ಎಚ್ಚರ : ನಿಮ್ಮ ಮೇಲಿರಲಿದೆ ಕಣ್ಣು

By Web DeskFirst Published Aug 25, 2018, 8:52 AM IST
Highlights

ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಹಾಗೂ ಕಳವು ವಾಹನಗಳ ಪತ್ತೆಗೆ ನಗರ ವ್ಯಾಪಿಯಲ್ಲಿ ಹೊಸದಾಗಿ ಪ್ರತ್ಯೇಕ 24 ತಾಸು ಕಣ್ಗಾವಲು ವ್ಯವಸ್ಥೆಯನ್ನು ಬೆಂಗಳೂರು ಪೊಲೀಸರು ಜಾರಿಗೊಳಿಸಿದ್ದಾರೆ. 

ಬೆಂಗಳೂರು : ರಾಜಧಾನಿಯ ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಿರುವ ಬೆಂಗಳೂರು ನಗರ ಪೊಲೀಸರು, ಈಗ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಹಾಗೂ ಕಳವು ವಾಹನಗಳ ಪತ್ತೆಗೆ ನಗರ ವ್ಯಾಪಿಯಲ್ಲಿ ಹೊಸದಾಗಿ ಪ್ರತ್ಯೇಕ 24 ತಾಸು ಕಣ್ಗಾವಲು ವ್ಯವಸ್ಥೆ ಜಾರಿಗೊಳಿಸಿದ್ದಾರೆ. 

ನಗರದ ಪ್ರಮುಖ ರಸ್ತೆಗಳು, ಮೆಟ್ರೋ, ಮಾಲ್ ಗಳು, ರೈಲ್ವೆ ಹಾಗೂ ಬಸ್ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಪೊಲೀಸರು ಕಣ್ಣಿಡಲಿದ್ದು, ಇದಕ್ಕಾಗಿ ಮುಖ ಚಹರೆ ಪತ್ತೆ ಸಾಧಕ (ಫೆಶಿಯಲ್ ರೆಕಗ್ನೇಶನ್ ಸಿಸ್ಟಮ್-ಎಫ್‌ಆರ್‌ಎಸ್) ಹಾಗೂ ವಾಹನಗಳ ನೋಂದಣಿ ಫಲಕ ಪತ್ತೆ ಸಾಧಕ (ಅಟೋಮೆಟಿಕ್ ನಂಬರ್ ಪ್ಲೇಟ್ ರೆಕಗ್ನೇಶನ್ ಸಿಸ್ಟಮ್- ಎಎನ್‌ಆರ್‌ಪಿ ) ಸಾಫ್ಟ್‌ವೇರ್ ಅಭಿವೃದ್ಧಿ ಪಡಿಸಿ ಸಿಸಿಟಿವಿ ಕ್ಯಾಮೆರಾಗಳಿಗೆ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಎಫ್‌ಆರ್‌ಎಸ್ ಹಾಗೂ ಎಎನ್‌ಆರ್‌ಪಿ ಕ್ಯಾಮೆರಾಗಳು, ನಗರ ಪೊಲೀಸ್ ಆಯುಕ್ತ ಕಚೇರಿಯ ಕಮಾಂಡೋ ಸೆಂಟರ್‌ಗೆ ನೇರ ಸಂಪರ್ಕ ಕಲ್ಪಿಸಲಾಗುತ್ತದೆ. ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ಕ್ಯಾಮೆರಾ ಕಣ್ಣಿಗೆ ಬಿದ್ದ ತಕ್ಷಣವೇ ಆತನ ಕುರಿತು ಮಾಹಿತಿ ಲಭ್ಯವಾಗಲಿದೆ. ಅದೇ ರೀತಿ ಕಳವು ವಾಹನಗಳ ಪತ್ತೆಗೆ ಎಎನ್‌ಆರ್‌ಪಿ ನೆರವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ. ಈಗಾಗಲೇ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಸುಮಾರು 600 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗ ಹೊಸದಾಗಿ ಎಫ್‌ಆರ್‌ಎಸ್ ಮತ್ತು ಎಎನ್‌ಆರ್‌ಪಿ ಕ್ಯಾಮೆರಾಗಳ ಅಳವಡಿಸಲಾಗುತ್ತದೆ. ಈಗ ಅವುಗಳನ್ನು ಮೊದಲ ಹಂತದಲ್ಲಿ ನಗರದ ೧೫ ಕಡೆ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. 

click me!