ರಾಜ್ಯದ 20 ಪ್ರವಾಸಿ ಸ್ಥಳಗಳು ಶೀಘ್ರ ವಿಶ್ವದರ್ಜೆಗೆ!

By Web DeskFirst Published Sep 11, 2019, 7:48 AM IST
Highlights

ಹಂಪಿ, ಬಾದಾಮಿ, ಮೈಸೂರು, ವಿಜಯಪುರ ವಿಶ್ವದರ್ಜೆಗೆ| ಸಿದ್ದರಾಮಯ್ಯ ಕ್ಷೇತ್ರ ಬಾದಾಮಿ ಅಭಿವೃದ್ಧಿಗೆ 25 ಕೋಟಿ ರು. ಅನುದಾನ| ಹಂಪಿ, ಮೈಸೂರು ವೀಕ್ಷಣೆಗೆ ಲಂಡನ್‌ ಮಾದರಿ 6 ಡಬಲ್‌ ಡೆಕ್ಕರ್‌ ತೆರೆದ ಬಸ್‌| 600 ಸ್ಮಾರಕ ರಕ್ಷಣೆಗೆ ಕ್ರಮ

ಕೆ. ಎಂ. ಮಂಜುನಾಥ್

ಬಳ್ಳಾರಿ[ಸೆ.11]: ರಾಜ್ಯದ ಪಾರಂಪರಿಕ ಪ್ರವಾಸಿ ತಾಣಗಳಾದ ಹಂಪಿ, ಬಾದಾಮಿ, ಮೈಸೂರು ಮತ್ತು ವಿಜಯಪುರವನ್ನು ವಿಶ್ವದರ್ಜೆಯ ಪ್ರವಾಸಿ ತಾಣಗಳನ್ನಾಗಿ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ.

ಚಾಲುಕ್ಯರ ಪರಂಪರೆಯನ್ನು ಪರಿಚಯಿಸಲು ಬಾದಾಮಿಯನ್ನು ವಿಶ್ವವಿಖ್ಯಾತ ಪ್ರವಾಸಿ ತಾಣವನ್ನಾಗಿ ಮತ್ತು ಕರಕುಶಲ ಮಾರುಕಟ್ಟೆಯನ್ನಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ ವಿಶ್ವದರ್ಜೆಯ ಸೌಲಭ್ಯ ಕಲ್ಪಿಸುವುದಕ್ಕಾಗಿ 25 ಕೋಟಿ ರು. ನೀಡಲಾಗಿದೆ.

ಹಂಪಿ ಮತ್ತು ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಪ್ರವಾಸಿಗರನ್ನು ಆಕರ್ಷಿಸುವುದಕ್ಕಾಗಿ ಲಂಡನ್‌ ಬಿಗ್‌ ಬಸ್‌ ಮಾದರಿಯಲ್ಲಿ ಆರು ಡಬಲ್‌ ಡೆಕ್ಕರ್‌ ತೆರೆದ ಬಸ್‌ಗಳನ್ನು ಕೆಎಸ್‌ಟಿಡಿಸಿ ವತಿಯಿಂದ ಆರಂಭಿಸುವುದಕ್ಕಾಗಿ ಐದು ಕೋಟಿ ರು. ಅನುದಾನ ಒದಗಿಸಲಾಗಿದೆ. ರಾಜ್ಯದ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸುವುದಕ್ಕಾಗಿ ‘ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ’ ಆಯೋಜಿಸಲು ಎರಡು ಕೋಟಿ ರು.ಗಳನ್ನು ಒದಗಿಸುತ್ತಿದೆ.

ಐತಿಹಾಸಿಕ ಹಂಪಿ ಪ್ರವಾಸಿ ತಾಣದಲ್ಲಿ ‘ಹಂಪಿ ವ್ಯಾಖ್ಯಾನ ಕೇಂದ್ರ’ ಸ್ಥಾಪನೆ, ವಿಜಯಪುರ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ‘ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರ’ ಸ್ಥಾಪನೆಗಾಗಿ ತಲಾ ಒಂದು ಕೋಟಿ ರು. ಅನುದಾನ ನೀಡಲಾಗುತ್ತಿದೆ.

ಪ್ರವಾಸೋದ್ಯಮ ಇಲಾಖೆಯ ಒಟ್ಟು 834 ಸಂರಕ್ಷಿತ ಸ್ಮಾರಕಗಳಲ್ಲಿ 600 ಸ್ಮಾರಕಗಳನ್ನು ಮುಂದಿನ ಐದು ವರ್ಷಗಳಲ್ಲಿ ಸಮೀಕ್ಷೆ ಮಾಡುವುದರೊಂದಿಗೆ ಸ್ಮಾರಕಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಪಣಂಬೂರು ಮತ್ತು ಸಸಿಹಿತ್ಲುವಿನಲ್ಲಿ ಕಡಲ ತೀರದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಏಳು ಕೋಟಿ ರು. ಅನುದಾನ ನೀಡಿದೆ.

---

ತಜ್ಞರ ಅಭಿಪ್ರಾಯ

ಪಾರಂಪರಿಕ ಪ್ರವಾಸಿ ತಾಣಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದು ಶ್ಲಾಘನೀಯ. ಹೊಸ ಪ್ರವಾಸಿ ತಾಣಗಳ ಸೃಷ್ಟಿಗಿಂತ ನಾಡಿನ ಗತವೈಭವವನ್ನು ಸಾರುವ ತಾಣಗಳಿಗೆ ಗಮನ ಹರಿಸಲಾಗಿದೆ. ‘ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಪ್ರದರ್ಶನ’ದಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟುಸಹಕಾರಿಯಾಗಲಿದೆ. ಕಡಲ ತೀರದ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿರುವಂತೆಯೇ ರಾಜ್ಯದಲ್ಲಿ ನೈಸರ್ಗಿಕದತ್ತವಾದ ಸಾಕಷ್ಟುಪ್ರದೇಶಗಳಿವೆ. ಕೊಡಗು, ಚಿಕ್ಕಮಗಳೂರು, ಮಲೆನಾಡು ಮಾತ್ರವಲ್ಲದೆ, ಉತ್ತರ ಕರ್ನಾಟಕದ ಹೊಸ ಸ್ಥಳಗಳ ಅಭಿವೃದ್ಧಿಗೆ ದೂರದೃಷ್ಟಿವಹಿಸಬೇಕಿತ್ತು.

- ಟಿ.ಎನ್‌. ನಾರಾಯಣ, ಜಲಧಾಮ ರೆಸಾರ್ಟ್‌

Close

click me!