು. ಆದರೆ ಆಂತರಿಕ ಕಲಹದಿಂದ ನಲುಗಿದ ಕಾಂಗ್ರೆಸ್, ಬಂಡಾಯ ಚಟುವಟಿಕೆಗಳಿಗೂ ಸಾಕ್ಷಿಯಾಗಿತ್ತು. ಪಕ್ಷದ 13 ಶಾಸಕರು ವಿಜಯ್ ಬಹುಗುಣ ನೇತೃತ್ವದಲ್ಲಿ ಬಿಜೆಪಿ ಸೇರಿದ್ದರು. ಅತಂತ್ರ ವಿಧಾನಸಭೆಯ ಅಪಾಯವನ್ನು ಗ್ರಹಿಸಿದ ಮತದಾರರು ಬಿಜೆಪಿಗೆ ಭರ್ಜರಿ ಬಹುಮತ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷವು ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿ ದೊಡ್ಡ ಗೊಂದಲಕ್ಕೆ ಮೊದಲೇ ತೆರೆ ಎಳೆಯಿತು. ಇದೇ ವೇಳೆ ಅಮರೀಂದರ್ ಅವರೂ ಇದು ತಮ್ಮ ಕೊನೆಯ ಚುನಾವಣೆ ಎಂದು ಬಿಂಬಿಸಿ ಜನರ ಮೇಲೆ ಭಾವನಾತ್ಮಕ ಮೋಡಿ ಮಾಡಿದರು. ಅಕಾಲಿದಳ-ಬಿಜೆಪಿ ದುರಾಡಳಿತ ನಡೆಸುತ್ತಿವೆ ಎಂದು ಜನರಿಗೆ ಮನದಟ್ಟು ಮಾಡಿದರು ಹಾಗೂ ಆಡಳಿತ ವಿರೋ ಅಲೆಯನ್ನು ಕಾಂಗ್ರೆಸ್ ಸಮರ್ಥವಾಗಿ ಬಳಸಿಕೊಂಡಿತು.
ಮೋಡಿ ಮಾಡುವಲ್ಲಿ ಆಪ್ ವಿಫಲ:
ಅಕಾಲಿ ದಳ-ಬಿಜೆಪಿ ನೇತೃತ್ವದ ಪಂಜಾಬ್ ಸರ್ಕಾರದಲ್ಲಿದ್ದ 18 ಸಚಿವರ ಪೈಕಿ ಕನಿಷ್ಠ 10 ಸಚಿವರು ಪರಾಭವಗೊಂಡಿದ್ದಾರೆ. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಪಂಜಾಬ್ ವಿಧಾನಸಭೆ ಚುನಾವಣೆಗೆ ಅರವಿಂದ ಕೇಜ್ರಿವಾಲ್‌ರ ಆಮ್ ಆದ್ಮಿ ಪಕ್ಷ ಅಖಾಡಕ್ಕಿಳಿದಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಅನಿರೀಕ್ಷಿತವಾಗಿ ಆಪ್ 4 ಸ್ಥಾನ ಗೆದ್ದಿದ್ದು ಇದಕ್ಕೆ ಕಾರಣವಾಗಿತ್ತು.
ಆಪ್ ತಾನು ಎದುರಿಸಿದ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಈಗ 20 ಸ್ಥಾನ ಗೆದ್ದಿದೆ. ಇದು ಕಮ್ಮಿ ಸಾಧನೆ ಏನಲ್ಲ. ಆದರೂ ಕೆಲ ಸಮೀಕ್ಷೆಗಳು ಆಪ್ ಅಕಾರಕ್ಕೆ ಬರಬಹುದು ಎಂದು ಭವಿಷ್ಯ ನುಡಿದಿದ್ದರಿಂದ ಸಹಜವಾಗೇ ಆ ಪಕ್ಷದತ್ತ ಜನರು ದೃಷ್ಟಿ ಹರಿಸಿದ್ದರು.
ಆದರೆ ಪಕ್ಷದಲ್ಲಿನ ಒಳಗಜಗಳ ಹಾಗೂ ಸಮರ್ಥ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲದಿರುವುದು ಅದಕ್ಕೆ ಮುಳುವಾಗಿದೆ. 4 ಸಂಸದರಲ್ಲಿ ಕೆಲವರು ಬಹಿರಂಗವಾಗೇ ಆಪ್ ವಿರುದ್ಧ ಸೆಟೆದು ನಿಂತರು. ಜೊತೆಗೆ ದಿಲ್ಲಿಯ ನಾಯಕರಿಂದಲೇ ನಿಯಂತ್ರಿಸಲ್ಪಡುವ ಪಕ್ಷ ಎಂಬ ಅಪಖ್ಯಾತಿಗೆ ಪಾತ್ರವಾಯಿತು. ಇನ್ನು ಚುನಾವಣೆಗೆ ಸಾಕಷ್ಟು ಹಣದ ಅವಶ್ಯಕತೆ ಇದ್ದು, ಇಷ್ಟು ಹಣ ಹೊಂದಿಸುವ ತಾಕತ್ತು ಆಮ್ ಆದ್ಮಿ ಪಕ್ಷದಲ್ಲಿರಲಿಲ್ಲ. ಬಿಜೆಪಿ ತೊರೆದಿದ್ದ ನವಜೋತ್ ಸಿಧು ಅವರನ್ನು ಸೇರಿಸಿಕೊಳ್ಳುವಲ್ಲೂ ಪಕ್ಷ ಎಡವಿತು.
ಗೋವಾ : ಗೋವಾದಲ್ಲಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ಲಕ್ಷ್ಮೀಕಾಂತ್ ಪರ್ಸೇಕರ್ ಅವರು ಸೋಲನುಭವಿಸಿದ್ದಾರೆ. ಮಾಂಡ್ರೆಮ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಾರಾಯಣ್ ಸೋಪ್ಟೆಗೆ ಗೋವಾ ಸಿಎಂ ಶರಣಾಗಿದ್ದಾರೆ.
ಉಕ್ಕಿನ ಮಹಿಳೆಗೆ ಆಘಾತ: ಮಣಿಪುರದ ಐರನ್ ಲೇಡಿ ಹಾಗೂ ಭವಿಷ್ಯದ ಸಿಎಂ ಎಂದೇ ಪರಿಗಣಿತವಾಗಿರುವ ಇರೋಮ್ ಶರ್ಮಿಳಾಗೆ ಸೋಲಿನ ಆಘಾತವಾಗಿದೆ. ತೌಬಾಲ್ ಕ್ಷೇತ್ರದಲ್ಲಿ ಮಣಿಪುರದ ಹಾಲಿ ಸಿಎಂ, ಕಾಂಗ್ರೆಸ್ ಅಭ್ಯರ್ಥಿ ಎಲ್'ಬೋಬಿ ಸಿಂಗ್ ಅವರು ಗೆಲುವಿನ ನಗೆ ಬೀರಿದ್ದಾರೆ. ದುರಂತವೆಂದರೆ ಶರ್ಮಿಳಾ ಅವರಿಗೆ ಸಿಕ್ಕಿದ್ದು ಕೇವಲ 90 ಮಾತ್ರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.