
ತುಮಕೂರು(ಮಾ.10): ಹುಳಿಯಾರು ತಾಲೂಕು ಬಳ್ಳೇಕಟ್ಟೆಯಲ್ಲಿನ ವಿದ್ಯಾವಾರಿಧಿ ಶಾಲೆಯಲ್ಲಿ ಬುಧವಾರ ರಾತ್ರಿ ವಿಷಾಹಾರ ಸೇವಿಸಿದ ವಿದ್ಯಾರ್ಥಿಗಳು ಇಹಲೋಕ ತ್ಯಜಿಸುವ ಮುನ್ನ 26 ಮಕ್ಕಳ ಜೀವ ಉಳಿಸಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಹೌದು, ತೀವ್ರ ಹಸಿವಿನಿಂದ ಬಳಲುತ್ತಿದ್ದ ಈ ವಿದ್ಯಾರ್ಥಿಗಳು ತಾವು ವಿಷಾಹಾರ ಸೇವಿಸುತ್ತಿದ್ದೇವೆಂಬ ಅಂದಾಜಿಲ್ಲದೆ ಗಬಗಬನೆ ಅನ್ನ, ಸಾಂಬಾರ್ ತಿನ್ನುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ತೀವ್ರವಾಗಿ ಅಸ್ವಸ್ಥರಾದರು. ಎದೆನೋವಿನಿಂದ ಒದ್ದಾಡುತ್ತಿದ್ದ ಈ ಮಕ್ಕಳು ಉಳಿದ 26 ವಿದ್ಯಾರ್ಥಿಗಳಿಗೆ ಊಟ ತಿನ್ನಬೇಡಿ, ಅದು ಸರಿಯಲ್ಲ ಎಂದು ಎಚ್ಚರಿಸಿದ್ದರಿಂದಲೇ ಉಳಿದ ಮಕ್ಕಳ ಜೀವ ಉಳಿದಿದೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
ಕಣ್ಣೆದುರೇ ವಿಲವಿಲನೆ ಒದ್ದಾಡುತ್ತಿದ್ದ ಈ ಮಕ್ಕಳನ್ನು ನೋಡಿ ಉಳಿದವರು ಊಟ ಮಾಡದೆ ಕೈ ತೊಳೆದುಕೊಂಡರು. ಒಂದು ಕೈ ತಲೆ ಮೇಲೆ ಮತ್ತೊಂದು ಕೈ ಎದೆಮೇಲೆ ಇಟ್ಟುಕೊಂಡು ಅಸಹನೀಯ ನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿಗಳು ಕುಸಿದು ಬೀಳುವ ಮುನ್ನ ಯಾರಾದರೂ ಊಟ ತಿನ್ನುತ್ತಿದ್ದೀರಾ ಎಂದು ನೋಡಿಯೇ ಪ್ರಜ್ಞೆ ಕಳೆದುಕೊಂಡರಂತೆ. ಊಟ ತಿಂದ 10 ನಿಮಿಷ ಕಾಲ ಕೈ ಕಾಲು, ಎದೆನೋವು, ತಲೆನೋವು, ತಲೆ ಸುತ್ತಿನಿಂದ ನರಳಿದ ಈ ಮೂವರು ವಿದ್ಯಾರ್ಥಿಗಳು ಊಟ ಮಾಡಬೇಡಿ ಎಂದು ಬೇಡಿಕೊಳ್ಳದೇ ಇದ್ದಿದ್ದರೆ ಊಹೆಗೂ ನಿಲುಕಲಾರದಷ್ಟುದೊಡ್ಡ ಅನಾಹುತ ಸಂಭವಿಸುತ್ತಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡು ಉತ್ತಮ ಅಂಕ ಪಡೆಯಬೇಕೆಂಬ ಹಠ ತೊಟ್ಟಿದ್ದ ವಿದ್ಯಾರ್ಥಿಗಳು ತಮ್ಮದಲ್ಲದ ತಪ್ಪಿಗೆ ಈಗ ಜೀವ ಬಿಟ್ಟರು.
ವರದಿ: ಉಗಮ ಶ್ರೀನಿವಾಸ್, ಕನ್ನಡ ಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.