ತೂಗು ಸೇತುವೆ ಸರದಾರ ಗಿರೀಶ್ ಬಾರದ್ವಾಜ್: ಅಸಾಮಾನ್ಯ ಕನ್ನಡಿಗ

By Suvarna Web DeskFirst Published Oct 27, 2016, 4:18 PM IST
Highlights

ಆ ದಿನಗಳಲ್ಲಿ ತೂಗು ಸೇತುವೆಯ ಕಲ್ಪನೆಯೇ ಹೊಸತು. 40 ಸ್ವಯಂ ಸೇವಕ ಯುವಕ ತಂಡದೊಂದಿಗೆ ಕೆಲಸ ಶುರು ಮಾಡಿದ ಗಿರೀಶ್ ಕೆಲವೇ ದಿನಗಳಲ್ಲಿ ಬಲಾಢ್ಯ ಸೇತುವೆ ಕಟ್ಟಿಬಿಟ್ಟರು. 30 ವರ್ಷಗಳ ನಂತರವೂ ಆ ಸೇತುವೆ ಜನರ ಸಂಪರ್ಕ ಕೊಂಡಿಯಾಗಿದೆ.

ಅವರೊಬ್ಬ ಎಂಜಿನಿಯರ್, ಪಕ್ಕಾ ಕಮರ್ಷಿಯಲ್ ಆಗಿ ಯೋಚಿಸಿದ್ದರೆ ಕೋಟ್ಯಾಂತರ ರುಪಾಯಿ ಸಂಪಾದನೆ ಮಾಡಿ ಆರಾಮದ ವಿಶ್ರಾಂತ ಜೀವನ ನಡೆಸಬಹುದಿತ್ತು. ಆದರೆ, ಅದೆಲ್ಲವನ್ನೂ ಬಿಟ್ಟು ಅವರು ಹೊರಟಿದ್ದು, ಜನರನ್ನು ಬೆಸೆಯುವ ಮಹತ್ಕಾರ್ಯದ ಕಡೆಗೆ. ಆ ವ್ಯಕ್ತಿ ಬೇರಾರೂ ಅಲ್ಲ, ತೂಗು ಸೇತುವೆಗಳ ಸರದಾರ ಎನಿಸಿಕೊಂಡಿರುವ ಗಿರೀಶ್ ಭಾರದ್ವಾಜ್.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರು. ಮೆಕ್ಯಾನಿಕಲ್ ಎಂಜಿನಿಯರ್ ಆದ ಗಿರೀಶ್ ಭಾರದ್ವಾಜ್ ಪದವಿ ಪಡೆದ ನಂತರ ಅಪ್ಪನ ಅಣತಿಯಂತೆ ಊರಿನಲ್ಲೇ ಸಣ್ಣದೊಂದು ವರ್ಕ್'ಶಾಪ್ ಶುರು ಮಾಡಿದರು.

ಅದು 1989ರ ಸಮಯ. ಗಿರೀಶ್ರ ಮೊದಲ ತೂಗು ಸೇತುವೆ ಸಾಕಾರಗೊಂಡದ್ದೇ ಒಂದು ರೋಚಕ ಕತೆ. ಸ್ಥಳೀಯರು ಪಯಸ್ವಿನಿ ನದಿಗೆ ಸೇತುವೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು. ಇದರಿಂದಾಗಿ ಅರಂಬೂರು ಗ್ರಾಮದ ಜನರಿಗೆ ಸುಳ್ಯದೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿತ್ತು. ಆ ದಿನಗಳಲ್ಲಿ ತೂಗು ಸೇತುವೆಯ ಕಲ್ಪನೆಯೇ ಹೊಸತು. 40 ಸ್ವಯಂ ಸೇವಕ ಯುವಕ ತಂಡದೊಂದಿಗೆ ಕೆಲಸ ಶುರು ಮಾಡಿದ ಗಿರೀಶ್ ಕೆಲವೇ ದಿನಗಳಲ್ಲಿ ಬಲಾಢ್ಯ ಸೇತುವೆ ಕಟ್ಟಿಬಿಟ್ಟರು. 30 ವರ್ಷಗಳ ನಂತರವೂ ಆ ಸೇತುವೆ ಜನರ ಸಂಪರ್ಕ ಕೊಂಡಿಯಾಗಿದೆ.

ಇದುವರೆಗೂ 127 ತೂಗು ಸೇತುವೆಗಳನ್ನು ಗಿರೀಶ್ ನಿರ್ಮಿಸಿದ್ದಾರೆ. ಈ ಪೈಕಿ 2 ಒಡಿಶಾದಲ್ಲಿ ಹಾಗೂ 3 ಆಂಧ್ರದಲ್ಲಿವೆ. ಉಳಿದವರು ಕೇರಳ ಹಾಗೂ ಕರ್ನಾಟಕದಲ್ಲಿ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ಆಂಧ್ರದ ಸಿಎಂ ಆಗಿದ್ದ ಚಂದ್ರಬಾಬು ನಾಯ್ಡು ಗಿರೀಶ್ ಇವರ ಕೆಲಸವನ್ನು ಮನಸಾರೆ ಹೊಗಳಿದ್ದಾರೆ. ತೂಗು ಸೇತುವೆ ನಿಮರ್ಿಸಿಕೊಡಿ ಎಂದು ನಾನಾ ರಾಜ್ಯಗಳಿಂದ 30ಕ್ಕೂ ಹೆಚ್ಚು ಪ್ರಸ್ತಾಪಗಳು ಬಂದಿವೆ.

67 ವರ್ಷದ ಗಿರೀಶ್ ಭಾರದ್ವಾಜ್ ಸೇವೆ ಉಚಿತ. ಸರ್ವೆ ಮಾಡುವುದರಿಂದ ಹಿಡಿದು ವಿನ್ಯಾಸ, ತಾಂತ್ರಿಕ ಸಲಹೆಗೂ ಹಣ ಪಡೆಯುವುದಿಲ್ಲ. ಅನೇಕ ಹಳ್ಳಿಗಳಲ್ಲಿ ಜನರ ಬಳಿ ಹಣ ಇಲ್ಲ ಎಂದು ಗೊತ್ತಾದಾಗ ತಮ್ಮ ಸ್ವಂತ ಹಣವನ್ನು ಹಾಕಿ ಸೇತುವೆ ನಿರ್ಮಿಸಿಕೊಟ್ಟಿದ್ದಾರೆ. ಗಿರೀಶ್ ನೈಪುಣ್ಯತೆ ಅದೆಷ್ಟು ಜನಪ್ರಿಯವಾಗಿದೆ ಎಂದರೆ, ಈಗ ಸೇನೆ ಸಹ ಬುಲಾವ್ ನೀಡಿದೆ. ಜಮ್ಮು ಕಾಶ್ಮೀರದ ಪೂಂಛ್ ಬಳಿ ತೂಗು ಸೇತುವೆ ನಿರ್ಮಿಸಿಕೊಡಿ ಎಂದು ಸೇನಾಧಿಕಾರಿಗಳು ಪತ್ರ ಬರೆದಿದ್ದಾರೆ. ಪ್ರತಿ ಗ್ರಾಮದ ಪ್ರತಿ ವ್ಯಕ್ತಿಯೂ ತೂಗು ಸೇತುವೆಯ ತಂತ್ರಜ್ಞಾನಿಯಾಗಿ ರೂಪುಗೊಳ್ಳಬೇಕು ಎನ್ನುವುದು ಗಿರೀಶ್ರ ಆಶಯ.

click me!