
ಜಾಕಿಸ್ತಾನ್(ಮಾ.10): ಪ್ರಪಂಚದಲ್ಲಿ ಅದೆಷ್ಟೋ ಮಂದಿ ಚಿತ್ರ ವಿಚಿತ್ರ ಕೆಲಸ ಕಾರಣದಿಂದಾಗಿ ಸುದ್ದಿಯಲ್ಲಿರುತ್ತಾರೆ. ಆದರೆ ಅಮೆರಿಕಾದಲ್ಲಿ ನೆಲೆಸಿರುವ ಯುವಕನೊಬ್ಬ ಮಾಡಿದ ಕೆಲಸ ನೋಡಿದ್ರೆ ನಿಜಕ್ಕೂ ಶಾಕ್ ಆಗ್ತೀರಿ.
ಜಾಕ್ ಲ್ಯಾಂಡ್ಸ್'ಬರ್ಗ್'ನ ಈ ಯುವಕ ಊಟಾದ ಬಳಿ ಇರುವ ಮರುಭೂಮಿಯಲ್ಲಿ ತನಗಾಗಿಯೇ ಹೊಸದೊಂದು ದೇಶವನ್ನು ನಿರ್ಮಿಸಿದ್ದಾನೆ. ಈ ದೇಶಕ್ಕೆ ಎಂಟ್ರಿ ಪಡೆಯಬೇಕೆಂದರೆ ನಿಮ್ಮ ಬಳಿ ಪಾಸ್'ಪೋರ್ಟ್ ಅತ್ಯವಶ್ಯಕ. ಈ ದೇಶವನ್ನು ನಿರ್ಮಿಸಿದ ಜಾಕ್ ಲ್ಯಾಂಡ್ಸ್'ಬರ್ಗ್ ಇದನ್ನು 'ದ ರಿಪಬ್ಲಿಕ್ ಆಫ್ ಜಾಕಿಸ್ತಾನ್' ಎಂದು ನಾಮಕರಣ ಮಾಡಿದ್ದಾನೆ ಅಲ್ಲದೇ ತನ್ನನ್ನು ತಾನು ಈ ದೇಶದ ರಾಷ್ಟ್ರಪತಿ ಎಂದು ಕರೆಸಿಕೊಳ್ಳುತ್ತಿದ್ದಾನೆ.
ಆದರೆ ಈತ ನಿರ್ಮಿಸಿದ ಈ ದೇಶಕ್ಕೆ ಅಧಿಕೃತವಾಗಿ ಎಲ್ಲೂ ಮಾನ್ಯತೆ ಸಿಕ್ಕಿಲ್ಲ. ನಾಲ್ಕು ಎಕರೆ ಪ್ರದೇಶ ವಿಸ್ತೀರ್ಣ ಹೊಂದಿರುವ ಈ ದೇಶ ಪಟ್ಟಣದಿಂದ 96 ಕಿಲೋ ಮೀಟರ್ ದೂರದಲ್ಲಿದೆ. ಅಲ್ಲದೇ ರಸ್ತೆಯಿಂದ 24 ಕಿಲೋ ಮೀಟರ್ ಅಂತರದಲ್ಲಿದೆ. 'ಬಾಕ್ಸ್ ಎಲ್ಡರ್' ಪ್ರದೇಶದಲ್ಲಿರುವ ಈ ಜಾಗವನ್ನು ಈತ ಸುಮಾರು 16 ವರ್ಷದ ಮೊದಲು ಖರೀದಿಸಿದ್ದನಂತೆ.
ಈ ಯುವಕ ಇದನ್ನು ಸಾರ್ವಭೌಮ ರಾಷ್ಟ್ರವನ್ನಾಗಿಸುವ ಕನಸಿನಿಂದ ನಿರ್ಮಿಸಿದ್ದು, ಇದಕ್ಕಾಗಿ ಈತ ಬಹಳಷ್ಟು ಶ್ರಮ ವಹಿಸುತ್ತಿದ್ದಾನಂತೆ. ಆದರೆ ಇದು ಅಸಂಭವ ಎಂದು ಜಾಕ್'ಗೂ ತಿಳಿದಿದೆ. ಹೀಗಿದ್ದರೂ ಈತ ತನ್ನ ಪುಟ್ಟ ದೇಶದ ಸುರಕ್ಷತೆಗಾಗಿ ರೋಬೋಟ್'ಗಳನ್ನು ಗಾರ್ಡ್'ಗಳನ್ನಾಗಿ ಇರಿಸಿದ್ದಲ್ಲದೆ, ದೇಶಕ್ಕೆಂದೇ ಪಾಸ್'ಪೋರ್ಟ್'ನ್ನೂ ಜಾರಿಗೊಳಿಸಿದ್ದಾನೆ.
'ತನ್ನ ದೇಶಕ್ಕೆ ಬಂದು ತೆರಳುವ ಪ್ರತಿಯೊಬ್ಬರ ಪಾಸ್'ಪೋರ್ಟ್'ಗೆ ಮೊಹರನ್ನು ಹಾಕುವ ವ್ಯವಸ್ಥೆಯನ್ನು ಮಾಡಿದ್ದೇನೆ' ಎಂದು ಜಾಕ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾನೆ. ಈತ ಈ ಜಾಗಕ್ಕೆ ಮೊದಲ ಬಾರಿ ಭೇಟಿ ನೀಡಿದ ಸಂದರ್ಭದಲ್ಲೇ ಇದನ್ನು ದೇಶವನ್ನಾಗಿ ಪರಿವರ್ತಿಸುವ ಯೋಚನೆ ತಲೆಗೆ ಬಂದಿತ್ತಂತೆ. ಅಲ್ಲದೇ 'ಸಮ್ ಥಿಂಗ್ ಫ್ರಂ ನಥಿಂಗ್' ಎಂದು ತನ್ನ ದೇಶದ ಧ್ಯೇಯ ವಾಕ್ಯವನ್ನಾಗಿ ಇರಿಸಿದ್ದಾನೆ.
ಇನ್ನು ಶಾಕಿಂಗ್ ವಿಚಾರವೆಂದರೆ ಜಾಕಿಸ್ತಾನ್'ಗೆ ದೇಶ ಎಂಬ ದರ್ಜೆ ನೀಡಿರುವ ಜ್ಯಾಕ್ ಮಾತ್ರ ಈ ದೇಶದಲ್ಲಿ ನೆಲೆಸುತ್ತಿಲ್ಲ. ಆದರೆ ವರ್ಷದಲ್ಲಿ ಒಂದೆರಡು ಬಾರಿ ಬಂದು ಭೇಟಿ ನೀಡುತ್ತಾರೆ ಎಂದು ತಿಳಿದು ಬಂದಿದೆ. ಈ ವೇಳೆ ಅವರ ಗೆಳೆಯರೂ ಆಗಮಿಸುತ್ತಾರಂತೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.