
ಉತ್ತಮ ಪ್ರಜೆಗಳಾಗಬೇಕೆಂದರೆ ಉತ್ತಮ ಶಿಕ್ಷಣ ಸಿಗಬೇಕು. ಶಿಕ್ಷಣ ಸಿಕ್ಕರೂ ಇಂದಿಗೂ ಅನೇಕ ಬಡ ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ. ಆದರೆ, ಒಬ್ಬ ಶಿಕ್ಷಕ ತನ್ನೆಲ್ಲಾ ತನುಮನಧನವನ್ನು ಶಿಕ್ಷಣದ ಏಳಿಗೆಗಾಗಿ, ಬಡಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಿ ಮಹಾಗುರು ಎನಿಸಿಕೊಂಡ ವಿಶಿಷ್ಟ ಉದಾಹರಣೆ ನಮ್ಮಲ್ಲಿದೆ.
ಚಕ್ರವರ್ತಿ ಶ್ರೀಧರ್ ಅಪರೂಪದ ಹಾಗೂ ಮಾದರಿ ಶಿಕ್ಷಕ. ಮೂಲತಃ ಮೈಸೂರು ಜಿಲ್ಲೆ ಟಿ.ನರಸಿಪುರದವರಾದ ಶ್ರೀಧರ್ ಅತ್ಯಂತ ಆಸಕ್ತಿಯಿಂದಲೇ ಶಿಕ್ಷಕ ವೃತ್ತಿ ಆಯ್ದುಕೊಂಡವರು. ಆರಂಭದಲ್ಲಿ ಅಕ್ಕಪಕ್ಕದವರು, ಸ್ನೇಹಿತರೆಲ್ಲ ಟೀಕೆ ಮಾಡಿದ್ದರಂತೆ. ಯಾವ ಕೆಲಸವೂ ಸಿಗಲಿಲ್ಲ, ಆದ್ದರಿಂದ ಅನಿವಾರ್ಯವಾಗಿ ಶಿಕ್ಷಕ ವೃತ್ತಿಗೆ ಬಂದಿದ್ದಾರೆ ಎಂದು ಕುಹಕವಾಡಿದ್ದರಂತೆ. ಆದರೆ, ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಂಡ ಈ ವಿಜ್ಞಾನ ಶಿಕ್ಷಕ ಇವತ್ತು ಸಾವಿರಾರು ಮಕ್ಕಳ ಬಾಳು ಬೆಳಗಿಸಿದ್ದಾರೆ.
ಸ್ವಾಮಿ ವಿವೇಕಾನಂದ ಹಾಗೂ ತಮ್ಮ ತಂದೆಯಿಂದ ಬಹಳಷ್ಟು ಪ್ರಭಾವಿತರಾಗಿದ್ದಾರೆ ಶ್ರೀಧರ್. ಆದ್ದರಿಂದ 1968ರಿಂದಲೇ ಬಡ ಮಕ್ಕಳಿಗೆ ಸಹಾಯ ಮಾಡುವ ಸೇವೆಯನ್ನು ಶುರು ಮಾಡಿಕೊಂಡರು. ತಮ್ಮ ಗಳಿಕೆಯ ಶೇ.80ರಷ್ಟು ಭಾಗವನ್ನು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಮುಡಿಪಾಗಿಟ್ಟರು. ಮದುವೆಯಾಗಿಬಿಟ್ಟರೆ ಎಲ್ಲಿ ತಮ್ಮ ಸೇವಾಕಾರ್ಯಕ್ಕೆ ಅಡಚಣೆ ಉಂಟಾಗುತ್ತದೆಯೋ ಎಂದು ಅವಿವಾಹಿತರಾಗಿಯೇ ಉಳಿದ ಶ್ರೀಧರ್ ಹುಬ್ಬಳ್ಳಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡರು.
ಶ್ರೀಧರ್, ಹುಬ್ಬಳ್ಳಿಯಲ್ಲಿ ಪ್ರತಿ ವರ್ಷ 70ಕ್ಕೂ ಹೆಚ್ಚು ಬಡ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳಲಾರಂಭಿಸಿದರು. ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಏರಿಕೆಯಾಗತೊಡಗಿತು. ಗಳಿಕೆಯ ಹಣವನ್ನೆಲ್ಲ ದಾನ ಮಾಡಿಬಿಡುತ್ತಿದ್ದರು. ಮಕ್ಕಳಿಗೆ ಸಂಜೆ,ರಾತ್ರಿ ವೇಳೆ ಉಚಿತ ಟ್ಯೂಷನ್ ಹೇಳಿಕೊಡಲಾರಂಭಿಸಿದರು. ಯಾರಿಗೆ ಕಲಿಕೆಯ ಆಸಕ್ತಿ ಇದೆಯೋ, ಯಾರ ಬಳಿ ಆಸಕ್ತಿ ಇದ್ದರೂ ಹಣದ ಕೊರತೆ ಇದೆಯೋ ಅಂತಹ ಮಕ್ಕಳನ್ನು ಅಯ್ದು ಅವರ ವಿದ್ಯಾಭ್ಯಾಸಕ್ಕೆ ನೆರವಾದರು. ಈಗ ಚಕ್ರವರ್ತಿ ಶ್ರೀಧರ್ ಶಿಷ್ಯ ಬಳಗ ಅದೆಷ್ಟು ದೊಡ್ಡದಾಗಿದೆ ಎಂದರೆ, ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲಿ ದೊಡ್ಡ ಹುದ್ದೆಗಳಲ್ಲಿದ್ದಾರೆ.
2004ರಲ್ಲಿ ಶ್ರೀಧರ್ ಸರ್ಕಾರಿ ಶಿಕ್ಷಕ ಹುದ್ದೆಯಿಂದ ನಿವೃತ್ತರಾದರು. ಆದರೂ, ತಮ್ಮ ಸೇವೆ ಮುಂದುವರಿಸಿದ್ದಾರೆ. ಪಿಂಚಣಿ ಹಣವನ್ನೂ ಮಕ್ಕಳಿಗೆ ದಾನ ಮಾಡಿಬಿಟ್ಟರು. ಇವರ ಸೇವಾಕಾಂಕ್ಷೆಯ ಫಲ ಪಡೆದಿದ್ದ ನೂರಾರು ಶಿಷ್ಯರು ಈಗ ಎಲ್ಲ ಸೇರಿ ಮಹಾಗುರು ಟ್ರಸ್ಟ್ ಎನ್ನುವ ಸಂಸ್ಥೆಯನ್ನು ಆರಂಭಿಸಿದ್ದಾರೆ. ಗುರು ಶ್ರೀಧರ್ ಹಾಕಿಕೊಟ್ಟ ದಾರಿಯಲ್ಲೇ ಈಗ ಈ ಟ್ರಸ್ಟ್ ನೂರಾರು ಬಡ ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡಿದೆ. ಅಪರೂಪದ ಹಾಗೂ ಮಾದರಿ ಶಿಕ್ಷಕರಾದ ಚಕ್ರವರ್ತಿ ಶ್ರೀಧರ್ ಭಾರದಲ್ಲಿ ಉತ್ತಮ ಪ್ರಜೆಗಳ ಒಂದು ಪೀಳಿಗೆಯನ್ನೇ ಸೃಷ್ಟಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.