ಗುಜರಾತ್‌ ಗಲಭೆ ‘ಮುಖ’ಗಳೀಗ ದೋಸ್ತಿ!

By Kannadaprabha News  |  First Published Sep 11, 2019, 8:11 AM IST

17 ವರ್ಷಗಳ ಹಿಂದೆ ನಡೆದ  ಗುಜರಾತ್ ಗಲಭೆಯ ಪ್ರತಿಬಿಂಬಗಳೆನಿಸಿದ್ದ ಪಾರ್ಮರ್‌ ಮತ್ತು ಅನ್ಸಾರಿ ಇದೀಗ ಸ್ನೇಹಿತರು. ಕಾಲಚಕ್ರ ಉರುಳಿದಂತೆ ಇವರಿಬ್ಬರೂ ದ್ವೇಷ ಮರೆತು ತಮ್ಮ ಜೀವನದ ಹಾದಿ ಕಂಡುಕೊಂಡಿದ್ದಾರೆ. 


ಅಹಮದಾಬಾದ್‌ [ಸೆ.11] : 2002ರ ಗುಜರಾತ್‌ ಗಲಭೆಯ ವೇಳೆ ಕೈಯಲ್ಲಿ ಕಬ್ಬಿಣದ ರಾಡ್‌ ಝಳಪಿಸಿದ್ದ ಅಶೋಕ್‌ ಪಾರ್ಮರ್‌ ಮತ್ತು ಗಲಭೆ ವೇಳೆ ಅಸಹಾಯಕತೆಯಲ್ಲಿ ಕೈಮುಗಿದು ರಕ್ಷಣೆ ಕೋರುತ್ತಿದ್ದ ಕುತುಬುದ್ದೀನ್‌ ಅನ್ಸಾರಿ ಅವರ ಎರಡು ಬೇರೆ ಬೇರೆ ಫೋಟೋಗಳು ಇಡೀ ಘಟನೆಯ ಭೀಕರತೆಯನ್ನು ಇಡೀ ದೇಶದ ಮುಂದಿಟ್ಟಿದ್ದವು. ಆಗ ನಡೆದ ಹಿಂಸಾಚಾರ ಇಡೀ ದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಿಸಿತ್ತು.

ಅಚ್ಚರಿಯ ವಿಷಯವೆಂದರೆ 17 ವರ್ಷಗಳ ಹಿಂದೆ ನಡೆದ ಘಟನೆಯ ಪ್ರತಿಬಿಂಬಗಳೆನಿಸಿದ್ದ ಪಾರ್ಮರ್‌ ಮತ್ತು ಅನ್ಸಾರಿ ಇದೀಗ ಸ್ನೇಹಿತರು. ಕಾಲಚಕ್ರ ಉರುಳಿದಂತೆ ಇವರಿಬ್ಬರೂ ದ್ವೇಷ ಮರೆತು ತಮ್ಮ ಜೀವನದ ಹಾದಿ ಕಂಡುಕೊಂಡಿದ್ದಾರೆ. ಅಷ್ಟೇ ಏಕೇ, ಪಾರ್ಮರ್‌ ಆರಂಭಿಸಿರುವ ಚಪ್ಪಲಿ ಅಂಗಡಿಯನ್ನು ಸ್ವತಃ ಅನ್ಸಾರಿ ಉದ್ಘಾಟಿಸುವ ಮೂಲಕ ಕೋಮು ಸೌಹಾರ್ಧತೆಗೆ ಹೊಸ ಮುನ್ನುಡಿ ಬರೆದಿದ್ದಾರೆ.

Latest Videos

undefined

ಏಕತೆಯ ಮಾತು:  ಗಲಭೆಯಿಂದಾಗಿ ತನ್ನ ಜೀವನದ ಮೇಲೆ ಉಂಟಾದ ನೋವಿನಿಂದ ಅಸಹಾಯಕ ಸ್ಥಿತಿಗೆ ತಲುಪಿದ್ದ ಅಶೋಮ್‌ ಪಾರ್ಮರ್‌ ಕಬ್ಬಿಣದ ರಾಡ್‌ ಝಳಪಿಸಿದ್ದರು. ಇದನ್ನು ಛಾಯಾಗ್ರಾಹಕರೊಬ್ಬರು ಸೆರೆಹಿಡಿದಿದ್ದರು. ಆ ಫೋಟೋ ಭಾರೀ ವೈರಲ್‌ ಆಗಿತ್ತು. ಆದೇ ಪಾರ್ಮರ್‌ ಇದೀಗ ಅಹಮದಾಬಾದ್‌ನಲ್ಲಿ ಚಪ್ಪಲಿ ಅಂಗಡಿಯೊಂದನ್ನು ತೆರೆದಿದ್ದಾರೆ. ತಮ್ಮ ಚಪ್ಪಲಿ ಅಂಗಡಿಗೆ ‘ಏಕತಾ ಚಪ್ಪಲ್‌ ಶಾಪ್‌’ ಎಂದು ಹೆಸರಿಟ್ಟಿದ್ದಾರೆ. ಇದರ ಉದ್ಘಾಟನೆಗೆ ಅನ್ಸಾರಿಯನ್ನು ಆಹ್ವಾನಿಸಿದ್ದರು. ಶುಕ್ರವಾರದಂದು ಅಲಹಾಬಾದ್‌ ನಗರದಲ್ಲಿರುವ ದಿಲ್ಲಿ ದರ್ವಾಜಾ ಪ್ರದೇಶದಲ್ಲಿ ಇಬ್ಬರೂ ಒಟ್ಟಾಗಿ ಅಂಗಡಿ ಉದ್ಘಾಟಿಸಿದ್ದು, ಎಲ್ಲರ ಗಮನ ಸೆಳೆದಿದೆ. .

‘ನಾವು ಮಾನವರು ಮತ್ತು ಪರಸ್ಪರರ ಧರ್ಮವನ್ನು ಗೌರವಿಸುತ್ತೇವೆ ಎಂದು ಜಗತ್ತಿಗೆ ಸಾರಲು ನಾವು ಬಯಸಿದ್ದೇವೆ. ಈ ಹಿಂದೆ ಅಹಮದಾಬಾದ್‌ ಕೋಮು ಗಲಭೆಯಿಂದ ಕುಖ್ಯಾತಿಗಳಿಸಿತ್ತು. ಈಗ ಅದು ಹಿಂದು ಮುಸ್ಲಿಂ ಏಕತೆಯ ಸಂಕೇತದ ಗುರುತಾಗಿದೆ. ನಮ್ಮಲ್ಲಿ ಯಾರಿಗೂ ಹಿಂಸೆ ಬೇಕಾಗಿಲ್ಲ ಎಂದು ಪಾರ್ಮರ್‌ ಹೇಳಿದ್ದಾರೆ.

ಪಾರ್ಮರ್‌ ಈಗ ತಮ್ಮ ಜೀವನ ನಿರ್ವಹಣೆಗೆ ಶೂ ರಿಪೇರಿ ಕೆಲಸ ಮಾಡುತ್ತಿದ್ದಾರೆ. ಕೇರಳ ಸಿಪಿಎಂ ಘಟಕ ಒದಗಿಸಿದ ಹಣಕಾಸು ನೆರವಿನಿಂದ ತಮ್ಮದೇ ಆದ ಚಪ್ಪಲಿ ಅಂಗಡಿಯೊಂದನ್ನು ತೆರೆದಿದ್ದಾರೆ. ತಮ್ಮ ಚಿತ್ರವನ್ನು ಸೆರೆ ಹಿಡಿದ ಸನ್ನಿವೇಶವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡ ಪಾರ್ಮರ್‌, ‘ಗೋಧ್ರಾದಲ್ಲಿ ನಡೆದ ಘಟನೆಯಿಂದ ನಾನು ಆಕ್ರೋಶಗೊಂಡಿದ್ದೆ. ನಾನೊಬ್ಬ ದಿನಗೂಲಿ ನೌಕರ, ಗಲಭೆಯಿಂದ ನನಗೆ ಏನನ್ನೂ ಗಳಿಸಲು ಸಾಧ್ಯವಾಗಿರಲಿಲ್ಲ. ಅದು ನನ್ನನ್ನು ಕೆರಳಿಸಿತ್ತು’ ಎಂದು ಪಾರ್ಮರ್‌ ಹೇಳಿದ್ದಾರೆ.

ಟ್ರಾಫಿಕ್ ಭಾರೀ ದಂಡಕ್ಕೆ ಗುಜರಾತ್ ಕಟ್ ಆಫ್... ನಮ್ಮಲ್ಲಿ ಯಾವಾಗ?

ಇನ್ನು ವೃತ್ತಿಯಲ್ಲಿ ಟೇಲರ್‌ ಆಗಿರುವ ಅನ್ಸಾರಿ, ನಾವಿಬ್ಬರೂ ಒಟ್ಟಿಗೆ ಕಾಣಸಿಕೊಳ್ಳುವುದರಿಂದ ಏಕತೆಯ ಸಂದೇಶ ಸಾರಲು ಸಾಧ್ಯ ಎಂದು ನಂಬಿದ್ದೇನೆ. ಹೀಗಾಗಿ ಅಂಗಡಿಯನ್ನು ಉದ್ಘಾಟಿಸುವ ಪ್ರಸ್ತಾವನೆಯನ್ನು ಒಪ್ಪಿಕೊಂಡೆ. ನಾವಿಬ್ಬರು ಒಳ್ಳೆಯ ಸ್ನೇಹಿತರು. ಆಗಾಗ ಭೇಟಿಯಾಗುತ್ತಿರುತ್ತೇವೆ ಎಂದು ಹೇಳಿದ್ದಾರೆ.

ಗುಜರಾತ್‌ ಗಲಭೆಯ ಭೀಕತೆಯನ್ನು ತೋರಿಸುವ ಮುಖವಾಗಿದ್ದ ಪಾರ್ಮರ್‌ ಹಾಗೂ ಅನ್ಸಾರಿ ಅವರನ್ನು ಸಾಮಾಜಿಕ ಕಾರ್ಯಕರ್ತರು 2012ರಲ್ಲಿ ಒಂದುಗೂಡಿಸಿದ್ದರು. ಅಂದಿನಿಂದ ಇವರಿಬ್ಬರೂ ಸ್ನೇಹಿತರಾಗಿದ್ದರು.

click me!